ಇದು ೧೪ ವರ್ಷಗಳ ಹೋರಾಟ. ಇನ್ನೂ ಮುಗಿದಿಲ್ಲ. ಪುಣ್ಯಭೂಮಿಗಾಗಿ ಅಭಿಮಾನಿಗಳ ಹೋರಾಟ ನಡೆಯುತ್ತಲೇ ಇದೆ. ವಿಷ್ಣುವರ್ಧನ್ ಕುಟುಂಬದವರೇನೋ ರಾಜಿ ಆದರು. ಆದರೆ ಅಭಿಮಾನಿಗಳಿಗೆ ವಿಷ್ಣುವರ್ಧನ್ ಸ್ಮಾರಕ, ವಿಷ್ಣುವರ್ಧನ್ ಅಗ್ನಿಸ್ಪರ್ಶವಾದ ಪುಣ್ಯಸ್ಥಳವನ್ನು ಬಿಟ್ಟು ಕೊಡುವುದಕ್ಕೆ ಆಗುತ್ತಿಲ್ಲ. ಹೀಗಾಗಿಯೇ.. ಈ ಬಾರಿ ಹೋರಾಟ ಬೇರೆಯದೇ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರಕ್ಕೆ ವಾರ್ನಿಂಗ್ ಕೊಡುವಷ್ಟರ ಮಟ್ಟಿಗೆ ಹೋಗಿದೆ. ತಾಳ್ಮೆಯ ಅವಧಿ ಮುಗಿಯುತ್ತಿರುವುದರ ಸೂಚನೆ ಇದು.
ಡಿಸೆಂಬರ್ ೩೦. ೨೦೦೯ ರಂದು ವಿಷ್ಣುವರ್ಧನ್ ಅಗಲಿದರು ಹೌದು. ಅದೇ ದಿನ ವಿಷ್ಣುವರ್ಧನ್ ಅಭಿಮಾನಿಗಳು ಹೋರಾಟವೂ ಶುರುವಾಯಿತು ಎನ್ನುವುದೂ ಅಷ್ಟೇ ನಿಜ. ವಿಷ್ಣುವರ್ಧನ್ ಅಗಲಿ ೧೪ ವರ್ಷಗಳಾಗಿದ್ದರೂ, ಹೋರಾಟ ಮಾತ್ರ ನಿಂತಿಲ್ಲ. ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ಭೂಮಿ ಒದಗಿಸುವಂತೆ ಅಭಿಮಾನಿಗಳು ಆಗ್ರಹಿಸುತ್ತಲೇ ಬಂದಿದ್ದರೂ, ಆ ವಿಷಯ ಬಗೆಹರಿದಿಲ್ಲ. ಹೋರಾಟಕ್ಕೆ ಅಭಿಮಾನಿಗಳೇ ಮುಂದಾಗಿದ್ದು ೫೦ಕ್ಕೂ ಹೆಚ್ಚು ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿವೆ.
ವಿಷ್ಣುಸೇನಾ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪುಣ್ಯಭೂಮಿ ಮಾಡುವುದಕ್ಕೆ ಜಾಗ ಕೊಡಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ಸರ್ಕಾರಕ್ಕೆ ೩ ತಿಂಗಳ ಎಚ್ಚರಿಕೆಯನ್ನೂ ಕೊಟ್ಟಿದ್ಧಾರೆ. ೩ ತಿಂಗಳೊಳಗೆಗೆ ಬೇಡಿಕೆ ಈಡೇರಿಸದೇ ಇದ್ದರೆ ಅಭಿಮಾನಿಗಳೇ ಸ್ಮಾರಕ ನಿರ್ಮಾಣ ಮಾಡುತ್ತಾರೆ. ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆಗಾರ ಎಂದು ಎಚ್ಚರಿಕೆ ನೀಡಿದ್ದಾರೆ.
ಹೋರಾಟಕ್ಕೆ ಕಿಚ್ಚ ಸುದೀಪ್, ಡಾಲಿ ಧನಂಜಯ, ನೆನಪಿರಲಿ ಪ್ರೇಮ್, ಧ್ರುವ ಸರ್ಜಾ, ಶ್ರೀಮುರಳಿ, ವಸಿಷ್ಠ ಸಿಂಹ, ಕರವೇ ಅಧ್ಯಕ್ಷ ನಾರಾಯಣ ಗೌಡ ಚಿತ್ರರಂಗದ ನಟ ನಟಿಯರು ಬೆಂಬಲ ಸೂಚಿಸಿದ್ದಾರೆ. ನಾರಾಯಣ ಗೌಡ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ಧರೆ, ಡಿಕೆ ಶಿವಕುಮಾರ್ ಜೊತೆ ಕಿಚ್ಚ ಸುದೀಪ್ ಮಾತುಕತೆ ನಡೆಸಿದ್ದಾರೆ.
ವಿಷ್ಣುವರ್ಧನ್ ಅವರ ಸಮಾಧಿ ವಿವಾದ ಬಗೆಹರಿಯುವುದಾದರೂ ಹೇಗೆ? ಭಾರತೀಯ ಸಿನಿಮಾರಂಗದ ಹೆಸರಾಂತ ನಟ, ಮೇರು ವ್ಯಕ್ತಿತ್ವದ ಕಲಾವಿದರಾಗಿದ್ದ ಡಾ ವಿಷ್ಣುವರ್ಧನ್ ಅವರು ನಮ್ಮನ್ನಗಲಿ 14 ವರ್ಷ ಕಳೆಯಿತು. ಆದರೆ ಇಂದಿಗೂ ಅವರ ಪುಣ್ಯಭೂಮಿ ವಿವಾದ ಬಗೆಹರಿಯದಿರುವುದು ತುಂಬಾ ನೋವಿನ ಸಂಗತಿ” ಎಂದಿದ್ದಾರೆ ವಿಷ್ಣುಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್.
ಈಗಾಗಲೇ ಮೈಸೂರಿನಲ್ಲಿ ಸರ್ಕಾರದ ವತಿಯಿಂದ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಿದೆ. ಕುಟುಂಬ ಸದಸ್ಯರ ಸಮ್ಮತಿ ಮೇರೆಗೆ ಅರಮನೆ ನಗರಿಯಲ್ಲಿ ದಾದಾ ಸ್ಮಾರಕ ನಿರ್ಮಿಸಿದ್ದು, ಅಭಿಮಾನಿಗಳ ದರ್ಶನಕ್ಕೂ ಸಿಕ್ಕಿದೆ. ಕುಟುಂಬವೇನೋ ಅಭಿಮಾನ್ ಸ್ಟುಡಿಯೋದಲ್ಲಿ ಉಂಟಾದ ವಿವಾದ, ಮನಸ್ತಾಪದಿಂದ ಬೇಸರಗೊಂಡು ಸ್ಮಾರಕನ ಮೈಸೂರಿಗೆ ಶಿಫ್ಟ್ ಮಾಡಿದ್ದರು. ಆದರೆ ಅಭಿಮಾನಿಗಳು ಸಮಾಧಾನಗೊಂಡಿಲ್ಲ. ಅಭಿಮಾನಿಗಳ ಹೋರಾಟಕ್ಕೆ ಗೆಲುವು ಸಿಗುವ ಲಕ್ಷಣಗಳಂತೂ ಇವೆ.



