ನಟ ವಿಷ್ಣುವರ್ಧನ್ ಮೃತಪಟ್ಟಿದ್ದು 2009ರಲ್ಲಿ. ಅವರು ಪಂಚಭೂತಗಳಲ್ಲಿ ಲೀನವಾಗಿ ಹೆಚ್ಚೂ ಕಡಿಮೆ 15 ವರ್ಷಗಳೇ ಆಗುತ್ತಿವೆ. ಆದರೆ.. ವಿಷ್ಣುವರ್ಧನ್ ಅವರ ಪಾರ್ಥಿವ ದೇಹಕ್ಕೆ ಅಗ್ನಿಕ್ರಿಯೆ ನಡೆದ ಸ್ಥಳದಲ್ಲಿ ಪುಟ್ಟದೊಂದು ನೆನಪೂ ಇಲ್ಲ.
ವಿಷ್ಣುವರ್ಧನ್ ಸ್ಮಾರಕದ ಹೋರಾಟವೇನೋ ಇತ್ತೀಚೆಗೆ ನನಸಾಗಿದೆ. ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಹಲವು ವಿಶೇಷತೆಗಳ ಜೊತೆ ನಿರ್ಮಾಣ ಮಾಡಿದ್ಧಾರೆ. ಸಿಎಂ ಆಗಿದ್ದ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮನಸ್ಸು ಮಾಡಿದ್ದರಿಂದ ಇದೆಲ್ಲವೂ ಸಾಧ್ಯವಾಯಿತು. ಆದರೆ, ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಸ್ಮಾರಕ ಮಾಡಬೇಕು ಅನ್ನೋದು ಅಭಿಮಾನಿಗಳ ಹಠ. ಕನಸು. ಈ ಕನಸಿಗೆ ಭಾರತಿ ವಿಷ್ಣುವರ್ಧನ್ ಅವರೂ ಸೇರಿದಂತೆ ಅವರ ಕುಟುಂಬ ಸದಸ್ಯರೇ ರಾಜಿ ಮಾಡಿಕೊಂಡು ಆಗಿದೆ. ಆದರೆ, ಅಭಿಮಾನಿಗಳು ಹಠ ಬಿಡುತ್ತಿಲ್ಲ.
ನಟ ಡಾ। ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಪುಣ್ಯಭೂಮಿ ನಿರ್ಮಾಣ ಮಾಡಬೇಕು ಎಂದು ವಿಷ್ಣುವರ್ಧನ್ ಅವರ ಅಭಿಮಾನಿಗಳು ಹಠಕ್ಕೆ ಬಿದ್ದಿದ್ದಾರೆ. ಈ ಕುರಿತು ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿಯೇ ಸ್ಮಾರಕ ನಿರ್ಮಿಸಲು 10 ಗುಂಟೆ ಜಾಗ ಮಂಜೂರು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅಭಿಮಾನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ವಿ.ಎಸ್.ಎಸ್. ಅಭಿಮಾನ್ ಡಾ। ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ʻಸಿನಿಮಾ ಕಲಾವಿದರ ಸ್ಮಾರಕ ನಿರ್ಮಿಸಲು ಜಾಗ ಮಂಜೂರು ಮಾಡಿಸಲು ಸರ್ಕಾರಕ್ಕೆ ಆದೇಶ ಕೊಡಿ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದು ಸೂಕ್ತವಲ್ಲ. ಈ ಅರ್ಜಿಯಲ್ಲಿ ಯಾವ ಸಾರ್ವಜನಿಕ ಹಿತಾಸಕ್ತಿಯೂ ಅಡಗಿಲ್ಲ. ಇಂತಹ ವಿಚಾರಗಳ ಬಗ್ಗೆ ಹೈಕೋರ್ಟ್ ವ್ಯವಹರಿಸುವುದು ಸಾಧ್ಯವಿಲ್ಲʼ ಎಂದು ಹೇಳಿದೆ. ಸಾಧ್ಯವಾದರೆ ಸರ್ಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರದ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಿ ಎಂದು ಸಲಹೆ ನೀಡಿರುವ ಹೈಕೋರ್ಟ್, ಈ ಅರ್ಜಿ ಹಾಕಿದ್ದಕ್ಕೆ ದೊಡ್ಡ ಪ್ರಮಾಣದ ದಂಡ ವಿಧಿಸುವ ಅವಕಾಶ ನ್ಯಾಯಾಲಯಕ್ಕೆ ಇದೆ. ಆದರೆ ನ್ಯಾಯಾಲಯ ತಾಳ್ಮೆಯಿಂದಲೇ ಅರ್ಜಿ ವಜಾಗೊಳಿಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಡಾ। ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಒಬ್ಬ ಮೇರು ನಟ. ಅವರ ಅಂತ್ಯಕ್ರಿಯೆ ನಡೆದ ಜಾಗದಲ್ಲಿ ಸ್ಮಾರಕ ಭವನ ನಿರ್ಮಾಣ ಆಗಬೇಕು ಎಂಬುದು ಅರ್ಜಿದಾರರ ಅಭಿಲಾಷೆ. ವಿಷ್ಣುವರ್ಧನ್ ಅವರ ಸ್ಮಾರಕ ಭವನ ನಿರ್ಮಾಣಕ್ಕೆ ಅಭಿಮಾನ್ ಸ್ಟುಡಿಯೋಗೆ ಮಂಜೂರಾದ ಜಾಗದ ಪೈಕಿ ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ ಮೈಲಸಂದ್ರ ಗ್ರಾಮದ ಸರ್ವೇ ನಂ. 26 ಮತ್ತು 68ರಲ್ಲಿ 10 ಗುಂಟೆ ಜಾಗವನ್ನು ಸ್ಮಾರಕ ಭವನ ನಿರ್ಮಾಣಕ್ಕೆ ಮಂಜೂರು ಮಾಡಲು 2017ರಲ್ಲಿ ತಹಸೀಲ್ದಾರ್ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈವರೆಗೂ ಆ ಪ್ರಸ್ತಾವನೆಗೆ ಅನುಮೋದನೆ ದೊರೆತಿಲ್ಲ. ಆದ್ದರಿಂದ ಈ ಜಾಗ ಮಂಜೂರು ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಇದೀಗ ಹೈಕೋರ್ಟ್ ಕೂಡಾ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ, ಇಂತಹ ಅರ್ಜಿ ಸಲ್ಲಿಸಿದ್ದಕ್ಕೆ ಛೀಮಾರಿಯನ್ನೂ ಹಾಕಿದೆ. ಜೊತೆಗೆ ಎಚ್ಚರಿಕೆಯನ್ನೂ ಕೊಟ್ಟಿದೆ. ಅತ್ತ ಸರ್ಕಾರ ಕೂಡಾ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿ ಆಗಿದೆ. ಅತ್ತ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟರೆ, ಎರಡೆರಡು ಸ್ಮಾರಕ ನಿರ್ಮಾಣ ಮಾಡಿದಂತಾಗುತ್ತದೆ. ಅಲ್ಲದೆ ಅಂತ್ಯಕ್ರಿಯೆ ನಡೆದ ಸ್ಥಳ ಅರಣ್ಯ ಭೂಮಿ. ಅತ್ತ ಕುಟುಂಬದವರೂ ಒಪ್ಪಿಕೊಂಡಾಗಿದೆ. ಒಟ್ಟಿನಲ್ಲಿ ಅಂತ್ಯಕ್ರಿಯೆ ನಡೆದ ಆ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಅಭಿಮಾನಿಗಳ ಉದ್ಧೇಶ ಈಡೇರುವುದು ಸಾಧ್ಯವಿಲ್ಲ.



