ಸಿಂಪಲ್ ಸುನಿ, ತಮ್ಮದೇ ನಿರ್ಮಾಣದ ಚಿತ್ರಗಳಲ್ಲಿ ಸೋತಿದ್ಧಾರೆ, ಆದರೆ, ನಿರ್ದೇಶನದಲ್ಲಿ ಸೋತಿಲ್ಲ. ವಿನಯ್ ರಾಜಕುಮಾರ್ ಅವರಿಗೆ ಹಲವು ವರ್ಷಗಳಿಂದ ಬಾಕಿ ಇದ್ದ ಗೆಲುವು ಸಿಕ್ಕಂತಾಗಿದೆ. ಹಾಂಗತ ಇದೇನೂ ಬ್ಲಾಕ್ ಬಸ್ಟರ್ ಗೆಲುವಲ್ಲ. ಸರಳವಾದ ಗೆಲುವು, ಸಿಂಪಲ್ ವಿಕ್ಟರಿ. ಸಿಂಪಲ್ ಸುನಿ, ವಿನಯ್ ರಾಜ್ ಕುಮಾರ್ ಜೋಡಿಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಫೆಬ್ರವರಿ 8ರಂದು ತೆರೆಗೆ ಬಂದ ‘ಒಂದು ಸರಳ ಪ್ರೇಮಕಥೆʼಯ ಸಂಭ್ರಮವನ್ನು ಚಿತ್ರತಂಡ ಸೆಲಬ್ರೇಟ್ ಮಾಡಿದೆ. ಸುನಿ ಅವರ ನಿರೂಪಣೆ ಶೈಲಿ, ಕಾಮಿಡಿ ಟೈಮ್, ಎಮೋಷನ್, ನಾಯಕ ವಿನಯ್, ನಾಯಕಿಯರಾದ ಸ್ವಾತಿಷ್ಠ, ಮಲ್ಲಿಕಾ ಅಮೋಘ ಅಭಿನಯ, ವೀರ್ ಸಮರ್ಥ್ ಅವರ ಟ್ಯೂನ್‌ನ್ನು ಸಿನಿರಸಿಕರು ಸಖತ್ ಇಷ್ಟಪಟ್ಟಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದು, ಪ್ರೇಕ್ಷಕರು ನಿಧಾನವಾಗಿಯೇ ಚಿತ್ರಮಂದಿರಕ್ಕೆ ಬಂದರೂ, ಗೆಲುವಿನ ನಗೆ ಬೀರಿದೆ.
ಒಂದು ಸರಳ ಪ್ರೇಮ ಕಥೆ ಸಿನಿಮಾ ಕ್ಲಿಯರ್ ಕಟ್ ಆಗಿ ನಾಲ್ಕು ಭಾಷೆಗಳಿಗೆ ಡಬ್ ಆಗಿದೆ. ಆಯಾ ಭಾಷೆಯಲ್ಲಿ ಆಯಾ ಟೈಟಲ್‌ನಲ್ಲೇ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂದಿರುವ ಸುನಿ, ಶೀಘ್ರದಲ್ಲೇ ಒಟಿಟಿಯಲ್ಲಿ ಸಿನಿಮಾ ನೋಡಲು ಸಿಗಲಿದೆ ಎಂದು ತಿಳಿಸಿದ್ಧಾರೆ.
ಚಿತ್ರದ ಸಕ್ಸಸ್ ಬಗ್ಗೆ ವಿನಯ್ ರಾಜಕುಮಾರ್ ಕೂಡಾ ಖುಷಿಯಾಗಿದ್ದು ಇಡೀ ಫ್ಯಾಮಿಲಿ ಕುಳಿತುಕೊಂಡು ನೋಡುವ ಚಿತ್ರ. ಜನರಿಂದ ತುಂಬಾ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಜನರು ನಮ್ಮ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಇಡೀ ಫ್ಯಾಮಿಲಿ ಚಿತ್ರವನ್ನು ಎಂಜಾಯ್ ಮಾಡಿರುವುದು ದೊಡ್ಡ ಸಕ್ಸಸ್ ಎಂದು ಖುಷಿಪಟ್ಟಿದ್ಧಾರೆ. ಸುಂದರ ಪ್ರೇಮಕಥೆಗೆ ಶಕ್ತಿಯಾಗಿ ನಿಂತ ನಿರ್ಮಾಪಕ ಮೈಸೂರು ರಮೇಶ್ ಕೂಡಾ ಗೆಲುವಿನ ಉತ್ಸಾಹದಲ್ಲಿದ್ಧಾರೆ.
ಇದರಿಂದ ನಿಜಕ್ಕೂ ಖುಷಿಯಾಗಿರೋದು ದೊಡ್ಮನೆ ಫ್ಯಾನ್ಸ್. ಏಕೆಂದರೆ, ವಿನಯ್ ರಾಜಕುಮಾರ್ ಉತ್ತಮವಾಗಿ ನಟಿಸುತ್ತಿದ್ದರೂ, ಚಿತ್ರದ ಕಥೆಗಳು ವಿಭಿನ್ನವಾಗಿದ್ದರೂ.. ಗೆಲುವು ಮಾತ್ರ ಸಿಗುತ್ತಿರಲಿಲ್ಲ. ಈ ಬಾರಿ ಗೆಲುವು ಸಿಕ್ಕಿದೆ. ಸಣ್ಣ ಗೆಲುವೇ ಆದರೂ.. ರಾಜ್ ಕುಟುಂಬದ ಅಭಿಮಾನಿಗಳಿಗೆ ಇದು ಖುಷಿ ಕೊಟ್ಟಿದೆ.



