ವಿಷ್ಣುವರ್ಧನ್ ವೃತ್ತಿ ಜೀವನದಲ್ಲಿ ನಟಿಸಿದ್ದು 200+ ಚಿತ್ರಗಳು. ಶೇ.50ಕ್ಕಿಂತಲೂ ಹೆಚ್ಚು ಸಕ್ಸಸ್ ರೇಟ್ ಇದ್ದ ವಿಷ್ಣುವರ್ಧನ್ ಅವರ ವೃತ್ತಿ ಜೀವನದ ಮೊದಲ ಚಿತ್ರವೇ ಇಂಡಸ್ಟ್ರಿ ಹಿಟ್. ನಾಗರಹಾವು. ಅದಾದ ಮೇಲೆ ವಿಷ್ಣುವರ್ಧನ್ ಬಂಧನ, ಕಳ್ಳ ಕುಳ್ಳ, ಭೂತಯ್ಯನ ಮಗ ಅಯ್ಯು, ಸಾಹಸಸಿಂಹ.. ಹೀಗೆ ಹಲವು ಹಿಟ್ ಕೊಟ್ಟಿದ್ಧಾರೆ. ಮುತ್ತಿನ ಹಾರ ಎಂಬ ಅದ್ಭುತ ಸಿನಿಮಾ ಫ್ಲಾಪ್ ಆಗಿದ್ದೂ ಇದೆ. ಆದರೆ ವಿಷ್ಣು ಅವರ ಕೊನೆಯ ದಿನಗಳಲ್ಲಿ ವಿಷ್ಣುವರ್ಧನ್ ಅವರಿಗೆ ಹಿಟ್ ಸಿಕ್ಕಿದ್ದು ರೀಮೇಕ್ ಚಿತ್ರಗಳಲ್ಲಿ ಎಂಬು ನಿರ್ವಿವಾದ.
ಆಪ್ತಮಿತ್ರ, ಸೂರ್ಯವಂಶ, ಯಜಮಾನ.. ಹೀಗೆ.. ಇವುಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಕೊಟ್ಟಿದ್ದು ಯಜಮಾನ. ಯಜಮಾನ ಚಿತ್ರದ ವೊರಿನಿಜಲ್ ವರ್ಷನ್ ವಿಜಯಕಾಂತ್ ಅವರದ್ದು. ತಮಿಳು ನಟ ವಿಜಯ್ ಕಾಂತ್ ಮತ್ತು ನಮ್ಮ ಕನ್ನಡದ ವಿಷ್ಣುವರ್ಧನ್ ಇಬ್ಬರ ನಡುವೆ ಉತ್ತಮ ಬಾಂಧವ್ಯವಿತ್ತು. ಸ್ನೇಹವಿತ್ತು. ವಿಜಯಕಾಂತ್ ಅವರ ಹಲವು ಚಿತ್ರಗಳು ಕನ್ನಡಕ್ಕೆ ಬಂದಿವೆ. ಅವುಗಳಲ್ಲಿ ಒಂದು ಯಜಮಾನ. ಮತ್ತೊಂದು ವಿಷ್ಣುಸೇನಾ. ಎರಡಕ್ಕೂ ಹೀರೋ ವಿಷ್ಣುವರ್ಧನ್.
ಯಜಮಾನ. ಇದು ವಾನತ್ತೈಪೋಲ ಚಿತ್ರದ ರೀಮೇಕ್. ಮೂಲ ಚಿತ್ರದಲ್ಲಿ ವಿಜಯಕಾಂತ್ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ವಿಷ್ಣು ನಿಭಾಯಿಸಿದ್ದರು. ಯಜಮಾನ ಸಿನಿಮಾ ದಾಖಲೆ ಸೃಷ್ಟಿಸಿತ್ತು. 40 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. 50ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 25 ವಾರ ಪ್ರದರ್ಶನ ಕಂಡಿದ್ದ ಯಜಮಾನ, 4 ಥಿಯೇಟರ್‌ಗಳಲ್ಲಿ 1 ವರ್ಷ ಪ್ರದರ್ಶನ ಕಂಡಿತ್ತು.
ಮತ್ತೊಂದು ವಿಷ್ಣುಸೇನಾ. ಇದೂ ಕೂಡಾ ವಿಜಯಕಾಂತ್ ನಟಿಸಿದ್ದ ‘ರಮಣ’ ಸಿನಿಮಾದ ರಿಮೇಕ್. ವಿಜಯಕಾಂತ್ ವೃತ್ತಿ ಜೀವನದ ಹಿಟ್ ಸಿನಿಮಾಗಳಲ್ಲಿ ‘ರಮಣ’ ಚಿತ್ರಕ್ಕೆ ಪ್ರಮುಖ ಸ್ಥಾನವಿದೆ. ಎ ಆರ್ ಮುರುಗದಾಸ್ ನಿರ್ದೇಶಿಸಿದ್ದ ಈ ಸಿನಿಮಾ ಕನ್ನಡದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಲಿಲ್ಲ. ಇದೇ ಚಿತ್ರವನ್ನು ತೆಲುಗಿನಲ್ಲಿ ಚಿರಂಜೀವಿ, ಹಿಂದಿಯಲ್ಲಿ ಅಕ್ಷಯ್ ಕುಮಾರ್ ರೀಮೇಕ್ ಮಾಡಿ ಸಕ್ಸಸ್ ಕಂಡರು.
ಇನ್ನುಳಿದಂತೆ ರವಿಚಂದ್ರನ್ ಅವರ ಚಿಕ್ಕೆಜಮಾನ್ರು (ಚಿನ್ನಗೌಂಡರ್), ಅಂಬರೀಷ್ ಅವರ ನಮ್ಮೂರ ಹಮ್ಮೀರ (ಅಮ್ಮನ್ ಕೋಯಿಲ್ ಕಿಲಕಳೆ), ಮಲ್ಲಿಗೆ ಹೂವೇ (ಸೆಂತೂರ ಪೂವೆ) ಚಿತ್ರಗಳಲ್ಲಿ ನಟಿಸಿದ್ದರು. ಪ್ರೀತಿ ನೀ ಇಲ್ಲದೇ ನಾ ಹೇಗಿರಲಿ ಚಿತ್ರವು ವಿಜಯಕಾಂತ್ ಅವರ ವೈದೆಹಿ ಕಥಿರುಂತಲ್ ಸಿನಿಮಾದ ರೀಮೇಕ್ ಆಗಿತ್ತು.
ಈ ಎಲ್ಲ ಚಿತ್ರಗಳಲ್ಲಿ ಸೂಪರ್ ಸಕ್ಸಸ್ ಕಂಡಿದ್ದು ಯಜಮಾನ ಮಾತ್ರ. ಉಳಿದಂತೆ ಚಿಕ್ಕೆಜಮಾನ್ರು, ಮಲ್ಲಿಗೆ ಹೂವೆ, ನಮ್ಮೂರ ಹಮ್ಮೀರ ಆವರೇಜ್ ಹಿಟ್ ಕಂಡಂತ ಸಿನಿಮಾಗಳಾದರೆ, ಉಳಿದ ಚಿತ್ರಗಳು ಫ್ಲಾಪ್ ಆದಂತವು.
ಆದರೆ ವಿಷ್ಣು ಕೆರಿಯರಿನಲ್ಲಿ ಯಜಮಾನ ಚಿತ್ರಕ್ಕೆ ಬೇರೆಯದೇ ಸ್ಥಾನಮಾನವಿದೆ. ಯಜಮಾನ ಚಿತ್ರದ ನಿರ್ದೇಶಕರಾದ ಶೇಷಾದ್ರಿ ಮತ್ತು ರಾಧಾ ಭಾರತಿಯವರು ವಿಷ್ಣು ವರ್ಧನ್ ಅವರ ಬಂಧುಗಳೂ ಹೌದು. ಆಗಿನ ಕಾಲಕ್ಕೆ ಅಂದರೆ 2000ನೇ ಇಸವಿಯಲ್ಲೇ ಸುಮಾರು 40 ಕೋಟಿ ಬಿಸಿನೆಸ್ ಮಾಡಿದ್ದ ಸಿನಿಮಾ ಯಜಮಾನ. ತಮಿಳಿಗಿಂತಲೂ ಮೀರಿ ಕನ್ನಡದಲ್ಲಿ ಸಕ್ಸಸ್ ಆಗಿತ್ತು.



