ವಿನಯ್ ರಾಜ್ ಕುಮಾರ್ ಅವರ ‘ಪೆಪೆ’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಟ್ ನೀಡಿದೆ. ಹಿಂಸೆ, ಲೈಂಗಿಕ ದೃಶ್ಯಗಳಿದ್ದರೆ ಅಂತಹ ಸಿನಿಮಾಗೆ ಎ ಸರ್ಟಿಫಿಕೇಟ್ ಕೊಡ್ತಾರೆ. ಆ ಸಿನಿಮಾವನ್ನು ವಯಸ್ಕರು ಮಾತ್ರವೇ ನೋಡಬೇಕು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿನಿಮಾಗೆ ಹೋಗುವಂತಿಲ್ಲ. ಹಾಗಂತ ಸಿನಿಮಾದಲ್ಲಿ ಅಶ್ಲೀಲ ದೃಶ್ಯಗಳೇನಿಲ್ಲ. ಸೆಕ್ಸ್ ದೃಶ್ಯಗಳೂ ಇಲ್ಲ. ಆದರೆ.. ಹಿಂಸೆ ಅತಿಯಾಗಿದೆ.
ಸಿನಿಮಾದಲ್ಲಿ ಹಿಂಸೆಯ ವೈಭವೀಕರಣವಿದ್ದು, ಹೀಗಾಗಿ ಸಿನಿಮಾಕ್ಕೆ ‘ಎ’ ಸರ್ಟಿಫಿಕೇಟ್ ದೊರೆತಿದೆ. ತಮ್ಮ ಹಿಂದಿನ ಸಿನಿಮಾ ‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ಲವರ್ ಬಾಯ್ ಆಗಿ, ಸರಳ ಯುವಕನಾಗಿ ಗಮನ ಸೆಳೆದಿದ್ದ ನಟ ವಿನಯ್ ರಾಜ್ಕುಮಾರ್, ಈಗ ‘ಪೆಪೆ’ ಸಿನಿಮಾದಲ್ಲಿ ರಗಡ್ ಆಗಿ ಅಬ್ಬರಿಸಿದ್ದಾರೆ.
‘ಪೆಪೆ’ ಸಿನಿಮಾದಲ್ಲಿರೋದು ಹಳ್ಳಿಗಾಡಿನ ಯುವಕನೊಬ್ಬನ ಕತೆ. ಕ್ರೈಂ ಥ್ರಿಲ್ಲರ್. ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದು, ಮೇದಿನಿ ಕೆಳಮನೆ, ಮಯೂರ್ ಪಟೇಲ್, ಬಲ ರಾಜವಾಡಿ, ಅರುಣಾ ಬಾಲರಾಜ್, ನವೀನ್ ಡಿ ಪಡೀಲ್ ಇನ್ನೂ ಹಲವರು ಪೆಪೆಯಲ್ಲಿದ್ದಾರೆ. ಯುವ ನಿರ್ದೇಶಕ ಬಿಎಂ ಶ್ರೀರಾಮ್ ನಿರ್ದೇಶನದ ಪೆಪೆಗೆ ಉದಯ ಶಂಕರ್ ನಿರ್ಮಾಪಕ.
ವಿನಯ್ ರಾಜ್ಕುಮಾರ್ ರೆಗ್ಯುಲರ್ ಸ್ಟಾರ್ ಜಾನರ್ ಸಿನಿಮಾಗಳ ಹಾದಿ ಹಿಡಿಯದೆ, ಕತೆ ಪ್ರಧಾನ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮಾಸ್, ಕಮರ್ಶಿಯಲ್ ಸಿನಿಮಾಗಳ ಕಡೆಗೆ ವಾಲದೆ ತಮ್ಮದೇ ಹಾದಿಯಲ್ಲಿ ನಡೆಯುತ್ತಾ ಭರವಸೆ ಮೂಡಿಸುತ್ತಿದ್ದಾರೆ. ಕಥಾಪ್ರಧಾನ ಸಿನಿಮಾಗಳನ್ನಷ್ಟೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಒಂದು ಸರಳ ಪ್ರೇಮಕಥೆಗೂ ಮೊದಲು ಫೈಟರ್ ಆಗಿ ನಟಿಸಿದ್ದ ವಿನಯ್, ಈ ಪೆಪೆ ಚಿತ್ರದಲ್ಲಿ ಹಳ್ಳಿ ಹುಡುಗನಾಗಿ ನಟಿಸಿದ್ದಾರೆ.



