ಡಾ.ರಾಜ್ ಕುಮಾರ್ ಮತ್ತು ಅವರ ಕುಟುಂಬದ ಬಗ್ಗೆ ಒಂದಿಷ್ಟು ವಿಕೃತ ಮನಸ್ಸುಗಳ ಆಕ್ರೋಶ ಹೊಸದೇನೂ ಅಲ್ಲ. ಆದರೆ, ಅದು ಮೇರೆ ಮೀರಿದಾಗ.. ಎಲ್ಲೆ ದಾಟಿದಾಗ ಕಾನೂನು ಕ್ರಮವಂತೂ ಅನಿವಾರ್ಯವಾಗುತ್ತದೆ. ಅಂಥದ್ದೇ ತಪ್ಪು ಮಾಡಿದ್ದವರು ವಿನೋದ್ ಶೆಟ್ಟಿ. ಈತ ಚಿಕ್ಕಮಗಳೂರು ಜಿಲ್ಲೆಯವನು.
ವರಮಹಾಲಕ್ಷ್ಮಿ ಹಬ್ಬದ ದಿನ ವಿಷ್ಣುವರ್ಧನ್ ಅವರ ಸಮಾಧಿ ಧ್ವಂಸ ಮಾಡಿದ್ರಲ್ಲ, ಆ ವಿಷಯಕ್ಕೆ ಡಾ.ರಾಜ್, ಶಿವಣ್ಣ, ರಾಘವೇಂದ್ರ ರಾಜ್ ಕುಮಾರ್.. ಎಲ್ಲರನ್ನೂ ಎಳೆದು ತಂದಿದ್ದ. ವಿಷ್ಣು ಬದುಕಿದ್ದಾಗಲೂ ನೋವು ಅನುಭವಿಸಿದ್ರು, ನಿಧನರಾದ ಬಳಿಕ ಕೂಡ ಸಂಕಷ್ಟ ಎದುರಿಸುವಂತಾಗಿದೆ. ಕೊನೆಗೆ ಅವರ ಸಮಾಧಿ ಕೂಡ ಧ್ವಂಸ ಮಾಡಿಬಿಟ್ಟರು. ಇದಕ್ಕೆಲ್ಲಾ ಕಾರಣ ಅಣ್ಣಾವ್ರ ಕುಟುಂಬ ಎನ್ನುವಂತೆ ವಿನೋದ್ ಶೆಟ್ಟಿ ಬಾಯಿಗೆ ಬಂದಂತೆ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಡಾ. ರಾಜ್‌ಕುಮಾರ್, ಶಿವಣ್ಣ, ಅಪ್ಪು, ರಾಘಣ್ಣ ಎಲ್ಲರ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡಿದ್ದ ವಿನೋದ್ ಶೆಟ್ಟಿ ಕೊನೆಗೆ ಫೋನ್ ನಂಬರ್ ಹಾಕಿ ಚರ್ಚೆಗೆ ನಾನು ಸಿದ್ಧ ಎಂದು ಸವಾಲು ಹಾಕಿದ್ದರು.
ಅಣ್ಣಾವ್ರ ಅಭಿಮಾನಿಗಳು ಬಿಡಿ, ವಿಷ್ಣುವರ್ಧನ್ ಅವರ ಅಭಿಮಾನಿಗಳೂ ವಿನೋದ್ ಶೆಟ್ಟಿಯ ಅವಹೇಳನದ ವಿರುದ್ಧ ಕೆಂಡಾಮಂಡಲವಾಗಿದ್ದರು. ಏಕೆಂದರೆ ನಿಜವಾದ ವಿಷ್ಣು ಅಭಿಮಾನಿಗಳಿಗೆ ದೊಡ್ಮನೆ ಮತ್ತು ವಿಷ್ಣುವರ್ಧನ್ ಅವರ ಜೊತೆಗಿನ ಸಂಬಂಧ ಗೊತ್ತಿತ್ತು. ಯಾವಾಗ ವಿಷ್ಣು ಅಭಿಮಾನಿಗಳೂ ರೊಚ್ಚಿಗೆದ್ದರೋ.. ಏನೋ ತಪ್ಪಾಗಿದೆ ಎಂದು ಅರ್ಥವಾದ ವಿನೋದ್ ಶೆಟ್ಟಿ, ಆಮೇಲೆ ಕ್ಷಮೆ ಕೇಳಿ, ಆಕ್ರೋಶದಲ್ಲಿ ಮಾತನಾಡಿಬಿಟ್ಟೆ ಎಂದು ಇನ್ನೊಂದು ವಿಡಿಯೋ ಹಾಕಿ, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು.
ಕ್ಷಮೆ ಕೇಳಿದ್ದ ವಿಡಿಯೋದಲ್ಲಿ “ನಾನು ಅಣ್ಣಾವ್ರ ಬಗ್ಗೆ ಆ ರೀತಿ ಮಾತನಾಡಬಾರದಿತ್ತು, ಈ ಹಿಂದೆ ವಿಷ್ಣು ದಾದಾ ಸಮಾಧಿ ಬಗ್ಗೆ ಮನವಿ ಮಾಡಿ ಸರ್ಕಾರಕ್ಕೆ ಒಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದೆ. ಆಗ ರಾಜ್ ಅಭಿಮಾನಿಗಳು ಕೆಟ್ಟದಾಗಿ ಮಾತನಾಡಿದ್ದರು. ನನ್ನ ಬಗ್ಗೆ ಮಾತನಾಡಿದ್ರೆ ಪರವಾಗಿಲ್ಲ. ಆದರೆ ವಿಷ್ಣು ಅಪ್ಪಾಜಿ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ರು. ಆ ದ್ವೇಷದಿಂದ, ಸಮಾಧಿ ಹೊಡೆದು ಹಾಕಿದ ಬೇಸರದಲ್ಲಿ ನಾನು ಈ ರೀತಿ ಮಾತನಾಡಿ ವೀಡಿಯೋ ಮಾಡಿದ್ದೆ. ರಾಜ್ ಕುಟುಂಬದಿಂದ ನನಗೆ ಅನ್ಯಾಯ ಆಗಿಲ್ಲ. ಮೋಸ ಆಗಿಲ್ಲ. ಆದರೆ ದೊಡ್ಮನೆ ಬಗ್ಗೆ ಆ ರೀತಿ ಮಾತನಾಡಬಾರದಿತ್ತು. ಅದಕ್ಕೆ ಕ್ಷಮೆ ಇರಲಿ” ಎಂದು ಕೇಳಿಕೊಂಡಿದ್ದರು.
ಆದರೆ, ಪೊಲೀಸರು ಮರೆತಿರಲಿಲ್ಲ. ಈತನ ವಿರುದ್ಧ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ನೀಡಿದ ದೂರಿನ ಹಿನ್ನೆಲೆ ಪ್ರಕರಣ ದಾಖಲಾಗಿತ್ತು. ಇದೀಗ ವಿನೋದ್ ಶೆಟ್ಟಿ ಪೊಲೀಸರ ಅತಿಥಿಯಾಗಿದ್ದಾರೆ.
ಅಭಿಮಾನಿಗಳು ತಾವು ಇಷ್ಟಪಡುವ ನಟನ ಮೇಲೆ ಪ್ರೀತಿ ಇಟ್ಟುಕೊಳ್ಳೋದು ಬೇರೆ. ಒಬ್ಬರನ್ನು ಪ್ರೀತಿಸಬೇಕು, ಅಭಿಮಾನಿಸಬೇಕು ಎಂದರೆ, ಇನ್ನೊಬ್ಬ ನಟನನ್ನು ದ್ವೇಷ ಮಾಡಬೇಕು ಎಂದಲ್ಲ. ಅದು ಅಭಿಮಾನಿಗಳಿಗೂ ಅರ್ಥವಾದರೆ, ಅಷ್ಟೇ ಸಾಕು.



