ಸಿಟಿಲೈಟ್ಸ್. ಈ ಚಿತ್ರ ಕನ್ನಡದಲ್ಲಿ ಹಲವು ಅಪರೂಪಗಳಿಗೆ ಸಾಕ್ಷಿಯಾಗಲಿದೆ. ಮೊದಲನೆಯದಾಗಿ ಈ ಚಿತ್ರಕ್ಕೆ ದುನಿಯಾ ವಿಜಯ್ ಡೈರೆಕ್ಟರ್. ಆದರೆ ಹೀರೋ ಅಲ್ಲ. ದುನಿಯಾ ವಿಜಯ್ ಸಿಟಿ ಲೈಟ್ಸ್‌ಗೆ ವಿನಯ್ ರಾಜ್ ಕುಮಾರ್ ಹೀರೋ. ನಾಯಕಿಯಾಗಿರುವುದು ಮೋನಿಷಾ ವಿಜಯ್. ವಿಜಯ್ ಅವರ ಮುದ್ದಿನ ಮಗಳು. ಈ ಚಿತ್ರದ ಮೂಲಕ ಮಗಳ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಅರ್ಜುನ್ ಸರ್ಜಾ, ಡಿ.ರಾಜೇಂದ್ರ ಬಾಬು ಸಾಲಿಗೆ ಸೇರುತ್ತಿದ್ದಾರೆ ಡೈರೆಕ್ಟರ್ ಸಲಗ ವಿಜಯ್.
ದುನಿಯಾ ವಿಜಯ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾಗೆ ಅವರ ಮಗಳೇ ಹೀರೋಯಿನ್. ‘ಸಲಗ’, ‘ಭೀಮ’ ಸಿನಿಮಾಗಳನ್ನು ಮಾಡಿ ಗೆದ್ದ ವಿಜಯ್ ಅವರ ಹೊಸ ಸಿನಿಮಾ ಸಿಟಿ ಲೈಟ್ಸ್ ಚಿತ್ರದ ಮೂಲಕ ದೊಡ್ಮನೆ ಹುಡುಗನ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ಧಾರೆ.
‘ಸಲಗ’ ಮತ್ತು ‘ಭೀಮ’ ಸಿನಿಮಾಗಳಲ್ಲಿ ನಿರ್ದೇಶಕ ಮತ್ತು ನಾಯಕರಾಗಿದ್ದ ವಿಜಯ್ ಈ ಚಿತ್ರಕ್ಕೆ ಹೀರೋ ಆಗಿ ವಿನಯ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಿಜಯ್ ಚಿತ್ರಗಳಲ್ಲಿ ಆಕ್ಷನ್ ಭರಪೂರವಾಗಿರುತ್ತದೆ. ಹಾಗಾದರೆ ಸಿಟಿ ಲೈಟ್ಸ್ ಚಿತ್ರದಲ್ಲಿಯೂ ಇದೇ ರೀತಿ ಆಕ್ಷನ್ ಸನ್ನಿವೇಶಗಳುರುತ್ತವಾ..? ‘ಸಿಟಿ ಲೈಟ್ಸ್’ ಸಿನಿಮಾಗೆ ‘ಜವಾಬ್ ದಾರಿ…ದೀಪಗಳು’ ಎಂಬ ಟ್ಯಾಗ್ ಲೈನ್ ಇದೆ. ಈ ಚಿತ್ರಕ್ಕೆ ಸಂಪೂರ್ಣ ಹೊಸ ತಂಡ ಕೆಲಸ ಮಾಡಲಿದೆ. ಕಥೆಗೆ ಹೊಸ ಮುಖ ಬೇಕಿತ್ತು ಎಂಬ ಕಾರಣಕ್ಕೆ ತಮ್ಮ ಮಗಳು ಮೋನಿಷಾ ಅವರನ್ನು ಆಯ್ಕೆ ಮಾಡಿದೆವು ಅಲ್ಲದೆ ಆ ಪಾತ್ರಕ್ಕೆ ಮೊನಿಷಾ ಹೊಂದುತ್ತಾರೆ ಎನ್ನುವುದು ವಿಜಯ್ ಅವರ ಮಾತು. ನ್ಯೂಯಾರ್ಕ್‌ನಲ್ಲಿ ನಟನೆ ತರಬೇತಿಯನ್ನು ಪಡೆದಿರುವ ಮೋನಿಷಾ, ತಂದೆಯ ನಿರ್ದೇಶನದಲ್ಲೇ ಮೊದಲ ಸಿನಿಮಾ ಮಾಡುತ್ತಿರುವುದು ವಿಶೇಷ.
ಈ ವರ್ಷ ‘ಒಂದು ಸರಳ ಪ್ರೇಮಕಥೆ’ ರೀತಿಯ ರೊಮ್ಯಾಂಟಿಕ್ ಕಾಮಿಡಿ ಲವ್ ಸ್ಟೋರಿ ಸಿನಿಮಾ ಮಾಡಿದ್ದ ವಿನಯ್, ಆನಂತರ ‘ಪೆಪೆ’ ರೀತಿಯ ಕ್ರೈಮ್ ಥ್ರಿಲ್ಲರ್ ಸಿನಿಮಾ ನೀಡಿದ್ದರು. ಇದರ ಜೊತೆಗೆ ಅವರ ‘ಅಂದೊಂದಿತ್ತು ಕಾಲ’, ‘ಗ್ರಾಮಾಯಣ’ ಸಿನಿಮಾಗಳು ತೆರೆಗೆ ಬರಬೇಕಿವೆ.
ದುನಿಯಾ ವಿಜಯ್ ಮತ್ತು ದೊಡ್ಮನೆಯ ಬಾಂಧವ್ಯ ಹೊಸದೇನಲ್ಲ. ಈ ಹಿಂದೆ ದುನಿಯಾ ವಿಜಯ್ ನಿರ್ದೇಶನದ ಮೊದಲ ಚಿತ್ರ ಸಲಗ ಚಿತ್ರವನ್ನು ಪ್ರಮೋಟ್ ಮಾಡಿದ್ದವರು ಶಿವಣ್ಣ ಮತ್ತು ಪುನೀತ್. ನಂತರ ಭೀಮ ಚಿತ್ರಕ್ಕೆ ಶಿವಣ್ಣ ಅವರು ಪ್ರಚಾರ ಕೊಟ್ಟಿದ್ದರು. ಶಿವಣ್ಣ ಮತ್ತು ಗೀತಾ ಅವರಿಗೆ ಹೂವಿನ ಅಭಿಷೇಕ ಮಾಡುವ ಮೂಲಕ ಖುಷಿ ಪಟ್ಟಿದ್ದರು ವಿಜಯ್. ತಮಗೆ ಶಿವಣ್ಣ ಆತ್ಮೀಯರಲ್ಲ. ನಾವು ವಯಸ್ಸು ಮತ್ತು ಸಾಧನೆಯಲ್ಲಿ ಸಮಾನರೂ ಅಲ್ಲ. ಅವರು ನಮಗಿಂತ ದೊಡ್ಡವರು. ಹಿರಿಯರಿದ್ದಂತೆ ಎಂದು ಹೇಳಿಕೊಂಡಿದ್ದರು ವಿಜಯ್. ಇದೀಗ ರಾಘವೇಂದ್ರ ರಾಜ್ ಕುಮಾರ್ ಪುತ್ರನ ಚಿತ್ರಕ್ಕೆ ನಿರ್ದೇಶಕರಾಗುತ್ತಿದ್ದಾರೆ ವಿಜಯ್.



