ವಿನಯ್ ರಾಜ್ ಕುಮಾರ್. ಆರಂಭದಿಂದಲೂ ಹೀರೋಗಿರಿ ಕಥೆಗಳನ್ನು ಸೈಡಿಗಿಟ್ಟು, ಪ್ರಯೋಗಗಳಲ್ಲೇ ಗಮನ ಸೆಳೆಯುತ್ತಿರುವ ನಟ. ದೊಡ್ಡಪ್ಪ, ಚಿಕ್ಕಪ್ಪ, ಅಪ್ಪ, ತಾತ ಯಾರ ಶೈಲಿಯನ್ನೂ ಫಾಲೋ ಮಾಡದ ವಿಶೇಷ ನಟ. ಹಾಗೆ ನೋಡಿದರೆ.. ಈ ಹಾದಿಯೇ ತುಂಬಾ ಕಷ್ಟ. ಈ ಬಾರಿಯೂ ಅಷ್ಟೇ.. ಅಂದೊಂದಿತ್ತು ಕಾಲ ಎಂಬ ಚಿತ್ರದ ಮೂಲಕ ಹೊಸ ಪ್ರಯೋಗಕ್ಕೆ ತಮ್ಮನ್ನು ತಾವು ಒಡ್ಡಿಕೊಂಡಿದ್ದಾರೆ. ಚಿತ್ರ ಆಗಸ್ಟ್ ಕೊನೆಯಲ್ಲಿ ಬಿಡುಗಡೆಯಾಗಲಿದೆ. ಇದೀಗ ಆ ಚಿತ್ರದ ‘ಅರೇರೇ ಯಾರೋ ಇವಳು’ ಹಾಡು ರಿಲೀಸ್ ಆಗಿದೆ.
ವಿನಯ್ ರಾಜ್ ಕುಮಾರ್ ಈ ಬಾರಿ ಚಿಕ್ಕೋನಾಗಿ ಸ್ಕೂಲ್ ಯೂನಿಫಾರ್ಮ್ ಹಾಕ್ಕೊಂಡಿದ್ದಾರೆ. ವಿನಯ್ ರಾಜಕುಮಾರ್ ಮತ್ತು ನಿಶಾ ರವಿಕೃಷ್ಣನ್ 10ನೇ ತರಗತಿಯ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದು, ಹಾಡನ್ನು ನೋಡಿದವರೆಲ್ಲ ತಮ್ಮ ಬಾಲ್ಯದ ದಿನಗಳ ಲವ್ ಸ್ಟೋರಿ ನೆನಪಿಸಿಕೊಳ್ತಿದ್ದಾರೆ. ಚಿಕ್ಕೋನಾಗಿ ಚಿಕ್ಕೋನಾಗಿ ಸ್ಕೂಲಿಗೆ ಬಂದ ವಿನಯ್ ರಾಜ್ ಕುಮಾರ್ ಈ ಚಿತ್ರದಲ್ಲಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ತಾರಂತೆ.
ಹಾಡಿನ ಸಾಹಿತ್ಯ, ಕಾನ್ಸೆಪ್ಟಿಗೆ ತಕ್ಕಂತೆ ಇಡೀ ರಾಜ್ಯಕ್ಕೆ 10ನೇ ತರಗತಿಯಲ್ಲಿ ಫಸ್ಟ್ ಬಂದ ಮಲ್ಲಸಂದ್ರದಲ್ಲಿರುವ ಬಿ.ಎನ್ ಆರ್ ಪಬ್ಲಿಕ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳಿಂದ ರಿಲೀಸ್ ಮಾಡಿಸಿದ್ದಾರೆ. ಹಾಗಾದರೆ.. ಇದು ಎಸ್ ಎಸ್ ಎಲ್ ಸಿ ಲವ್ ಸ್ಟೋರಿಯಾ ಎಂದರೆ.. ಹಾಗೇನಿಲ್ಲ.
ಈಗ ನಮ್ಮ ಚಿತ್ರದ 2ನೇ ಹಾಡು ಬಿಡುಗಡೆಯಾಗುತ್ತಿದೆ, ಇದು ನನ್ನ ಫೇವರಿಟ್ ಹಾಡು. ನಾನು ನಿರ್ದೇಶಕ ಕೀರ್ತಿಗೆ ಇದನ್ನೇ ಮೊದಲು ಬಿಡಿ ಎಂದಿದ್ದೆ. ಈ ಚಿತ್ರದಲ್ಲಿ ನಾನು 16 ವರ್ಷದ ಹುಡುಗನ ಗೆಟಪ್‌ನಲ್ಲಿ ಮಾಡುವುದೇ ಒಂದು ದೊಡ್ಡ ಚಾಲೆಂಜ್ ಆಗಿತ್ತು. ತೂಕ ಇಳಿಸುವುದೇ ಅತಿ ದೊಡ್ಡ ಕಷ್ಟವಾಗಿತ್ತು ಎಂದ ವಿನಯ್, ತಮ್ಮ ಶಾಲಾ ದಿನಗಳಲ್ಲಿ ತಾವು ಇಷ್ಟಪಟ್ಟ ಹುಡುಗಿಯ ಹಿಂದೆ ಓಡಾಡಿದ ದಿನಗಳನ್ನೂ ನೆನಪಿಸಿಕೊಂಡಿದ್ದಾರೆ. ಆದರೆ ನಿಜ ಜೀವನದಲ್ಲಿ ಹತ್ತನೇ ತರಗತಿ ಓದುವಾಗ ನಾನು ಬಹಳ ಮುಗ್ಧ ಹುಡುಗ. ಮೂರು ಶೇಡ್ ಗಳಲ್ಲಿ ನನ್ನ ಪಾತ್ರ ಸಾಗುತ್ತದೆ ಎಂದು ಕೂಡಾ ಹೇಳಿಕೊಂಡಿದ್ದಾರೆ ವಿನಯ್ ರಾಜ್ ಕುಮಾರ್. ಚಿತ್ರಕ್ಕಾಗಿ ಸ್ಲಿಮ್ ಆಗಿರುವ ವಿನಯ್ ರಾಜ್ ಕುಮಾರ್, ಮೀಸೆಗೂ ಬೈಬೈ ಹೇಳಿದ್ದಾರೆ. ಗಡ್ಡ ಮೀಸೆಗಳಿಲ್ಲದ ವಿನಯ್ ಒಂಥರಾ ಕ್ಯೂಟ್ ಆಗಿ ಕಾಣಿಸ್ತಾರೆ ಎನ್ನವುದೂ ನಿಜ.
ಹಾಡಿನಲ್ಲಿರುವ ನಟಿ ನಿಶಾ ರವಿಕೃಷ್ಣನ್ ಅವರದ್ದು ಚಿತ್ರದಲ್ಲಿ ಚಿಕ್ಕ ಪಾತ್ರವಂತೆ. ಸಣ್ಣ ಪಾತ್ರವಾದರೂ ಬಹಳ ಇಂಪಾರ್ಟೆಂಟ್ ಆಗಿದೆ. ನಿರ್ದೇಶಕರು, ನಿರ್ಮಾಪಕರು ತುಂಬಾ ಸಹಕಾರ ನೀಡಿದ್ದಾರೆ. ಅದೇ ರೀತಿ ನಟ ವಿನಯ್ ರಾಜಕುಮಾರ್ ಜೊತೆ ಅಭಿನಯಿಸಿದ್ದು ಖುಷಿ ತಂದಿದೆ ಎಂದು ಹೇಳಿಕೊಂಡಿದ್ದಾರೆ ನಿಶಾ.
ನಿರ್ದೇಶಕ ಕೀರ್ತಿ ಕೃಷ್ಣಪ್ಪ ಅವರಿಗೆ ಇದು ಮೊದಲ ಸಿನಿಮಾ. ಅರೇರೇ ಯಾರೋ ಇವಳು.. ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದು, ರಾಘವೇಂದ್ರ ವಿ ಅವರ ಸಂಗೀತ ನಿರ್ದೇಶನ ಮಾಡಿದ್ದಾರೆ. ನಿಹಾಲ್ ತಾರೂ ಹಾಡಿದ್ದಾರೆ. ಅಂದ ಹಾಗೆ ಈ ಚಿತ್ರವನ್ನು ಕಾಲಾಪತ್ಥರ್ ಚಿತ್ರ ನಿರ್ಮಾಣ ಮಾಡಿದ್ದವರೇ ನಿರ್ಮಾಣ ಮಾಡಿದ್ದಾರೆ.



