ಕನ್ನಡದ ಇತ್ತೀಚಿನ ಸೆನ್ಸೇಷನ್, ದೇಶದೆಲ್ಲೆಡೆ ಸಂಚಲನ ಮೂಡಿಸಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ಪ್ರಶಸ್ತಿಗಳೂ ಒಲಿದು ಬಂದಿವೆ. ಎಲ್ಲಕ್ಕಿಂತ ಮಿಗಿಲಾಗಿ ಲಕ್ಷಾಂತರ ಹೃದಯಗಳನ್ನು ಗೆದ್ದಿರುವ ರಿಷಬ್ ಶೆಟ್ಟಿಯವರಿಗೆ ಅಮೆರಿಕದ ವಾಷಿಂಗ್ಟನ್‍ನಲ್ಲಿರುವ ಪ್ಯಾರಾಮೌಂಟ್ ಥಿಯೇಟರಿನಲ್ಲಿ ವಿಶ್ವ ಶ್ರೇಷ್ಟ ಕನ್ನಡಿಗ 2023 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಾಷಿಂಗ್ಟನ್ನ ಸಿಯಾಟಲ್ನಲ್ಲಿರುವ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ರಿಷಬ್ ಶೆಟ್ಟಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಸೆನೆಟರ್ ಡಾ. ದೆರೀಕ್ ಟ್ರಸ್ಫರ್ಡ್ ಹಾಜರಿ ಹಾಕಿದ್ದರು. ಈ ಕಾರ್ಯಕ್ರಮದಲ್ಲಿ 1800ಕ್ಕೂ ಹೆಚ್ಚು ಕನ್ನಡಿಗರು ಭಾಗಿಯಾಗಿದ್ದರು.
ವಾಷಿಂಗ್ಟನ್ನ ಸಿಯಾಟಲ್ ನಗರದ ಪ್ಯಾರಾಮೌಂಟ್ ಥಿಯೇಟರ್ಗೆ 95 ವರ್ಷಗಳ ಇತಿಹಾಸ ಇದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿ ಹಲವು ಗಣ್ಯರು ಭಾಷಣ ಮಾಡಿರುವ ವೇದಿಕೆ ಇದು. ಅನೇಕ ಹೆಸರಾಂತ ಕಲಾವಿದರ ಕಾರ್ಯಕ್ರಮಗಳು ಇಲ್ಲಿ ನಡೆದಿದೆ ಅನ್ನೋದು ವಿಶೇಷ. ಇಂಥ ಥಿಯೇಟರ್ನಲ್ಲಿ ರಿಷಬ್ ಶೆಟ್ಟಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪಡೆದಿರೋದು ವಿಶೇಷಚಿನ್ನದ ಲೇಪನ ಹೊಂದಿರುವ ಈ ಟ್ರೋಫಿ, ಸುಮಾರು ಐದು ಕೆಜಿ ತೂಕವಿದೆ.
ನಾನು ಪಡೆದ ಅತಿದೊಡ್ಡ ಪ್ರಶಸ್ತಿ ಎಂದರೆ ಕನ್ನಡಿಗರು. ಇದೇ ಥಿಯೇಟರಿನಲ್ಲಿ ನಮ್ಮ ಚಿತ್ರ 48 ದಿನ ಪ್ರದರ್ಶನ ಕಂಡಿದೆ. ಅಷ್ಟು ಅವಧಿ ಶೋ ಕಂಡ ಮೊದಲ ಕನ್ನಡ ಸಿನಿಮಾ ಎಂಬ ಹಿರಿಮೆಗೆ ಕಾಂತಾರ ಪಾತ್ರವಾಗಿದೆ ಎಂದ ರಿಷಬ್ ಶೆಟ್ಟಿ, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.



