ಇದು ವಿಚಿತ್ರವಾದರೂ ಸತ್ಯ ಎನ್ನಿಸುತ್ತಿರುವುದಂತೂ ಹೌದು. ವಿಷ್ಣುವರ್ಧನ್ ಅವರ ನೆನಪುಗಳಿದ್ದ ಪುಣ್ಯಭೂಮಿಯನ್ನು ಬಾಲಕೃಷ್ಣ ಅವರ ಮೊಮ್ಮಗ ವರಮಹಾಲಕ್ಷ್ಮಿ ಹಬ್ಬದ ದಿನ ರಾತ್ರೋರಾತ್ರಿ ಕೆಡವಿ ಹಾಕಿಸಿದ್ದರು. ಆನಂತರ ಅಭಿಮಾನ್ ಸ್ಟುಡಿಯೋವನ್ನು ಮಾಲ್ ನಿರ್ಮಾಣಕ್ಕೆ ಮಾರಾಟ ಮಾಡಿದ್ದರು. ಆದರೆ.. ಗೌರಿ ಗಣೇಶ ಹಬ್ಬದ ಸಂಭ್ರಮ ಮುಗಿಯುವ ಹೊತ್ತಿಗೆ ಜಮೀನೇ ಮಾಯವಾಗುವ ಹಂತಕ್ಕೆ ಬಂದಿದೆ
ವಿಷ್ಣುವರ್ಧನ್ ಅವರ ಪುಣ್ಯಭೂಮಿ ಇದ್ದ ಅಭಿಮಾನ್ ಸ್ಟುಡಿಯೋ ಇದ್ದ ಜಾಗವನ್ನು ರಾಜ್ಯ ಸರ್ಕಾರ ಮತ್ತೆ ವಶಕ್ಕೆ ತೆಗೆದುಕೊಂಡಿದೆ. ಸರ್ಕಾರ, ಈ ಜಾಗವನ್ನು ಬಾಲಣ್ಣನವರಿಗೆ ಕೊಟ್ಟಿದ್ದದ್ದು ಸ್ಟುಡಿಯೋ ನಿರ್ಮಾಣಕ್ಕೆ. ಬಾಲಣ್ಣ, ಅಭಿಮಾನ್ ಸ್ಟುಡಿಯೋವನ್ನೇನೋ ಕಟ್ಟಿದ್ದರು. ಬಾಲಕೃಷ್ಣ ಅವರಿಗೆ 1970ರಲ್ಲಿ ಸ್ಟುಡಿಯೋ ನಿರ್ಮಾಣದ ಉದ್ದೇಶಕ್ಕೆ 20 ಎಕರೆ ಭೂಮಿಯನ್ನು 20 ವರ್ಷ ಲೀಸ್ಗೆ ನೀಡಲಾಗಿತ್ತು. ಬಳಿಕ ಲೀಸ್ ಅವಧಿ ವಿಸ್ತರಣೆಯಾಗಿತ್ತು. 2004ರಲ್ಲಿ ಆರ್ಥಿಕ ಸಂಕಷ್ಟದ ನೆಪ ಹೇಳಿ ಬಾಲಕೃಷ್ಣ ಮಕ್ಕಳಾದ ಶ್ರೀನಿವಾಸ್ ಹಾಗೂ ಗಣೇಶ್ ಜಿಲ್ಲಾಧಿಕಾರಿಗಳ ಬಳಿ 10 ಎಕರೆ ಮಾರಲು ಒಪ್ಪಿಗೆ ಪಡೆದು, ವಿಶೇಷಾಧಿಕಾರ ಬಳಸಿ ಮಾರಾಟ ಮಾಡಿದ್ದರು. ನಿಯಮಗಳ ಪ್ರಕಾರ ಹಾಗೆ ಮಾರಾಟದಿಂದ ಬಂದ ಹಣವನ್ನೂ ಸ್ಟುಡಿಯೋ ನಿರ್ಮಾಣಕ್ಕೆ ಮಾತ್ರ ಬಳಸಿಕೊಳ್ಳಬೇಕಿತ್ತು.
ಆದರೆ.. ಹಾಗಾಗಲಿಲ್ಲ. ಆದರೆ, ಈವರೆಗೆ ಸ್ಟುಡಿಯೋ ಯಥಾ ಸ್ಥಿತಿಯಲ್ಲೇ ಇದೆ. ಈವರೆಗೆ ಇದರ ಅಭಿವೃದ್ಧಿ ಆಗಿಲ್ಲ. ಈಗ ಬಾಲಕೃಷ್ಣ ಮೊಮ್ಮಗ ಕಾರ್ತಿಕ್ ಅವರು ಈ ಜಮೀನನ್ನು ಮಾರಲು ಪ್ಲ್ಯಾನ್ ಮಾಡಿದ್ದರು. 1 ಎಕರೆಗೆ 14 ಕೋಟಿ ರೂಪಾಯಿಯಂತೆ ಮಾರಲು ಪ್ಲ್ಯಾನ್ ನಡೆದಿತ್ತು. ಈ ವಿಚಾರ ಅರಣ್ಯಾಧಿಕಾರಿಗೆ ಗೊತ್ತಾಗಿದೆ. ಹೀಗಾಗಿ, ಇದನ್ನು ವಶಕ್ಕೆ ಪಡೆಯುವಂತೆ ಅವರು ಜಿಲ್ಲಾಧಿಕಾರಿಗಳಿಗೆ ಕೋರಿದ್ದಾರೆ.
ಆ ಜಾಗ ಮತ್ತೆ ವಿವಾದವಾಗಿ, ಸುದ್ದಿ ಗೊತ್ತಾಗಿದ್ದು ವಿಷ್ಣುವರ್ಧನ್ ಅವರ ಅಂತಿಮ ಕ್ರಿಯೆಗಳನ್ನು ಅಲ್ಲಿ ನೆರವೇರಿಸಿದಾಗ.. ಅದು ಮತ್ತೊಂದು ವಿವಾದವಾಗಿ, ಇತ್ತೀಚೆಗೆ ವರಮಹಾಲಕ್ಷ್ಮಿ ಹಬ್ಬದ ದಿನ ಆ ಜಾಗದಲ್ಲಿದ್ದ ವಿಷ್ಣು ಸ್ಮಾರಕವನ್ನು ನೆಲಸಮ ಮಾಡಲಾಗಿತ್ತು. ಇದೀಗ ಗಣೇಶ ಹಬ್ಬ ಮುಗಿಯುತ್ತಿದ್ದಂತೆ, ಭೂಮಿಯೇ ಸರ್ಕಾರದ ವಶಕ್ಕೆ ಹೋಗುತ್ತಿದೆ.
ವಿಷ್ಣುವರ್ಧನ್ ಅಳಿಯ ಅನಿರುದ್ಧ ʻʻಭೂಮಿ ಮತ್ತೆ ಸರ್ಕಾರದ ವಶಕ್ಕೆ ಹೋಗಿರುವುದರಿಂದ ಖುಷಿಯಂತೂ ಆಗಿದೆ. ನಾನು ಹಾಗೂ ಭಾರತಿ ಅಮ್ಮ ಅಭಿಮಾನಿಗಳ ಪರವಾಗಿ ಅಲ್ಲಿ 10 ಗುಂಟೆ ಜಾಗವನ್ನು ಕೇಳುತ್ತೇವೆʼʼ ಎಂದು ಹೇಳಿದ್ದಾರೆ.
ಅಂದಹಾಗೆ ಈ ಮಾತು ಹೇಳಿರುವುದು ಮಾಧ್ಯಮಗಳಿಗೆ. ಸರ್ಕಾರಕ್ಕಿನ್ನೂ ಅಧಿಕೃತ ಮನವಿ ಸಲ್ಲಿಕೆಯಾಗಿಲ್ಲ.



