ಶಿವರಾಜ್ ಕುಮಾರ್.. ಒಂಥರಾ ಲಕ್ಕಿ ಹೀರೋ. ಶಿವಣ್ಣ ಚಿತ್ರದಲ್ಲಿ ವಿಲನ್ ಆಗಿ ನಟಿಸಿ ತೊಡೆತಟ್ಟಿದ ಹೀರೋಗಳ ಲಕ್ಕು ಚೇಂಜ್ ಆಗಿದೆ. ಅದೃಷ್ಟ ಖುಲಾಯಿಸಿದೆ. ಪುಟ್ಟದೊಂದು ಲಿಸ್ಟೇ ಇದೆ. ಶಿವಣ್ಣ, ಯಾವತ್ತೂ ಬಿಡುವಿಲ್ಲದ ನಟ. ಒಂದು ಸಿನಿಮಾ ಮುಗಿಯುತ್ತಿರುವ ಬೆನ್ನಲ್ಲೇ ಮತ್ತೊಂದು ಸಿನಿಮಾಗೆ ರೆಡಿಯಾಗುವ ಶಿವಣ್ಣ, ಈಗ 131ನೇ ಸಿನಿಮಾ ಶುರು ಮಾಡಿದ್ದಾರೆ. ತಮಿಳಿನ ‘ಪಾಯುಮ್ ಒಲಿ ನೀ ಎನಕ್ಕು’ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್, ಈ ಚಿತ್ರಕ್ಕೆ ಹೀರೋ. ಅದೇ ಚಿತ್ರಕ್ಕೆ ಈಗ ಗುಳ್ಟು ನವೀನ್ ವಿಲನ್ ಆಗಿದ್ದಾರೆ.
ಶಿವಣ್ಣ ಎದುರು ವಿಲನ್ ಆಗಿ ನಟಿಸಿದ ಹೀರೋಗಳೆಲ್ಲ ಆನಂತರ ಸ್ಟಾರ್ ನಟರಾಗಿದ್ದಾರೆ ಎನ್ನುವುದು ವಿಶೇಷ. ನಟ ದರ್ಶನ್, ಶಿವಣ್ಣ ಜೊತೆ ದೇವರ ಮಗ ಚಿತ್ರದಲ್ಲಿ ನಟಿಸಿದ್ದರು. ಅಂಬರೀಷ್ ಮತ್ತು ಶಿವಣ್ಣ ಹೀರೋ ಆಗಿದ್ದ ಚಿತ್ರದಲ್ಲಿ ದರ್ಶನ್ ಒಂದು ರೀತಿಯಲ್ಲಿ ವಿಲನ್ ಆಗಿದ್ದರು. ಅದಾದ ಮೇಲೆ.. ದರ್ಶನ್ ಹಣೆಬರಹ ಚೇಂಜ್ ಆಗಿದ್ದು ಗೊತ್ತೇ ಇದೆ.
ಇನ್ನು ಶಿವಣ್ಣ ಚಿತ್ರದಲ್ಲಿ ವಿಲನ್ ಅಗಿ ದೊಡ್ಡ ಮಟ್ಟದ ಹೆಸರು ಪಡೆದವರ ಲಿಸ್ಟಿನಲ್ಲಿ ಡಾಲಿ ಧನಂಜಯ ಕೂಡಾ ಇದ್ದಾರೆ. ಟಗರು ಚಿತ್ರ, ಡಾಲಿಯವರ ಕಂಬ್ಯಾಕ್ ಸಿನಿಮಾ ಎನ್ನಬಹುದು. ಬಹುಶಃ ಟಗರು ಚಿತ್ರದಲ್ಲಿ ನಟಿಸದೇ ಇದ್ದಿದ್ದರೆ.. ಡಾಲಿ ಅನ್ನೋ ಟೈಟಲ್ಲೂ.. ಸಿನಿಮಾ ಲೈಫು ಎರಡೂ ಇರುತ್ತಿರಲಿಲ್ಲ. ಈಗ ನೋಡಿದರೆ.. ಡಾಲಿ ಸ್ಟಾರ್ ಹೀರೋ.
ವಸಿಷ್ಠ ಸಿಂಹ ಕೂಡಾ ಟಗರು ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದವರು.
ಇನ್ನು ದುನಿಯಾ ವಿಜಯ್ ಅವರೂ ಅಷ್ಟೇ.. ರಾಕ್ಷಸ, ಜೋಗಿ ಚಿತ್ರದಲ್ಲಿ ವಿಲನ್ ಆಗಿ ಶಿವಣ್ಣರಿಂದ ಹೊಡೆತ ತಿಂದಿದ್ದವರೇ. ಅಷ್ಟೇ ಯಾಕೆ.. ಯಶ್ ಕೂಡಾ ತಮಸ್ಸು ಚಿತ್ರದಲ್ಲಿ ಒಂದರ್ಥದಲ್ಲಿ ನೆಗೆಟಿವ್ ಪಾತ್ರದಲ್ಲಿ ಶಿವಣ್ಣ ಎದುರು ನಟಿಸಿದ್ದವರು. ಈಗ ರಾಕಿಂಗ್ ಸ್ಟಾರ್. ಒಟ್ಟಿನಲ್ಲಿ ಶಿವಣ್ಣ ಎದುರುವ ವಿಲನ್ ಆದರೆ..ಲಕ್ಕು ಕುದುರುತ್ತದೆ ಎನ್ನುವ ರೀತಿಯಲ್ಲಿ ಈಗ ಗುಳ್ಟು ನವೀನ್ ಕೂಡಾ ಶಿವಣ್ಣ ಎದುರು ವಿಲನ್ ಆಗಿದ್ದಾರೆ.
ಮೊದಲ ಬಾರಿಗೆ ಶಿವಣ್ಣ ಅವರ ಜೊತೆ ನಟಿಸುತ್ತಿರುವುದಕ್ಕೆ ನವೀನ್ ಶಂಕರ್ ಖುಷಿಯಾಗಿದ್ದಾರೆ. ಈ ಹಿಂದೆ ಒಂದು ಆಫರ್ ಬಂದಿತ್ತು. ನಾನು ಶಿವಣ್ಣ ಅವರಿಗೆ ಮಗನಾಗಬೇಕಿತ್ತು. ಆಮೇಲೆ ಆ ಸಿನಿಮಾ ಸೆಟ್ಟೇರಲಿಲ್ಲ. ಆಗ ತುಂಬಾ ಬೇಜಾರಾಗಿತ್ತು. ಈಗ ಮತ್ತೊಮ್ಮೆ ಚಾನ್ಸ್ ಸಿಕ್ಕಿದೆ ಎಂದು ಹೇಳೋ ನವೀನ್, ಶಿವಣ್ಣ ಮೂರು ತಲೆಮಾರಿನ ನಟ ಎಂದಿದ್ದಾರೆ.
ಅವರ ತಂದೆಯ ತಲೆಮಾರಿನಿಂದ ನಮ್ಮ ತಲೆಮಾರಿನವರೆಗೂ ಅಂದರೆ ಮೂರು ತಲೆಮಾರಿನ ನಟರನ್ನು ನೋಡಿರುವಂಥ ಅದ್ಭುತ ನಟ ಶಿವಣ್ಣ. ಈಗಲೂ ಹೀರೋ ಆಗಿ ಕನ್ನಡ ಚಿತ್ರರಂಗವನ್ನು ಆಳುತ್ತಿದ್ದಾರೆ. ಶಿವಣ್ಣ ಎಷ್ಟೇ ದೊಡ್ಡ ನಟರಾದರು ತಮ್ಮ ಸಹ ನಟರಿಗೆ ಗೌರವ, ಪ್ರೋತ್ಸಾಹ, ಬೆಂಬಲ ಕೊಡುತ್ತಾರೆ. ಮತ್ತೊಬ್ಬ ಕಲಾವಿದರು ಬೆಳೆಯಲು ಅವಕಾಶ ಕೊಡುತ್ತಾರೆ. ಸಹನಟರ ಪಾತ್ರವನ್ನು ಎಂಜಾಯ್ ಮಾಡುತ್ತಾರೆ. ಇಂತಹವರು ಅಪರೂಪದಲ್ಲಿ ಅಪರೂಪ ಎನ್ನುತ್ತಾರೆ ನವೀನ್ ಶಂಕರ್.
ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಎಸ್ ಜೆ ಸೂರ್ಯ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ನವೀನ್ ಅವರು ಹೀರೋ ಆಗಿದ್ದವರು. ವಿಲನ್ ಆಗಿ ಕೂಡಾ ನಟಿಸುತ್ತಿರುವುದು ಏಕೆ.. ಎನ್ನುವ ಪ್ರಶ್ನೆಗೆ ಅವರು ಕೊಡೋ ಉತ್ತರ ಅವಕಾಶ ಸಿಕ್ಕಾಗ ಬಳಸಿಕೊಳ್ಳಬೇಕು. ಶಿವಣ್ಣ ಎದುರು ವಿಲನ್ ಆಗಿ ನಟಿಸೋ ಚಾನ್ಸ್ ಬಿಡೋದಾದ್ರೂ ಹೇಗೆ ಅಂತಾರೆ. ಗುಳ್ಟು ನವೀನ್ ಎಂದೇ ಖ್ಯಾತರಾಗಿರೋ ನವೀನ್ ಶಂಕರ್, ಇತ್ತೀಚೆಗೆ ಸಲಾರ್ ಹಾಗೂ ಗುರುದೇವ್ ಹೊಯ್ಸಳ ಚಿತ್ರದಲ್ಲಿ ಖಳನಾಯಕನಾಗಿ ಗಮನ ಸೆಳೆದಿದ್ದರು.



