ರಾಜ್ಯಾದ್ಯಂತ ಈಗ ಚರ್ಚೆಯಲ್ಲಿರುವುದು ಮೂರೇ ಮೂರು ವಿವಾದ. ಒಂದು ವಕ್ಫ್ ಮಂಡಳಿ ನೋಟಿಸ್ ವಿವಾದ ಮತ್ತು ಕುಮಾರಸ್ವಾಮಿ ಅವರನ್ನು ಕರಿಯಾ ಎಂದು ಕರೆದಿರುವ ವಿವಾದ. ಇದರ ಮಧ್ಯೆ ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲೂ ಮುಸ್ಲಿಮರಿಗೆ ಶೇ.೪ರಷ್ಟು ಮೀಸಲಾತಿ ಬೇಕು ಎಂದು ಬರೆದ ಪತ್ರವೂ ಸೇರಿಕೊಂಡಿದೆ. ಆದರೆ ಜಮೀರ್ ಅಹ್ಮದ್ ಅವರನ್ನು ಸಿದ್ದರಾಮಯ್ಯ ಸರ್ಕಾರದ ಯಾವೊಬ್ಬ ಸಚಿವರೂ ಬಿಟ್ಟುಕೊಡ್ತಿಲ್ಲ. ಮುಖ್ಯಮಂತ್ರಿಯಾಗಲೀ, ಉಪಮುಖ್ಯಮಂತ್ರಿಯಾಗಲೀ ಬಿಟ್ಟು ಕೊಡುವ ಮಾತೇ ಇಲ್ಲ. ಶಾಸಕರೂ ಅಷ್ಟೇ, ಜಮೀರ್ ವಿರುದ್ಧ ಒಂದೇ ಒಂದು ಮಾತು ಆಡಲ್ಲ. ಏಕೆ..?
ರೈತರ ಕೆಂಗಣ್ಣು ಬಿದ್ದರೂ ಜಮೀರ್ ಅಹ್ಮದ್ ಸೇಫ್..!
ಹಾಗೆ ನೋಡಿದರೆ ವಕ್ಫ್ ಮಂಡಳಿ ನೋಟಿಸ್ ವಿವಾದ ರಾಜ್ಯದ ೨೦+ ಜಿಲ್ಲೆಗಳಲ್ಲಿ ಕಿಡಿ ಹೊತ್ತಿಸಿದೆ. ಬಿಜೆಪಿಯವರಿಗೆ ಉಪಚುನಾವಣೆ ಹೊತ್ತಿನಲ್ಲಿ ಸಿಕ್ಕ ಪ್ರಬಲ ಅಸ್ತ್ರ ವಕ್ಫ್ ಮಂಡಳಿ ಕೊಟ್ಟಿದ್ದ ನೋಟಿಸ್. ಇದು ನೇರವಾಗಿ ರೈತರಿಗೆ ತಟ್ಟಿರುವ ಬಿಸಿ. ಇದು ವಿವಾದವಾಗಿ, ರಾಷ್ಟ್ರಮಟ್ಟದ ಚರ್ಚೆಯಾದ ಮೇಲೆ ನೋಟಿಸ್ ವಾಪಸ್ ತೆಗೆದುಕೊಂಡಿರುವ ಸರ್ಕಾರ, ನೋಟಿಫಿಕೇಷನ್ ಅನ್ನೇನೂ ರದ್ದು ಮಾಡಿಲ್ಲ. ಕೇವಲ ಕೊಟ್ಟಿದ್ದ ನೋಟಿಸ್ ವಾಪಸ್ ಪಡೆದುಕೊಂಡಿದೆ. ಕೆಲವು ಭೂಮಿಗಳಲ್ಲಿ ಪಹಣಿ ದಾಖಲೆಗಳೂ ಮತ್ತೆ ಹಳೆಯ ದಾಖಲಾತಿಗೆ ವಾಪಸ್ ಬಂದಿವೆ. ಆದರೆ, ರೈತರ ಮೇಲೆ ತೂಗುತ್ತಿರುವ ವಕ್ಫ್ ತೂಗುಕತ್ತಿ ದೂರವಾಗಿಲ್ಲ. ಹೀಗೆ ರೈತರನ್ನೇ ಎದುರು ಹಾಕಿಕೊಂಡರೂ, ಜಮೀರ್ ಅಹ್ಮದ್ ಸೇಫ್.
ಗುತ್ತಿಗೆ ಮೀಸಲಾತಿಯಲ್ಲೂ ಜಮೀರ್ ಅಹ್ಮದ್ ಸೇಫ್..!
ಇನ್ನು ಸರ್ಕಾರಿ ಕಾಮಗಾರಿಗಳ ಗುತ್ತಿಗೆ ವಿಷಯದಲ್ಲೂ ಅಷ್ಟೇ, ಮೀಸಲಾತಿ ಫಿಕ್ಸ್ ಮಾಡಿದರೆ ಆಗಲೂ ಸಮಸ್ಯೆಯೇ. ಏಕೆಂದರೆ ಅದರ ಹೊಡೆತ ಬೀಳುವುದು ದಲಿತರು ಹಾಗೂ ರೆಗ್ಯುಲರ್ ಗುತ್ತಿಗೆದಾರರಿಗೆ. ದಲಿತರಿಗೆ ಗುತ್ತಿಗೆಯಲ್ಲೂ ಮೀಸಲಾತಿ ಇದೆ. ಈ ವಿಷಯದಲ್ಲೂ ಜಮೀರ್ ಅಹ್ಮದ್, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಆ ಪತ್ರಕ್ಕೆ ಮುಸ್ಲಿಂ ಶಾಸಕರೆಲ್ಲ ಸಹಿ ಹಾಕಿದ್ದೂ ಆಗಿದೆ. ಸಿಎಂ ಸಿದ್ದರಾಮಯ್ಯ ಪರಿಶೀಲಿಸಿ ಎಂದು ಹಿಂಬರಹ ಕೊಟ್ಟಿದ್ದೂ ಆಗಿದೆ. ಆದರೆ ಈ ವಿಷಯದಲ್ಲೂ ಅಷ್ಟೇ. ಸಿದ್ದರಾಮಯ್ಯ ಸುದ್ದಿಯೇ ಸುಳ್ಳು ಎಂದು ತಾವು ಬಾಣ ಎದುರಿಸುತ್ತಿದ್ದಾರೆಯೇ ಹೊರತು, ಜಮೀರ್ ಅಹ್ಮದ್ ಅವರನ್ನು ಸೇಫ್ ಆಗಿಯೇ ಇಟ್ಟಿದ್ದಾರೆ.
ಕುಮಾರಸ್ವಾಮಿ ಅವರನ್ನು ಕರಿಯಾ ಎಂದರೂ ಸೇಫ್..!
ಕುಮಾರಸ್ವಾಮಿ ವಿರುದ್ಧ ಜಮೀರ್ ಅಹ್ಮದ್ ಈ ರೀತಿ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಕುಮಾರಸ್ವಾಮಿ ಅವರದ್ದು ಖಾಕಿ ಚಡ್ಡಿ ಎಂದು ಈಗ ಗೊತ್ತಾಗಿದೆ ಎಂದಿದ್ದ ಜಮೀರ್, ನಂತರ ಕುಮಾರಸ್ವಾಮಿ ಸಂಪುಟದಲ್ಲಿಯೇ ಸಚಿವರಾಗಿದ್ದರು. ಆಗ ಕೂಡಾ ಸಿದ್ದರಾಮಯ್ಯ ಜಮೀರ್ ಬೆನ್ನಿಗೆ ನಿಂತಿದ್ದರು. ಈಗ ಕುಮಾರಸ್ವಾಮಿ ಅವರನ್ನು ಕರಿಯಾ ಎಮದು ಕರೆದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಒಕ್ಕಲಿಗರ ಮಹಾಸಭಾ ಜಮೀರ್ ರಾಜೀನಾಮೆಗೆ ಆಗ್ರಹಿಸಿದೆ. ಕ್ಷಮೆ ಕೇಳೋಕೆ ಸಿದ್ಧ ಎನ್ನುತ್ತಿರುವ ಜಮೀರ್, ಕ್ಷಮಿಸಿಬಿಡಿ ಎಂದೇನೂ ಕೇಳಿಲ್ಲ. ಆದರೆ ಎಲ್ಲ ಕಡೆ ಜಮೀರ್ ಕ್ಷಮೆ ಯಾಚನೆ ಎಂದೇ ಬರುತ್ತಿದೆ.
ವಿಷಯವೇನು ಗೊತ್ತೇ.. ಪ್ರತಿಪಕ್ಷಗಳು, ಒಕ್ಕಲಿಗರ ಮಹಾಸಭಾ, ಒಕ್ಕಲಿಗ ಸಂಘಟನೆಗಳು ನೇರವಾಗಿ ಕೆಂಗಣ್ಣು ಬೀರಿದ್ದರೂ ಜಮೀರ್ ಅಹ್ಮದ್ ಸೇಫ್. ಅವರಿಗೆ ಸಿದ್ದರಾಮಯ್ಯ ರಕ್ಷಣೆ ಇದೆ.
ಜಮೀರ್ ಪ್ರಬಲ ನಾಯಕ ಎನ್ನುವುದೇ ಕಾರಣ..!
ಜಮೀರ್ ಅಹ್ಮದ್ ಅವರನ್ನು ಚಾಮರಾಜನಗರಕ್ಕೆ ಮಾತ್ರವೇ ಸೀಮಿತ ನಾಯಕರಾಗಿ ಉಳಿದಿಲ್ಲ. ಜಮೀರ್ ಅಹ್ಮದ್, ರಾಜ್ಯದ ಎಲ್ಲ ಮುಸ್ಲಿಂ ಸಮುದಾಯದಲ್ಲಿ ಜನಪ್ರಿಯ ನಾಯಕ. ಇಡೀ ಮುಸ್ಲಿಂ ಸಮುದಾಯದ ಮುಖಂಡರೆಲ್ಲ ಜಮೀರ್ ಮಾತು ಕೇಳುತ್ತಾರೆ. ಜಮೀರ್ ಹೇಳಿದ ಪಕ್ಷಕ್ಕೆ ವೋಟು ಹಾಕುತ್ತಾರೆ. ರಾಜ್ಯದಲ್ಲಿ ಮುಸ್ಲಿಮರು ನಿರ್ಣಾಯಕರಾಗಿರುವ ಕ್ಷೇತ್ರಗಳು ಸರಿಸುಮಾರು 50 ಕ್ಷೇತ್ರಗಳಿವೆ. 50 ಕ್ಷೇತ್ರಗಳಷ್ಟೇ ಅಲ್ಲ, ರಾಜ್ಯದ ೨೨೪ ಕ್ಷೇತ್ರಗಳಲ್ಲಿಯೂ ಅಷ್ಟೇ, ಮುಸ್ಲಿಮರು ಜಮೀರ್ ಹಾಕಿದ ಗೆರೆ ದಾಟವುದಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಅವರಾಗಲೀ, ಡಿಕೆ ಶಿವಕುಮಾರ್ ಆಗಲೀ, ಜಮೀರ್ ವಿಚಾರದಲ್ಲಿ ವಿರುದ್ಧ ಮಾತನಾಡುವುದಿಲ್ಲ.



