ವಿನಯ್ ರಾಜಕುಮಾರ್ ಅವರಿಗೆ ಎಲ್ಲವೂ ಇದೆ. ಆದರೆ ಗೆಲುವು ಸಿಕ್ಕಿಲ್ಲ. ದೊಡ್ಮನೆ ಹುಡುಗ ಎಂಬ ಕಾರಣಕ್ಕೆ ಒಂದು ಫ್ಯಾನ್ ಬೇಸ್ ಈಗಲೂ ಇದೆ. ಆದರೆ ಗೆಲುವು ಮಾತ್ರ ಕೈಗೆಟಕುತ್ತಿಲ್ಲ. ಮೊದಲು ನಟಿಸಿದ್ದು ಸಿದ್ದಾರ್ಥ ಚಿತ್ರದಲ್ಲಿ. ಸಿನಿಮಾ ಸದ್ದು ಮಾಡಿತಾದರೂ ದೊಡ್ಡ ಗೆಲುವು ಸಿಗಲಿಲ್ಲ. ಆಮೇಲೆ ಬಂದ ರನ್ ಆಂಟನಿಯೂ ಗೆಲ್ಲಲಿಲ್ಲ. ಅನಂತು ವರ್ಸಸ್ ನುಸ್ರತ್ ಸಿನಿಮಾ ಸದ್ದಿಲ್ಲದೆ ಬಂದು ಹೋಯ್ತು. ಸಿನಿಮಾ ಚೆನ್ನಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿತ್ತು ಸಿನಿಮಾ ಟಿವಿಗಳಲ್ಲಿ ಬಂದ ಬಳಿಕ. ಅದಾದ ಮೇಲೆ 10 ಸಿನಿಮಾ ಮಾಡಿದ್ರು. 10 ಸಿನಿಮಾ ಹೇಗೆ ಬಂತು ಎಲ್ಲಿ ಹೋಯ್ತು ಅನ್ನೋದು ಸ್ವತಃ ನಿರ್ಮಾಪಕರಿಗೂ ನೆನಪಿಲ್ಲವೇನೋ.. ಇಂಡಸ್ಟ್ರಿಯವರಿಗೇ ಗೊತ್ತಿಲ್ಲದಂತೆ ರಿಲೀಸ್ ಆದ 10 ಸಿನಿಮಾ ಕೂಡಾ ವಿನಯ್ ಅವರಿಗೆ ಹಿಟ್ ಕೊಡಲಿಲ್ಲ.
ಅಲ್ಲದೆ ಅಂದೊಂದಿತ್ತು ಕಾಲ ಹಾಗೂ ಪೆಪೆ ಚಿತ್ರಗಳು ಟೀಸರು, ಟ್ರೇಲರಿನಲ್ಲೇ ಸದ್ದು ಮಾಡ್ತಿವೆ. ಶುರುವಾಗಿ ವರ್ಷಗಳೇ ಕಳೆದು ಹೋಗಿವೆ. ಅಪ್ಪ ಸ್ಟಾರ್. ದೊಡ್ಡಪ್ಪ ಹ್ಯಾಟ್ರಿಕ್ ಹೀರೋ. ಚಿಕ್ಕಪ್ಪ ಪವರ್ ಸ್ಟಾರ್. ತಾತನಂತೂ ಕರ್ನಾಟಕಕ್ಕೇ ವರನಟ. ಹೀಗಿದ್ದರೂ ಗೆಲವು ಮಾತ್ರ ಮೈಲು ದೂರ. ಆದರೆ ಈಗ ಗೆಲುವು ಸಿಕ್ಕೀತಾ ಅನ್ನೋ ಕುತೂಹಲ ಮೂಡಿಸಿರುವುದು ಸಿಂಪಲ್ ಸುನಿ.
ಬೇರೆಯವರಂತಲ್ಲ. ಕರೆಕ್ಟ್ ಪ್ರೊಡ್ಯೂಸರ್ ಜೊತೆ ಬರೋ ಸಿಂಪಲ್ ಸುನಿ, ಸುಖಾಸುಮ್ಮನೆ ಅದ್ಧೂರಿ ಸಿನಿಮಾ ಮಾಡಲ್ಲ. ಹೇಳಿದ ಟೈಮಿಗೆ ರಿಲೀಸ್ ಕೂಡಾ ಮಾಡ್ತಾರೆ. ಅವರದ್ದೇ ಈ ಒಂದು ಸರಳ ಪ್ರೇಮಕಥೆ.
ಕಣ್ಣ ತುದಿಯ ನಕ್ಷತ್ರ ಕದಿಯೋಕೆ..
ನಿನ್ನ ತುಟಿಯ ಸದ್ದಿರದ ಹಾರೈಕೆ..
ಸರಳ ಪ್ರೇಮಕಥೆಯ ಗೀತೆ. ಇದು ರೊಮ್ಯಾಂಟಿಕ್ ಸಾಂಗ್. ಭಾವನೆಗಳು ಮೇಳೈಸಿರುವ ಗೀತೆಯಲ್ಲಿರುವುದು ವಿನಯ್ ರಾಜಕುಮಾರ್. ರಾಧಾಕೃಷ್ಣ ಖ್ಯಾತಿಯ ಮಲ್ಲಿಕಾ ಸಿಂಗ್. ಚಿತ್ರದಲ್ಲಿ ಇನ್ನೊಬ್ಬ ಸರಳ ಸುಂದರಿಯೂ ಇದ್ಧಾರೆ.. ಸ್ವಾತಿಷ್ಟ. ಈ ಪ್ರೇಮಗೀತೆಯನ್ನು ರಿಲೀಸ್ ಮಾಡಿದ್ದು ಗೋಲ್ಡನ್ ಸ್ಟಾರ್ ಗಣೇಶ್.
ಈ ಸಿನಿಮಾಗೆ ಸಿಂಪಲ್ ಸುನಿ ಡೈರೆಕ್ಟರ್. ಎಂದಿನಂತೆ ಒಂದು ಸಿಂಪಲ್ ಲವ್ ಸ್ಟೋರಿ ಇರುತ್ತೆ ಅಂದ್ಕೊಂಡ್ರೆ ಗಣೇಶ್ ಹೇಳೋದೇ ಬೇರೆ.. ಸುನಿ ಸಿಂಪಲ್ ಆಗಿ ಕಥೆ ಹೇಳ್ತಾರೆ. ಆದರೆ ಮೇಕಿಂಗ್ ಕಾಂಪ್ಲಿಕೆಟೆಡ್ ಆಗಿರುತ್ತೆ. ಅದಕ್ಕೆ ಕಾಂಪ್ಲಿಕೆಟೆಡ್ ಸುನಿ ಅಂತೀನಿ ಅನ್ನೋ ಗಣೇಶ್ ಸಿಂಪಲ್ ಅನ್ನೋ ಪದ ಸುನಿಗಿಂತ ಹೆಚ್ಚಾಗಿ ವಿನಯ್‌ಗೆ ಸೂಟ್ ಆಗುತ್ತೆ. ತುಂಬಾನೇ ಸಿಂಪಲ್. ಆರಾಮಾಗಿ ಇರುತ್ತಾರೆ. ತಲೆಯಲ್ಲಿ ಯಾವುದನ್ನೂ ಇಟ್ಕೊಂಡು ಓಡಾಡುವುದಿಲ್ಲ. ಈ ಸಿನಿಮಾ ದೊಡ್ಡ ಯಶಸ್ಸನ್ನು ಕೊಡಲಿ. ರೆಕಾರ್ಡ್ಸ್ ರೆಕಾರ್ಡ್ಸ್ ಅಂತ ಏನು ಅಂತೀವಿ. ಅದನ್ನೆಲ್ಲ ಮೀರಿ ಈ ಸಿನಿಮಾ ಆಗಲಿ ಎಂದು ಹಾರೈಸಿದ್ದಾರೆ.
ಒಂದು ಸರಳ ಪ್ರೇಮಕಥೆಗೆ ವೀರ ಸಮರ್ಥ್ ಮ್ಯೂಸಿಕ್ ನೀಡಿದ್ದು, ಕೇಶವ್ ಆನಂದ್ ಹಾಡಿದ್ಧಾರೆ. ಸಾಹಿತ್ಯ ಸಚಿನ್ ಸಂಘೆ ಅವರದ್ದು. ರಾಮ್ ಮೂವೀಸ್ ಬ್ಯಾನರ್ ಮೂಲಕ ಮೈಸೂರು ರಮೇಶ್ ಸಿನಿಮಾ ನಿರ್ಮಾಣ ಮಾಡಿದ್ಧಾರೆ.



