ಜೈಲಿನಲ್ಲಿಯೇ ಒಬ್ಬ ದರ್ಶನ್ ಅಭಿಮಾನಿ ದರ್ಶನ್ ಅವರನ್ನು ಕಂಡು ಕೈಲುಕಿ, ದರ್ಶನ್ ಕೊಟ್ಟ ಬಿಸ್ಕೆಟ್ ತಿಂದು.. ದರ್ಶನ್ ಅವರಿಗೇ ಧ್ಯಾನ ಮಾಡಿಸಿ ಬಂದಿದ್ದಾನೆ. ಅರೆ.. ಇದು ಹೇಗೆ ಸಾಧ್ಯ ಎನ್ನಬೇಡಿ. ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿರುವ ದರ್ಶನ್ ಅವರನ್ನು ನೋಡುವುದಕ್ಕೆ ಪ್ರತಿದಿನ ನೂರಾರು ಅಭಿಮಾನಿಗಳು ಜೈಲಿನ ಹೊರಗೆ ಕಾಯುತ್ತಾ ನಿಂತಿರುವುದು ಸಾಮಾನ್ಯ ದೃಶ್ಯ. ಆದರೆ ಯಾರಿಗೂ ಭೇಟಿಯಾಗದ ದರ್ಶನ್, ಸಿದ್ಧಾರೂಢ ಎಂಬ ಈ ಅಭಿಮಾನಿಯನ್ನು ಭೇಟಿ ಮಾಡಿದ್ದು ಹೇಗೆ..? ಹೇಗೆಂದರೆ.. ಈತ ಕೂಡಾ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದ ಆರೋಪಿ.
ಜೈಲಿನಲ್ಲಿ ಶಿಕ್ಷೆ ಪೂರೈಸಿ ಇತ್ತೀಚೆಗೆ ಬಿಡುಗಡೆಯಾಗಿದ್ದಾನೆ. ಹಾಗೆ ಬಿಡುಗಡೆಯಾಗುವ ಮೊದಲು ಅದೇ ಜೈಲಿನಲ್ಲಿದ್ದ ದರ್ಶನ್ʻನ್ನು ಭೇಟಿ ಮಾಡಿ ಬಂದಿದ್ದಾನೆ. ವಿಶೇಷ ಅಂದ್ರೆ, ದರ್ಶನ್ʻಗೆ ಧ್ಯಾನವನ್ನೂ ಹೇಳಿಕೊಟ್ಟು.. 10 ನಿಮಿಷ ಧ್ಯಾನ ಮಾಡಿಸಿ ಬಂದಿದ್ದಾನೆ. ಆತ ಹೇಳಿರುವ ಕಥೆಯೇ ಈ ವಿಐಪಿ ಸೆಲ್ ಕಥೆ.
ನಾನು ದರ್ಶನ್ ಅಭಿಮಾನಿ, ಹೇಗಿದ್ದರೂ ಜೈಲಿನಿಂದ ಹೊರಗಡೆ ಹೋಗ್ತೀನಿ ಅಂತಾಗಿತ್ತು. ಹಾಗಾಗಿ ಅವರನ್ನು ಭೇಟಿ ಮಾಡಬೇಕು ಅಂತ ಮೇಲಿನ ಅಧಿಕಾರಿಗಳನ್ನು ಕೇಳಿಕೊಂಡೆ. ಅಧಿಕಾರಿಗಳು ದರ್ಶನ್ ಬಳಿ ಹೋಗಿ ಅಭಿಮಾನಿಯೊಬ್ಬರು ಭೇಟಿ ಮಾಡಬೇಕಂತೆ ಅಂತ ಹೇಳಿದರು. ಆಗ ದರ್ಶನ್ ಅವರು ನನ್ನನ್ನು ಕಳಿಸಿ ಅಂತ ಹೇಳಿದರು. ನಾನು ಹೋಗಿ ದರ್ಶನ್ ಅವರಿಗೆ ಶೇಕ್‌ಹ್ಯಾಂಡ್ ಕೊಟ್ಟೆ ಎಂದು ಸಿದ್ದಾರೂಢ ಹೇಳಿದ್ದಾರೆ.
ಜೈಲಿನ ಒಳಗೆ ದರ್ಶನ್ ವಿಐಪಿ ಸೆಲ್ʻನಲ್ಲಿದ್ದಾರೆ, ಅದು ಸಿಂಗಲ್ ಸೆಲ್. ಒಂದು ಬೆಡ್, 2 ಕುರ್ಚಿ, 20 ಲೀಟರ್ ನೀರಿನ ಕ್ಯಾನ್ ಇರುತ್ತದೆ. ಅಷ್ಟೇ, ಹೆಸರಿಗೆ ಅದು ವಿಐಪಿ ಸೆಲ್ ಅನ್ನೋ ಸಿದ್ದಾರೂಢ ಪ್ರಕಾರ ಸಿಂಗಲ್ ಸೆಲ್‌ನಲ್ಲಿ ಒಬ್ಬರೇ ಇರೋದಿದ್ಯಲ್ಲ, ಅದು ನರಕ ಅಂತಾರೆ.
ಕಾಮನ್ ಸೆಲ್‌ನಲ್ಲಿ ಎಲ್ಲರೂ ಇರುತ್ತಾರೆ, ಮಾತಾಡಿಕೊಂಡು ಸಮಯ ಕಳೆಯಬಹುದು. ವಿಐಪಿ ಸೆಲ್‌ನಲ್ಲಿ ಟಿವಿ ನೋಡಬಹುದು, ಓದ್ಕೊಂಡ್ ಇರಬಹುದು ಅಷ್ಟೆ. ವರ್ಕೌಟ್ ಮಾಡುವುದಕ್ಕೂ ಆಗಲ್ಲ. ಜಾಗ ಚಿಕ್ಕದು ಅಂತಾರೆ ಸಿದ್ದಾರೂಢ.
ಸಿದ್ದಾರೂಢನ ಪ್ರಕಾರ ಒಂಟಿಯಾಗಿರುವುದಕ್ಕಿಂತ ದೊಡ್ಡ ಶಿಕ್ಷೆ ಇಲ್ಲ. ಟಿವಿ ನೋಡೋದು, ಪುಸ್ತಕ ಓದೋದು.. ಚಿಕ್ಕ ಜಾಗದಲ್ಲಿ ಹಿಂದೆ ಮುಂದೆ ವಾಕ್ ಮಾಡ್ಕೊಂಡಿರೋದು.. ಎಷ್ಟೂಂತ ಮಾಡೋಕೆ ಸಾಧ್ಯ. ಒಂಟಿತನವೇ ಒಬ್ಬ ವ್ಯಕ್ತಿಗೆ ಕೊಡುವ ಅತಿ ದೊಡ್ಡ ಶಿಕ್ಷೆ. ಸಿಂಗಲ್ ಸೆಲ್ʻನಲ್ಲಿರುವ ದರ್ಶನ್ ಊಟ, ತಿಂಡಿಗೆ ಹೊರಗೆ ಬಂದಾಗಲಷ್ಟೇ ಇತರರ ಜೊತೆ ಮಾತನಾಡುವುದಕ್ಕೆ ಸಾಧ್ಯ.
ಇನ್ನು ಪ್ರಜ್ವಲ್ ರೇವಣ್ಣ ಅವರಿರೋ ಸೆಲ್, ದರ್ಶನ್ ಅವರಿರುವ ಸೆಲ್ʻನಿಂದ 1 ಕಿ.ಮೀ. ದೂರ ಇದ್ಯಂತೆ. ಅವರಿಬ್ಬರೂ ಅಷ್ಟು ದೂರದಲ್ಲಿರೋವಾಗ ಪರಸ್ಪರ ಮಾತನಾಡೋದಕ್ಕೆ ಹೇಗೆ ಸಾಧ್ಯ ಅಂತಾರೆ ಸಿದ್ಧಾರೂಡ. ಇಷ್ಟಕ್ಕೂ ಮಾಧ್ಯಮಗಳು ಇಬ್ಬರನ್ನೂ ಒಂದೇ ಸೆಲ್ಲಿನಲ್ಲಿಟ್ಟಿದ್ಧಾರೆ ಎಂದೇನೂ ವರದಿ ಮಾಡಿಲ್ಲ. ಇಬ್ಬರೂ ಊಟ ತಿಂಡಿಗೆ ಹೋದಾಗ ಮಾತನಾಡಿದ್ದಾರೆ ಎಂದೇ ವರದಿ ಮಾಡಿರುವುದು.
ಸಿದ್ದಾರೂಢ ಅನುಭವದ ಪ್ರಕಾರ ಪೊಲೀಸರು ಚಾರ್ಜ್ʻಶೀಟ್ ಹಾಕಿದ ಮೇಲೆ ಅದೆಷ್ಟೇ ಸ್ಟ್ರಾಂಗ್ ಕೇಸ್ ಆಗಿದ್ದರೂ ಬೇಲ್ ಸಿಗುತ್ತೆ. ವಿಚಾರಣೆ ಆಗಿ ಶಿಕ್ಷೆ ಆಗೋಕೆ ಮೂರ್ನಾಲ್ಕು ವರ್ಷ ಹಿಡಿಯುತ್ತೆ. ಅಪರಾಧ ಸಾಬೀತಾದ್ರೆ ಜೀವಾವಧಿ ಶಿಕ್ಷೆಯಾಗುತ್ತೆ.
ದರ್ಶನ್ ಒಬ್ಬರೇ ಇದ್ದ ಕಾರಣಕ್ಕೋ ಏನೋ.. ಮಾತನಾಡುವ ಉತ್ಸಾಹವಿತ್ತು. ಸೆಲ್ʻನಲ್ಲಿ ಭೇಟಿ ಮಾಡಿದಾಗತುಂಬ ಗೌರವದಿಂದ, ಪ್ರೀತಿಯಿಂದ ಮಾತನಾಡಿದರು. ನನ್ನ ಕಥೆ ಕೇಳಿದರು. ನನ್ನ ಕಥೆ ಬಿಡಿ, ನಿಮ್ಮ ಕಥೆ ಹೇಳಿ ಅಂದಾಗ ಅವರು ಟಿವಿ ನೋಡ್ತಿದ್ದೀಯಲ್ಲ ಅಂತ ಅಂದರು. ಅಲ್ಲಿ ಬೇಕರಿ ಐಟಮ್ಸ್ ಇತ್ತು, ನನಗೆ ತಿನ್ನಲು ಬಿಸ್ಕತ್ ಕೊಟ್ಟರು. ದರ್ಶನ್ ಅವರು ಟಿವಿಯಲ್ಲಿ ನೋಡಿದಂತೆ ಇಲ್ಲ, ಸಣ್ಣಗಾಗಿದ್ದಾರೆ, ಡಲ್ ಕಾಣಿಸ್ತಾರೆ. ಪಶ್ಚಾತ್ತಾಪ ಆದಂತೆಯೂ ಕಾಣುತ್ತದೆ. ಜೈಲು ಅನ್ನೋದು ನರಕ. ಹಾಗಾಗಿ ನಾನು ಅವರಿಗೆ ನಿಮಗೆ ಧ್ಯಾನದ ಅಗತ್ಯ ಇದೆ ಅಂತ ಹೇಳಿದೆ, ನನ್ನ ಮಾತಿಗೆ ಗೌರವ ಕೊಟ್ಟರು, ನಾನು ಅವರಿಗೆ 10 ನಿಮಿಷ ಧ್ಯಾನ ಮಾಡಿಸಿದೆ ಎಂದು ಸಿದ್ದಾರೂಢ ಹೇಳಿದ್ದಾರೆ.



