ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಂಧಾನ ಶುರುವಾಗಿದ್ಯಾ..? ಹೀಗೊಂದು ಅಭಿಪ್ರಾಯ ಮೂಡುತ್ತಿರೋದು ವಿನೋದ್ ರಾಜ್ ಅವರು ರೇಣುಕಾಸ್ವಾಮಿ ಕುಟುಂಬವನ್ನು ಭೇಟಿ ಮಾಡಿ, 1 ಲಕ್ಷ ರೂ. ಚೆಕ್ ನೀಡಿರುವ ಹಿನ್ನೆಲೆಯಲ್ಲಿ.
ನಟ ವಿನೋದ್ ರಾಜ್ ಮತ್ತು ಜೈಲಿನಲ್ಲಿರುವ ದರ್ಶನ್ ಅವರ ನಡುವಿನ ಬಾಂಧವ್ಯ, ಪ್ರೀತಿ ಬಲವಾಗಿಯೇ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದ ವಿನೋದ್ ರಾಜ್ ಅದಾದ ಬೆನ್ನಲ್ಲೇ ಚಿತ್ರದುರ್ಗಕ್ಕೆ ಹೋಗಿ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಭೇಟಿ ಮಾಡಿ ಸಾಂತ್ವನ ಹೇಳಿದ್ದಷ್ಟೇ ಅಲ್ಲ, 1 ಲಕ್ಷ ರೂ. ಹಣವನ್ನೂ ಚೆಕ್ ಮೂಲಕ ನೀಡಿದ್ಧಾರೆ. ಅನುಮಾನ ಮೂಡಿಸಿರುವುದು ಈ ವರ್ತನೆಯೇ.
ವಿನೋದ್ ರಾಜ್ ಅವರು ಚೆಕ್ ಹಸ್ತಾಂತರ ಮಾಡುತ್ತಾ ರೇಣುಕಾಸ್ವಾಮಿ ತಂದೆ, ತಾಯಿ ಹಾಗೂ ಪತ್ನಿಗೆ ಧೈರ್ಯ ತುಂಬಿದ್ದಾರೆ. ಇದೇ ವೇಳೆ ನಟ ವಿನೋದ್ ಅವರ ಮುಂದೆ ರೇಣುಕಾಸ್ವಾಮಿ ಪತ್ನಿ, ಪೋಷಕರು ಕಣ್ಣೀರಿಟ್ಟಿದ್ದಾರೆ.
ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡಿದ್ದಾರೆ. ನೋವಿನಲ್ಲಿದ್ದಾರೆ. ಇಂತಹ ಘಟನೆ ನಡೆಯಬಾರದಿತ್ತು. ಒಂದು ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಮಾನವೀಯತೆ ಎಲ್ಲಿ ಹೋಗಿದೆ ಅನ್ನೋದು ಪ್ರಶ್ನೆ. ಕಲಾವಿದರನ್ನು ನೋಡಿ ಜನ ಫಾಲೋ ಮಾಡ್ತಾರೆ. ಕಲಾವಿದರು ಒಳ್ಳೆಯದನ್ನೇ ಕೊಡುವ ಕೆಲಸ ಮಾಡಬೇಕು. ಕಲಾವಿದರು ಎಂಬ ಪಟ್ಟ ಚಿಕ್ಕದ್ದಲ್ಲ. ತುಂಬಾ ದೊಡ್ಡ ಜವಾಬ್ದಾರಿ ಇರುವಂತದ್ದು. ನಾವು ಏನು ಮಾಡಿದ್ರೂ ಜನ ನೋಡ್ತಾನೇ ಇರ್ತಾರೆ. ನಾವು ಯಾವತ್ತೂ ವಿವೇಕದಿಂದ ಮಾತಾಡಬೇಕು. ಒಳ್ಳೆ ಕೆಲಸ ಮಾಡ್ಬೇಕು. ನಮ್ಮತನವನ್ನು ಕಳೆದುಕೊಂಡಾಗ ಇಂತ ಕೆಲಸಗಳು ಆಗುತ್ತವೆ. ಆದಷ್ಟು ನಾವು ಸಮಾಜದಲ್ಲಿ ಇದ್ದೇವೆ ಎಂದು ಬದುಕಬೇಕು. ಜನಗಳ ಮಧ್ಯೆ ಬದುಕುವುದು ಹೇಗೆ ಅನ್ನೋದನ್ನು ಕಲಾವಿದರು ತಿಳಿಯಬೇಕು. ಹಿಂದಿನ ತಲೆಮಾರಿನವರನ್ನು ನೋಡಿ ನಾವು ಕಲಿಯಬೇಕು. ಮಾಧ್ಯಮಗಳು ತಿದ್ದಿ ಬುದ್ಧಿ ಹೇಳುವ ಕೆಲಸ ಮಾಡುತ್ತಿವೆ. ಮಾಧ್ಯಮಗಳು ಯಾರಿಗೂ ಶತ್ರು ಅಲ್ಲ. ಜೈಲಿನಲ್ಲಿ ಹೆಚ್ಚಾಗಿ ಮಾತಾಡಲು ಅವಕಾಶ ಕೊಡಲಿಲ್ಲ. ದರ್ಶನ್ ಅವರು ಸಂಕಟ ವ್ಯಕ್ತಪಡಿಸಿದರು ಅಷ್ಟೇ ಇನ್ನೇನು ಮಾತಾಡಿಲ್ಲ. ತಬ್ಬಿಕೊಂಡು ತಮ್ಮ ಪಶ್ಚಾತ್ತಾಪ ವ್ಯಕ್ತಪಡಿಸಿದರು. ನನ್ನ ನೋಡಿ ಭಾವುಕರಾಗಿ ಕಣ್ಣೀರು ಹಾಕಿದ್ದರು. ದರ್ಶನ್ ಒಂದು ರೀತಿಯ ನೋವು. ಆದ್ರೆ ಇವರ ಕುಟುಂಬದವರದ್ದು ಭಯಂಕರ ನೋವು. ಮನೆಯಲ್ಲಿನ ಕಷ್ಟಗಳನ್ನು ನೋಡಿ ಕಣ್ಣೀರು ಬಂತು ನನಗೆ ಎಂದೆಲ್ಲ ಮಾತನಾಡಿದ್ಧಾರೆ.
ಈ ಮಧ್ಯೆ ಎಲ್ಲರಲ್ಲೂ ಮೂಡಿರುವ ಪ್ರಶ್ನೆ ಏನೆಂದರೆ ವಿನೋದ್ ರಾಜ್ ಸಂಧಾನಕ್ಕೆ ಹೋಗಿದ್ರಾ ಅನ್ನೋದು. ಏಕೆಂದರೆ ವಿನೋದ್ ರಾಜ್ ಅವರು ತಮ್ಮ ಸ್ವಂತ ಹಣದಿಂದ 1 ಲಕ್ಷ ರೂ. ಚೆಕ್ ಕೊಟ್ಟಿದ್ದಾರೆ. ಬಹಿರಂಗವಾಗಿ ಏನೇ ಪ್ರೀತಿ ಇದ್ದರೂ.. ವಿನೋದ್ ರಾಜ್ ಮತ್ತು ದರ್ಶನ್ ಅವರ ನಡುವೆ ರಕ್ತ ಸಂಬಂಧವಂತೂ ಇಲ್ಲ. ರಕ್ತ ಸಂಬಂಧ ಇರುವವರು ಪರಹಾರ ಕೊಟ್ಟರೆ ದರ್ಶನ್ & ಗ್ಯಾಂಗ್ ವಿರುದ್ಧದ ಕೇಸ್ ಇನ್ನಷ್ಟು ಸ್ಟ್ರಾಂಗ್ ಆಗಬಹುದು ಎಂಬ ಆತಂಕದಲ್ಲಿ ವಿನೋದ್ ರಾಜ್ ಮೂಲಕ ನೆರವು ನೀಡುವ ಪ್ರಯತ್ನಗಳಾಗುತ್ತಿವೆಯಾ ಎಂಬುದು ಸದ್ಯಕ್ಕೆ ಇರುವ ಅನುಮಾನ.
ಅಂದರೆ ರೇಣುಕಾಸ್ವಾಮಿ ಕುಟುಂಬದವರಿಗೆ ದರ್ಶನ್, ಪತ್ನಿ ವಿಜಯಲಕ್ಷ್ಮಿ ದರ್ಶನ್, ತಮ್ಮ ದಿನಕರ್ ತೂಗುದೀಪ್, ತಾಯಿ ಮೀನಾ ತೂಗುದೀಪ್, ಅಕ್ಕ, ಬಾವ, ಅಕ್ಕನ ಮಗ.. ಹೀಗೆ ಯಾರು ಹಣ ಕೊಟ್ಟರೂ.. ಅದು ಅವರನ್ನು ಪ್ರಭಾವಿಸಿದರು ಅನ್ನೋ ಲೆಕ್ಕಕ್ಕೆ ಬರುತ್ತೆ. ಕೊಲೆಯಂತಹ ಪ್ರಕರಣದಲ್ಲಿ ಈ ರೀತಿ ಹಣ ಕೊಡುವುದು, ಪ್ರಭಾವ ಬೀರುವುದು ಅಪರಾಧ. ಹೀಗಾಗಿಯೇ ವಿನೋದ್ ರಾಜ್ ಮೂಲಕ ಸಂಧಾನ ಯತ್ನ ನಡೆಯುತ್ತಿದೆಯಾ ಎನ್ನುವುದು ಎಲ್ಲರಲ್ಲಿ ಮೂಡಿರುವ ಸಂಶಯ.



