ವಿಜಯೇಂದ್ರ ಅವರು ಕೂತರೂ.. ನಿಂತರೂ ತಪ್ಪು ಹುಡುಕುವ ಒಂದು ಟೀಂ ಬಿಜೆಪಿಯಲ್ಲಿದೆ. ಈ ಬಾರಿಯೂ ಅಷ್ಟೇ. ಧರ್ಮಸ್ಥಳ ಚಲೋ ಯಶಸ್ವಿಯಾಗಿದ್ದರೂ.. ಅಲ್ಲೊಂದು ತಪ್ಪು ಹುಡುಕಿದ್ದಾರೆ. ಇಷ್ಟಕ್ಕೂ ವಿಜಯೇಂದ್ರ ಮಾಡಿರುವ ತಪ್ಪು ಏನೆಂದರೆ.. ಧರ್ಮಸ್ಥಳಕ್ಕೆ ಹೋದಾಗ ಸೌಜನ್ಯ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದ್ದು ಹಾಗೂ ಕಾನೂನು ವೆಚ್ಚವನ್ನು ಭರಿಸುವ ಭರವಸೆ ಕೊಟ್ಟಿದ್ದು.
ಇದರಲ್ಲಿ ತಪ್ಪೇನಿದೆ ಎಂದರೆ.. ವಿಜಯೇಂದ್ರ ಭೇಟಿ ವೇಳೆ ಕುಸುಮಾವತಿ ಅವರ ತಾಯಿ ಬಿಜೆಪಿ ನಾಯಕರ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡರು. ಈ ವಿಡಿಯೋ ವೈರಲ್ ಆಗಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಕೆಲವು ಕಾಂಗ್ರೆಸ್ಸಿಗರು ಬಿಜೆಪಿಯನ್ನು ಟೀಕೆ ಮಾಡುವಂತಾಗಿದೆ ಎನ್ನುವುದು ಬಿಜೆಪಿಯವರ ಆರೋಪ.
ಸೌಜನ್ಯ ಮನೆಗೆ ಭೇಟಿಗೂ ಮುನ್ನ ಏನಾಯ್ತು..?
ಇದೆಲ್ಲದರ ಜೊತೆಗೆ ಕೊನೆಯ ಕ್ಷಣದಲ್ಲಿ ಸೌಜನ್ಯ ನಿವಾಸಕ್ಕೆ ಭೇಟಿ ನಿಗದಿಪಡಿಸಿದ್ದು, ಭೇಟಿಗೆ 15 ನಿಮಿಷಗಳ ಮೊದಲು ನಾಯಕರಿಗೆ ಮಾಹಿತಿ ರವಾನಿಸಿದ್ದು ಹಾಗೂ ಬಹುತೇಕ ನಾಯಕರು ಧರ್ಮಸ್ಥಳ ಬಿಟ್ಟು ಹೋಗಿದ್ದಾಗ ಸೌಜನ್ಯ ಮನೆಗೆ ಭೇಟಿ ಕೊಟ್ಟಿದ್ದು ಕೂಡಾ ಕಾರಣ. ಹಾಗೆ ನೋಡಿದರೆ.. ಈ ವಿಷಯದ ಬಗ್ಗೆ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆಯಾಗಿದ್ದು ನಿಜ. ಆದರೆ ಬಹುತೇಕ ನಾಯಕರು ಯಾವುದೇ ತೀರ್ಮಾನಕ್ಕೆ ಬಾರದೆ.. ಆಮೇಲೆ ನೋಡೋಣ ಎಂದು ಜಾರಿಕೊಂಡರಂತೆ. ಆದರೆ.. ಹೋದರೆ.. ಇಷ್ಟು ದಿನ ಯಾಕೆ ಬರಲಿಲ್ಲ ಎಂದು ಪ್ರಶ್ನೆ ಮೂಡುತ್ತದೆ. ಹೋಗದೇ ಹೋದರೆ.. ಧರ್ಮಸ್ಥಳಕ್ಕೆ ಬಂದೂ ಕೂಡಾ ಬರಲಿಲ್ಲ ಎಂಬ ಆರೋಪ ಉದ್ಭವವಾಗುತ್ತದೆ. ಈ ಪ್ರಶ್ನೆಯನ್ನು ಮುಂದಿಟ್ಟರಂತೆ ಕೆಲವು ಹಿರಿಯ ನಾಯಕರು.
ಆದರೆ.. ಪ್ರಶ್ನೆಯೇನೋ ಸರಿ. ಪರಿಹಾರ ಏನು ಎಂದಾಗ ಯಾರಲ್ಲಿಯೂ ಉತ್ತರ ಇರಲಿಲ್ಲ. ಸಮಸ್ಯೆ ಇದೆ ಎಂದು ದೂರವೇ ಉಳಿದುಕೊಂಡಿದ್ದರೆ.. ಕೆಟ್ಟ ಹೆಸರು ಇನ್ನೂ ಹೆಚ್ಚುತ್ತದೆಯೇ ಹೊರತು ಕಡಿಮೆ ಆಗಲ್ಲ. ಏನು ಮಾಡಿದರೂ ಪ್ರಮಾದ ಎನ್ನುವುದಾದರೆ ಹೋಗಿಯೇ ಬಿಡೋಣ. ಹೋಗದೇ ಇರುವುದಕ್ಕಿಂತ ಅದು ಕಡಿಮೆ ಪ್ರಮಾಣದ ಹೊಡೆತ ಎಂದು ವಿಜಯೇಂದ್ರ ಸೇರಿದಂತೆ ಕೆಲವು ನಾಯಕರು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ..ಹಿರಿಯ ನಾಯಕರು ಯಾವುದಕ್ಕೂ ಓಕೆ ಮಾಡದೆ ಕಾದು ನೋಡುವ ತಂತ್ರಗಾರಿಕೆಯ ಮೊರೆ ಹೋಗಿದ್ದಾರೆ.
ಆದರೆ ವಿಜಯೇಂದ್ರ ಸುಮ್ಮನೆ ಕುಳಿತಿಲ್ಲ. ಇನ್ನೂ ಎಷ್ಟು ದಿನ ಕಾದು ನೋಡುವುದು. ಇಷ್ಟಕ್ಕೂ ಬಿಜೆಪಿಯೇನೂ ಅಪರಾಧಿ ಸ್ಥಾನದಲ್ಲಿ ಇಲ್ಲ. ಹೆಗ್ಗಡೆಯವರೂ ಇಲ್ಲ. ಧರ್ಮಸ್ಥಳವೂ ಇಲ್ಲ. ಹೀಗಿರುವಾಗ ಕುಸುಮಾವತಿ ಅವರನ್ನು ಭೇಟಿ ಮಾಡಿ ಕಾನೂನು ವೆಚ್ಛ ಭರಿಸುವ ಮಾತು ಕೊಡೋದಾಗಿ ಹೇಳಿ ಹೊರಟುಬಿಟ್ಟಿದ್ದಾರೆ. ಎಲ್ಲರೂ ಅಡಕತ್ತರಿಯಲ್ಲಿದ್ದಂತೆ ಗೊಂದಲದಲ್ಲಿರುವ ನಾಯಕನಾಗಿ, ರಾಜ್ಯಾಧ್ಯಕ್ಷರಾಗಿ ಒಂದು ನಿರ್ಧಾರವನ್ನಂತೂ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ಸಿನ ಟೀಕೆಗೆ ಉತ್ತ ಇದೆ :
ಹೌದು, ಕಾಂಗ್ರೆಸ್ಸಿಗರು ಈ ನಡೆಯನ್ನು ಟೀಕೆ ಮಾಡುತ್ತಿರುವುದು ನಿಜ. ಆದರೆ.. ಅದಕ್ಕೆ ಎದಿರೇಟು ಕೊಡುವ ಅವಕಾಶವಂತೂ ಇದೆ. ಬಲವಾಗಿಯೂ ಇದೆ. ಏಕೆಂದರೆ ಇಡೀ ಹೋರಾಟ ನಡೆಯುತ್ತಿರುವುದೇ ಜಸ್ಟಿಸ್ ಫಾರ್ ಸೌಜನ್ಯ ಹೆಸರಿನಲ್ಲಿ. ಆರೋಪಿ ಸಂತೋಷ್ ರಾವ್ ಖುಲಾಸೆಯಾದ ದಿನದಿಂದ ಹೆಗ್ಗಡೆಯವರ ಕುಟುಂಬದ ಮೇಲೆ ಸಾಕ್ಷಿ ಇದೆ ಎಂದು ಮೀಡಿಯಾಗಳಲ್ಲಿ ಆರೋಪ ಮಾಡುಲಾಗುತ್ತಿದೆಯೇ ಹೊರತು, ಕಾನೂನು ಪ್ರಕ್ರಿಯೆ ನಡೆದಿಲ್ಲ. ಸಾಕ್ಷಿ ಇದೆ ಎಂದು ಹೇಳುತ್ತಿರುವವರು ಇದೂವರೆಗೆ ಸಾಕ್ಷಿಯನ್ನು ಕೊಟ್ಟಿಲ್ಲ. ತೋರಿಸಿಲ್ಲ. ಅದು ಆಗಬೇಕು ಎಂದರೆ ಕುಸುಮಾವತಿ ಅವರ ಸಹಿಯಿಂದಲೇ ಆಗಬೇಕು. ಹೀಗಿರುವಾಗ ವಿಜಯೇಂದ್ರ ಅವರು ಮಾಡಿದ್ರಲ್ಲಿ ಏನು ತಪ್ಪಿದೆ ಎನ್ನುವ ಅಸ್ತ್ರ ಇದೆ.
ಆದರೆ ಬಿಜೆಪಿಯಲ್ಲಿರುವ ವಿಜಯೇಂದ್ರ ವಿರೋಧಿಗಳಿಗೆ ಆ ಅಸ್ತ್ರ ಬೇಕಿಲ್ಲ.



