ನೀವು ಬೆಂಗಳೂರಿನಲ್ಲಷ್ಟೇ ಅಲ್ಲ.. ಹಳ್ಳಿ ಹಳ್ಳಿಗಳಲ್ಲಿ, ಸಣ್ಣ ಪುಟ್ಟ ಪಟ್ಟಣ, ನಗರಗಳಲ್ಲಿ ಇದನ್ನು ನೋಡಿಯೇ ಇರುತ್ತೀರಿ. ಚೌಡಮ್ಮ ದೇವಿ, ಚೌಡಿ ಎಂದು ಹೇಳಿಕೊಳ್ಳೋ ಭಕ್ತರು ತಲೆಯ ಮೇಲೊಂದು ಪುಟ್ಟ ದೇವಿಯ ವಿಗ್ರಹ ಇಟ್ಟುಕೊಂಡು, ಚಾವಡಿ ಅಥವಾ ಚೌಡಿಯಿಂದ ಹೊಡೆದುಕೊಂಡು ಬಂದು ಭಿಕ್ಷೆ ಬೇಡುತ್ತಾರೆ. ಅದೊಂದು ಅಲೆಮಾರಿ ಸಮುದಾಯ. ಊರೂರು ತಿರುಗುವ ಅವರ ಕಥೆಯ ಬಗ್ಗೆ ಹುಡುಕಿದರೂ ಸರಿಯಾದ ವಿವರಗಳು ಸಿಗುವುದಿಲ್ಲ. ಅಂತಾದ್ದೊಂದು ಅಪರೂಪದ ಕಥೆಯಲ್ಲಿ ಹೀರೋ ಆಗ್ತಿದ್ಧಾರೆ ವಿನಯ್ ರಾಜ್ ಕುಮಾರ್. ಹೀರೋಯಿನ್ ಆಗ್ತಿರೋದು ದುನಿಯಾ ವಿಜಯ್ ಅವರ 2ನೇ ಮಗಳು ಮೋನಿಷಾ ವಿಜಯ್. ನಿರ್ದೇಶಕ ದುನಿಯಾ ವಿಜಯ್. ಇದು ಸಿಟಿ ಲೈಟ್ಸ್ ಸ್ಟೋರಿ.
ಚಿತ್ರದಲ್ಲಿ ಅಳಿವಿನ ಅಂಚಿನಲ್ಲಿ ಇರುವ ಸಮುದಾಯದ ಕಥೆ ಇದೆ. ಎಮೋಷನ್ಸ್ ಇದೆ. ವಿದ್ಯಾವಂತರು ಕಡಿಮೆ ಇರುವ ಸಮುದಾಯದ ಭಾವನಾತ್ಮಕ ಕಥೆ ಹೇಳುತ್ತಿದ್ದೇವೆ ಎಂದಿದ್ದಾರೆ ವಿಜಯ್. ಇನ್ನು ಪೋಸ್ಟರಿನಲ್ಲಿ ದೇವರ ವಿಗ್ರಹ ಹೊತ್ತುಕೊಂಡು ಚಾಟಿಯಿಂದ ಹೊಡೆದುಕೊಳ್ಳುವ ವಿನಯ್ ಮತ್ತು ಮೋನಿಷಾ ಪೋಸ್ಟರ್ ಗಮನ ಸೆಳೆಯುತ್ತಿದೆ. ನಟನಾಗಿ, ನಿರ್ದೇಶಕನಾಗಿ ಹಾಗೂ ನಿರ್ಮಾಪಕರಾಗಿಯೂ ಗೆದ್ದಿರುವ ದುನಿಯಾ ವಿಜಯ್ ಅವರ ಮಗಳು ಮೋನಿಷಾ ಈಗ ನಾಯಕಿಯಾಗಿ ಬರುತ್ತಿದ್ದಾರೆ. ಸಿನಿಮಾ ಸಿಟಿಲೈಟ್ಸ್. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ.
ಮುಹೂರ್ತ ಸಮಾರಂಭದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಮಂಗಳಾ ಕ್ಲಾಪ್ ಮಾಡಿ ಶುಭ ಹಾರೈಸಿದರು. ಸತೀಶ್ ನೀನಾಸಂ, ಯುವ ರಾಜ್ ಕುಮಾರ್, ಪ್ರವೀಣ್ ತೇಜ್, ನವೀನ್ ಶಂಕರ್, ಲೂಸ್ ಮಾದ ಯೋಗಿ, ಬಿ. ಸುರೇಶ್, ಕೆ. ಮಂಜು. ಉಮಾಪತಿ, ಕೆ.ಪಿ. ಶ್ರೀಕಾಂತ್ ಸೇರಿದಂತೆ ಅನೇಕರು ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾದರು.
‘ಜವಾಬ್ ದಾರಿ ದೀಪಗಳು’ ಎಂಬ ಟ್ಯಾಗ್ಲೈನ್ ಇರುವ ಚಿತ್ರದಲ್ಲಿ ದುನಿಯಾ ವಿಜಯ್ ಕೂಡಾ ನಟಿಸುತ್ತಿದ್ದಾರೆ. . ‘ಊರಿನಿಂದ ಇಬ್ಬರು ಬೆಂಗಳೂರಿಗೆ ಬಂದ ನಂತರ ಏನೆಲ್ಲ ಕಷ್ಟ ಎದುರಿಸುತ್ತಾರೆ ಎಂಬುದೇ ಈ ಸಿನಿಮಾದ ಕಥೆ’.
ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ಮಾಸ್ತಿ ಅವರ ಸಂಭಾಷಣೆ ಇರಲಿದೆ. ‘ಸಲಗ’ ಮತ್ತು ‘ಭೀಮ’ ಸಿನಿಮಾಗಳ ಮೂಲಕ ಗೆದ್ದಿರುವ ದುನಿಯಾ ವಿಜಯ್ ಅವರು ಈಗ ‘ಸಿಟಿ ಲೈಟ್ಸ್’ ಮೂಲಕ ಮತ್ತೆ ನಿರ್ದೇಶಕನ ಹ್ಯಾಟ್ ಧರಿಸಿದ್ದಾರೆ.
ಮೋನಿಷಾ ಅವರ ಅಕ್ಕ ರಿತನ್ಯಾ ಈಗಾಗಲೇ ವಿಜಯ್ ಅವರ ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ತಂದೆಯ ಜೊತೆಯಲ್ಲೇ ನಟಿಸುತ್ತಿದ್ದಾರೆ. ಈಗ ಮತ್ತೊಬ್ಬ ಮಗಳು ಮೋನಿಷಾ ಕೂಡಾ ನಾಯಕಿಯಾಗಿದ್ಧಾರೆ. ಒಟ್ಟಿನಲ್ಲಿ, ದುನಿಯಾ ವಿಜಯ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಮಗಳು ಮೋನಿಷಾಗೆ ಸಿನಿಮಾ ನಿರ್ದೇಶನ ಮಾಡುವುದರ ಜೊತೆಗೆ, ನಿರ್ಮಾಣವನ್ನೂ ಮಾಡುವ ಮೂಲಕ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ವಿನಯ್ ರಾಜ್‌ಕುಮಾರ್ ಮತ್ತೊಂದು ಚಿತ್ರಕ್ಕೆ ಈ ಮೂಲಕ ನಾಯಕರಾಗಿದ್ದಾರೆ.
ಅನುಮಾನವೇ ಇಲ್ಲ. ಇಂತಹ ಅಥವಾ ಇಂತಹವರ ಕಥೆಯನ್ನೂ ಯಾರೂ ಕೂಡಾ ಸಿನಿಮಾಗಳಲ್ಲಿ ಹೇಳಿಲ್ಲ. ಡಾಕ್ಯುಮೆಂಟರಿ ಆಗಿರಬಹುದೇನೋ… ಗೊತ್ತಿಲ್ಲ. ಸಾಮಾನ್ಯ ಜನಕ್ಕೆ ಈ ಸಮುದಾಯದ ಬಗ್ಗೆ ಹೆಚ್ಚಿನ ಮಾಹಿತಿಗಳೂ ಇಲ್ಲ. ಹೀಗಾಗಿ ಸಿನಿಮಾ ಬಗ್ಗೆ ಕುತೂಹಲವಂತೂ ಇದೆ.



