ಪ್ಯಾಲೆಸ್ತೈನ್ ನ ಬಂಡುಕೋರರು ಒತ್ತೆಯಾಳು ಬಿಡುಗಡೆ ಮಾಡುವವರೆಗೂ ಗಾಜಾಕ್ಕೆ ನೀರು, ವಿದ್ಯುತ್ ಸೇರಿದಂತೆ ಮತ್ತಿತರ ಅಗತ್ಯ ಮೂಲಸೌಕರ್ಯ ಒದಗಿಸುವುದಿಲ್ಲ ಹೀಗೆ ಹೇಳಿಕೆ ಕೊಟ್ಟಿದ್ದಷ್ಟೇ ಅಲ್ಲ, ಇಸ್ರೇಲ್ ಅದನ್ನು ಜಾರಿಯನ್ನೂ ಮಾಡಿದೆ. ಅಪಹರಣಕ್ಕೊಳಗಾದ ಇಸ್ರೇಲಿಗರು ಮನೆಗೆ ಮರಳುವವರೆಗೂ ಗಾಜಾಕ್ಕೆ ವಿದ್ಯುತ್, ನೀರು ಒದಗಿಸುವುದಿಲ್ಲ, ಇಂಧನ ಟ್ರಕ್ ಪ್ರವೇಶಿಸುವುದಿಲ್ಲ ಎಂದಿದ್ದ ಇಸ್ರೇಲ್, ಗಾಜಾಪಟ್ಟಿಗೆ ಅಗತ್ಯವಾದ ಯಾವುದನ್ನೂ ಪೂರೈಕೆ ಮಾಡುತ್ತಿಲ್ಲ. ಗಾಜಾ ಪಟ್ಟಿ ಸಂಪೂರ್ಣ ಸೀಜ್ ಆಗಿದೆ.
ಅಷ್ಟೇ ಅಲ್ಲ, ಭೂಸೇನೆಯನ್ನೂ ನುಗ್ಗಿಸೋಕೆ ಹೊರಟಿರುವ ಇಸ್ರೇಲ್ ಸೈನ್ಯಕ್ಕೆ ದೊಡ್ಡ ಸವಾಲಾಗಿರುವ ಅಂಶಗಳೂ ಇವೆ.
ಆಹಾರ ಸ್ಟಾಕ್ ಇರಬಹುದು :
ಗಾಜಾ ಪಟ್ಟಿಯಲ್ಲಿ ಅಟ್ಯಾಕ್ ಮಾಡಿದ ಉಗ್ರರು ಪ್ಯಾರಾಗ್ಲೈಡರ್, ರಾಕೆಟ್, ಬಾಂಬು, ಗನ್ನುಗಳನ್ನಷ್ಟೇ ಇಟ್ಟುಕೊಂಡು ಅಟ್ಯಾಕ್ ಮಾಡಿಲ್ಲ.ಎಲ್ಲವನ್ನೂ ಮುಂಚಿತವಾಗಿಯೇ ಸ್ಟಾಕ್ ಇಟ್ಟುಕೊಂಡವರಿಗೆ ಆಹಾರ ಇಟ್ಟುಕೊಳ್ಳಬೇಕು ಎನ್ನುವ ಐಡಿಯಾ ಇರುವುದಿಲ್ಲವೇ? ಇಸ್ರೇಲ್ ನವರು ಇಂತಹ ದಾಳಿ ಮಾಡುತ್ತಾರೆಂಬ ನಿರೀಕ್ಷೆ ಇರುವುದಿಲ್ಲವೇ? ಹೀಗಾಗಿ ಕೆಲವು ದಿನ ಆಹಾರ ಸಿಗದಿದ್ದರೂ ತಡೆದುಕೊಳ್ಳೊ ಸಾಮರ್ಥ್ಯ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರಿಗೆ ಇದೆ.
ಆಸ್ಪತ್ರೆ, ಸ್ಕೂಲುಗಳ ಕೆಳಗೆ ಉಗ್ರರ ಶೆಲ್ಟರ್ :
ಯುದ್ಧ ಶುರುವಾದರೆ ಅಲ್ಲೊಂದು ನಿಯಮ ಅನ್ವಯ ಆಗುತ್ತದೆ. ಆ ನಿಯಮಗಳ ಪ್ರಕಾರ ಸ್ಕೂಲು, ಆಸ್ಪತ್ರೆ ಸೇರಿದಂತೆ ಕೆಲವು ಕಡೆ ದಾಳಿ ಮಾಡುವಂತಿಲ್ಲ. ಹೀಗಾಗಿಯೇ ಆಸ್ಪತ್ರೆ, ಸ್ಕೂಲುಗಳ ಕೆಳಗೆ ಉಗ್ರರು ಶೆಲ್ಟರ್ ಮಾಡಿಕೊಂಡಿದ್ದಾರೆ.
ಕಿರಿದಾದ ರಸ್ತೆಗಳಲ್ಲಿ ಭೂಸೇನೆ ದಾಳಿ ಅಪಾಯಕಾರಿ :
ಇನ್ನು ಗಾಜಾಪಟ್ಟಿಯಲ್ಲಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 5ರಿಂದ 6 ಸಾವಿರ ಜನ ವಾಸ ಮಾಡುತ್ತಾರೆ. ಚಿಕ್ಕ ಚಿಕ್ಕ ರಸ್ತೆಗಳು. ಚಿಕ್ಕ ಚಿಕ್ಕ ಮನೆಗಳು. ಭೂಸೇನೆ ನುಗ್ಗಿದಾಗ ಅಂತಹ ಕಿರಿದಾದ ರಸ್ತೆಗಳಲ್ಲಿ ಎಲ್ಲಿ ಬೇಕೆಂದರೆ ಅಲ್ಲಿ, ಯಾವ ರೀತಿಯಲ್ಲಿ ಬೇಕಾದರೂ ಅಟ್ಯಾಕ್ ಜರುಗಬಹುದು. ಪೆಟ್ರೋಲ್ ಬಾಂಬ್, ಮಿನಿ ಲಾಂಚರ್, ಮೆಷಿನ್ ಗನ್ನುಗಳ ದಾಳಿ.. ಹೀಗೆ ಏನು ಬೇಕಾದರೂ ಮಾಡಬಹುದು.
ನಾಗರಿಕರೇ ಉಗ್ರರ ರಕ್ಷಾ ಕವಚ :
ಹೌದು, ದಾಳಿ ಮಾಡುವ ಮುನ್ನವೇ ಇಸ್ರೇಲ್ ಎಚ್ಚರಿಕೆ ಕೊಟ್ಟಿದ್ದರೂ, ನಾಗರಿಕರು ಗಾಜಾ ಪಟ್ಟಿ ಬಿಟ್ಟು ಹೋಗಿಲ್ಲ. ಏಕೆಂದರೆ ಇದೇ ನಾಗರಿಕರು ಉಗ್ರರ ರಕ್ಷಾಕವಚ. ಇಸ್ರೇಲಿನವರು ನುಗ್ಗಿದ್ದೇ ಆದರೆ, ಇದೇ ನಾಗರಿಕರನ್ನು ಮುಂದಿಟ್ಟುಕೊಂಡೇ ಜೀವ ಉಳಿಸಿಕೊಳ್ಳೋದು ಉಗ್ರರ ಸಂಚು. ನಾಗರಿಕರು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು, ಮಕ್ಕಳನ್ನು ಗುರಾಣಿಯಾಗಿ ಬಳಸುವುದು ಉಗ್ರರಿಗೆ ಹೊಸದೇನಲ್ಲ.
500 ಕಿ.ಮೀ. ಸುರಂಗ ಮಾರ್ಗ :
ಗಾಜಾಪಟ್ಟಿಯಲ್ಲಿ ನಿರ್ಮಾಣವಾಗಿರುವ ಸುರಂಗ ಮಾರ್ಗಗಳಿವೆಯಲ್ಲ, ಈ ಸುರಂಗ ಮಾರ್ಗಗಳು ಎಲ್ಲಿ ತೆರೆದುಕೊಳ್ಳುತ್ತವೆ, ಎಲ್ಲಿ ಅಂತ್ಯಗೊಳ್ಳುತ್ತವೆ ಅನ್ನೋದ್ರ ನೀಲ ನಕ್ಷೆಯೇ ಯಾರ ಬಳಿಯೂ ಇಲ್ಲ. ಗಾಜಾಪಟ್ಟಿಯಲ್ಲಿ ಸುರಂಗ ಮಾರ್ಗಗಳ ದೊಡ್ಡ ನೆಟ್ವರ್ಕ್ ಇದೆ! ಅತ್ಯಂತ ಚಿಕ್ಕ ಭೂ ಭಾಗವಾದ ಕಾರಣ, ಸುರಂಗ ಸಂಪರ್ಕ ವ್ಯವಸ್ಥೆಯನ್ನು ಗಾಜಾಪಟ್ಟಿ ಜನತೆ ಹೊಂದಿದ್ದರು. ಇದೀಗ ಈ ಸುರಂಗ ವ್ಯವಸ್ಥೆಯೇ ಉಗ್ರರಿಗೆ ವರವಾಗಿದ್ದು, ಇಸ್ರೇಲ್ ಭೂ ಸೇನೆಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. 2021ರಲ್ಲಿ ಇಸ್ರೇಲ್ ಭದ್ರತಾ ಪಡೆಗಳು ಈ ಕುರಿತಾಗಿ ಪರಿಶೀಲನೆ ನಡೆಸಿದ್ದವು. ಸುಮಾರು 100 ಕಿ. ಮೀ. ಮಾರ್ಗದ ಸುರಂಗ ಸಂಪರ್ಕ ವ್ಯವಸ್ಥೆಯನ್ನು ನಾಶಪಡಿಸಿದ್ದವು. ಆದರೆ, ಹಮಾಸ್ ಉಗ್ರ ಸಂಘಟನೆ ನಾಯಕ ಯಾಹ್ಯಾ ಸಿನ್ವಾರ್ ಪ್ರಕಾರ, ಗಾಜಾ ಪಟ್ಟಿಯಲ್ಲಿ ಸುಮಾರು 500 ಕಿ. ಮೀ. ಉದ್ದದ ಸುರಂಗ ಸಂಪರ್ಕ ವ್ಯವಸ್ಥೆ ಇದ್ಯಂತೆ. ಈ ಪೈಕಿ ಕೇವಲ ಶೇ. 5ರಷ್ಟು ಸುರಂಗ ಸಂಪರ್ಕವನ್ನು ಮಾತ್ರ 2021ರಲ್ಲಿ ಇಸ್ರೇಲ್ ಸೇನೆ ನಾಶ ಮಾಡಿತ್ತು. ಸರಳವಾಗಿ ಹೇಳಬೇಕೆಂದರೆ ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿರುವ ಒಟ್ಟು ಸುರಂಗ ಮಾರ್ಗಗಳಿಗಿಂತ ಹೆಚ್ಚು ಸುರಂಗ ಮಾರ್ಗಗಳು ಗಾಜಾ ಪಟ್ಟಿಯಲ್ಲಿವೆ.
ಇಸ್ರೇಲ್ ಭದ್ರತಾ ಪಡೆಗಳು ಗಾಜಾಪಟ್ಟಿಯ ಈ ಸುರಂಗ ಸಂಪರ್ಕವನ್ನು ಗಾಜಾ ಮೆಟ್ರೋ ಎಂದೇ ವ್ಯಂಗ್ಯವಾಡುತ್ತಾರೆ. ಈ ಸುರಂಗಗಳು ಉಗ್ರರ ಓಡಾಟ, ಶಸ್ತ್ರಾಸ್ತ್ರ ಸಾಗಾಟ ಸೇರಿದಂತೆ ರಹಸ್ಯ ಹಾಗೂ ಸುರಕ್ಷಿತ ನೆಲೆಗಳಿಗೆ ಉಗ್ರರು ಪರಾರಿ ಆಗೋದಕ್ಕೂ ನೆರವಾಗಲಿದೆ. ಈ ಸುರಂಗಗಳನ್ನು ಬಾಂಬ್ ಇಟ್ಟು ಉಡಾಯಿಸೋದೂ ಕೂಡಾ ಕಷ್ಟ. ಏಕೆಂದರೆ ಸಿಮೆಂಟ್ ಬಳಸಿ ಈ ಸುರಂಗಗಳನ್ನು ಸುಭದ್ರವಾಗಿ ನಿರ್ಮಾಣ ಮಾಡಲಾಗಿದೆ .



