ಪೆಪೆ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಉದ್ದಕ್ಕೂ ರಕ್ತ.. ಕ್ರೌರ್ಯ.. ಹಿಂಸೆಗಳ ವೈಭವೀಕರಣವೇ ಎದ್ದು ಕಾಣುತ್ತದೆ. ಅಂದಹಾಗೆ ಟ್ರೇಲರ್ ರಿಲೀಸ್ ಮಾಡಿರುವುದು ಕಿಚ್ಚ ಸುದೀಪ್. ಚಿತ್ರದ ಟ್ರೇಲರ್ ನೋಡಿದರೆ.. ಹಿಂಸೆ ಎದ್ದು ಕಾಣುತ್ತದೆ. ಮಲಯಾಳಂ ಚಿತ್ರಗಳ ಫ್ಲೇವರ್ ಇದ್ದಂತೆ ಕಾಣುತ್ತಿದೆ. ಆದರೆ.. ಅದೆಲ್ಲದರ ಹಿಂದೆ ಒಂದು ಪ್ರೀತಿಯ ಎಳೆಯೂ ಇದೆ. ಜಾತಿ ವ್ಯವಸ್ಥೆ, ಮಹಿಳಾ ಶೋಷಣೆ ಬಗ್ಗೆ ಕೂಡ ಸಿನಿಮಾದಲ್ಲಿ ಮಹತ್ವದ ಕತೆ ಇರುವು ಸುಳಿವು ಸಿಕ್ಕಿದೆ. ಹಳ್ಳಿಯೊಂದರ ದ್ವೇಷ, ರಾಜಕೀಯ, ನಂಬಿಕೆ, ಮೋಹ, ಪ್ರೀತಿ ಎಲ್ಲವನ್ನೂ ಟ್ರೇಲರಿನಲ್ಲಿ ಹದವಾಗಿ ಕೂರಿಸಿದ್ದಾರೆ ನಿರ್ದೇಶಕ ಶ್ರೀಲೀಷ್ ಎಸ್ ನಾಯರ್.
ಚಿತ್ರದ ನಾಯಕ ವಿನಯ್ ರಾಜಕುಮಾರ್. ಇದುವರೆಗೆ ಹೋಮ್ಲಿ ಲವ್ಲಿ ಪಾತ್ರಗಳನ್ನೇ ಮಾಡಿದ್ದ ವಿನಯ್, ಈ ಚಿತ್ರದಲ್ಲಿ ರಗಡ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಾಯಕಿ ಇರುವ ಸುಳಿವು ಟ್ರೈಲರ್ನಲ್ಲಿ ಕಾಣುವುದಿಲ್ಲ. ಮೇದಿನ ಕೆಳಮನೆ ಒಂದೆರಡು ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ, ಆದರೆ ಅವರದ್ದು ನಾಯಕಿ ಪಾತ್ರದಂತೆ ಕಾಣಿಸುವುದಿಲ್ಲ. ಆದರೆ.. ಭಯ ಹುಟ್ಟಿಸುತ್ತಾರೆ.
ಉದಯ್ ಸಿನಿ ಬ್ಯಾನರ್ ಮೂಲಕ ನಿರ್ಮಾಣವಾಗಿರುವ ಸಿನಿಮಾಗೆ ಉದಯ್ ಶಂಕರ್ ಮತ್ತು ಶ್ರೀರಾಮ್ ಕೋಲಾರ ನಿರ್ಮಾಪಕರಾಗಿದ್ದಾರೆ. ಸಂಗೀತ ನೀಡಿರುವುದು ಪೂರ್ಣಚಂದ್ರ ತೇಜಸ್ವಿ, ಕ್ಯಾಮೆರಾ ಅಭಿಷೇಕ್ ಕಾಸರಗೋಡು ಅವರದ್ದು. ಆಕ್ಷನ್ ದೃಶ್ಯಗಳನ್ನು ನಿರ್ದೇಶನ ಮಾಡಿರುವುದು ರವಿವರ್ಮ, ಚೇತನ್ ಡಿಸೋಝಾ, ಡಿಫರೆಂಟ್ ಡ್ಯಾನಿ ಮತ್ತು ನರಸಿಂಹ.
ವಿನಯ್ ರಾಜ್ ಕುಮಾರ್ ಜೊತೆ ಮಯೂರ್ ಪಟೇಲ್, ನವೀನ್ ಡಿ ಪಡ್ಲಿ, ಯಶ್ ಶೆಟ್ಟಿ, ಮೇದಿನಿ ಕೆಳಮನೆ, ರವಿಪ್ರಸಾದ್ ಮಂಡ್ಯ, ಕಿಟ್ಟಿ ಶ್ರೀಧರ್, ಶಶಿಧರ್ ಭಟ್, ಬಾಲ ರಾಜವಾಡಿ, ಅರುಣ್ ಬಾಲರಾಜ್, ಸಂಧ್ಯಾ ಅರಕೆರೆ, ಶಿವು ಕಬ್ಬನಹಳ್ಳಿ ಮೊದಲಾದವರು ನಟಿಸಿದ್ದಾರೆ. ನಟ ಸುದೀಪ್ ಅವರು ‘ಪೆಪೆ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಚಿತ್ರ ಆಗಸ್ಟ್ 30ರಂದು ರಿಲೀಸ್ ಆಗಲಿದೆ.
ಸಿನಿಮಾ ಎಂಬುದು ಆಲದ ಮರ ಎಂದ ಕಿಚ್ಚ ಸುದೀಪ್, ಸೋಲಲು ಹೆದರಬೇಡಿ, ಸೋಲುವುದೇ ಗೆಲ್ಲುವುದಕ್ಕೋಸ್ಕರ ಎಂಬ ಸ್ಪೂರ್ತಿಯ ಮಾತುಗಳನ್ನು ಹೇಳಿದ ಸುದೀಪ್, ಪೆಪೆ ಟೀಂಗೆ ಶುಭ ಹಾರೈಸಿದ್ದಾರೆ. “ಇಂಥ ಪಾತ್ರದಲ್ಲಿ ವಿನಯ್ ಅವರನ್ನು ನೋಡಲು ನಾನು ಇಷ್ಟ ಪಡುತ್ತೇನೆ. ಯಾವತ್ತಿಗೂ ಪಾತ್ರ ಮಾತನಾಡಬೇಕು. ಹೀರೋಗಿಂತ ಪಾತ್ರ ದೊಡ್ಡದು. ವಿನಯ್ ನಿರ್ವಹಿಸಿರುವ ಈ ಪಾತ್ರ ಸಖತ್ ಕುತೂಹಲ ಮೂಡಿಸಿದೆ. ಇಂತಹ ಸಿನಿಮಾಗಳನ್ನು ನೀವು ಮಾಡಿ. ನಿಮಗೆ ಒಪ್ಪುತ್ತದೆ ಎಂದಿದ್ದಾರೆ ಸುದೀಪ್.
ನೂರಾರು ಅಭಿಮಾನಿಗಳು ವಿನಯ್ ರಾಜ್ ಕುಮಾರ್ ಅವರ ಮನೆ ಎದುರು ನೆರೆದಿದ್ದು, ಅಭಿಮಾನಿಗಳ ಸಮ್ಮುಖದಲ್ಲಿ ಟ್ರೇಲರ್ ರಿಲೀಸ್ ಮಾಡಿದ್ದಾರೆ ವಿನಯ್ ರಾಜ್ ಕುಮಾರ್. ಒಂದು ಸರಳ ಪ್ರೇಮಕಥೆಯಲ್ಲಿ ಕ್ಲಾಸ್ ವರ್ಗದ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದ್ದ ವಿನಯ್, ಈ ಚಿತ್ರದ ಮೂಲಕ ಮಾಸ್ ಪ್ರೇಕ್ಷಕರ ಹೃದಯ ಮುಟ್ಟುವ ಭರವಸೆ ಇದೆ.



