ಬಸನಗೌಡ ಪಾಟೀಲ್ ಉಚ್ಚಾಟನೆ ನಂತರ ಬಿಜೆಪಿಯಲ್ಲಿದ್ದ ಯತ್ನಾಳ್ ಟೀಂನ ನಾಯಕರ ನಾಲಗೆಗೆ ಕಂಟ್ರೋಲ್ ಬಿದ್ದಿದೆ. ಈಗ ಸದ್ಯದ ಮಟ್ಟಿಗೆ ಯಾರೂ ಕೂಡಾ ಹಾಗೆ ಮಾತನಾಡ್ತಿಲ್ಲ. ನಮಗೂ ಬೇಸರ ಇದೆ, ಹೈಕಮಾಂಡ್ ಎದುರು ಹೇಳುತ್ತೇವೆ ಎನ್ನುತ್ತಿದ್ದಾರೆ. ಮೊದಲಿದ್ದ ಹುರುಪು, ಉತ್ಸಾಹ, ಹರಿತ ನಾಲಗೆ ಇಲ್ಲ. ಇನ್ನು ಕೆಲವು ನಾಯರು ಸೈಲೆಂಟ್ ಆಗಿ ಆಗಲೇ ವಿಜಯೇಂದ್ರ ಟೀಂಗೆ ಶಿಫ್ಟ್ ಆಗ್ತಿದ್ದಾರೆ.
ತಟಸ್ಥರೆಲ್ಲ ಸೈಲೆಂಟ್.. ಅದೇ ಗೋಳು..!
ಯತ್ನಾಳ್ ಉಚ್ಚಾಟನೆ ಬಳಿಕ ವಿಜಯೇಂದ್ರ ಆಕ್ಟಿವ್ ಆಗಿದ್ದರೆ, ಸರ್ಕಾರದ ವಿರುದ್ದ ಸಾಲು ಸಾಲು ಹೋರಾಟಗಳಲ್ಲಿ ತೊಡಗಿದ್ದರೆ.. ವಿಜಯೇಂದ್ರ ಅಗ್ರೆಸ್ಸಿವ್ ಆಗಿದ್ದರೆ.. ತಟಸ್ಥ ಬಣ ಮಾತ್ರ ವಿಜಯೇಂದ್ರ ಹೋರಾಟಕ್ಕೆ ಬೆಂಬಲ ಕೊಡುತ್ತಿಲ್ಲ. ಬದಲಿಗೆ ತಟಸ್ಥವಾಗಿದೆ. ರೆಬಲ್ಸ್ ಟೀಮಿನಲ್ಲಿದ್ದ ನಾಯಕರು ನಮಗೆ ವಿಜಯೇಂದ್ರ ಇಷ್ಟವಿಲ್ಲ ಎಂದು ತಮ್ಮ ಅಸಾಮಾಧಾನವನ್ನಾದರೂ ತೋಡಿಕೊಳ್ಳುತ್ತಿದ್ದಾರೆ. ಆದರೆ ಈ ತಟಸ್ಥ ಬಣದಲ್ಲಿರುವ ನಾಯಕರು ಅತ್ತ ಬಿಜೆಪಿಯ ಹೋರಾಟಕ್ಕೂ ಬರದೆ, ವಿಜಯೇಂದ್ರ ವಿರುದ್ಧ ಟೀಕೆ ಮಾಡೋಕೂ ಆಗದೆ, ಒಳಗೊಳಗೇ ಕೊರಗುತ್ತಿದ್ದಾರೆ.
ಅಂತರ ಕಾಯ್ದುಕೊಳ್ಳುವ ಮೂಲಕ ವಿಜಯೇಂದ್ರನ ವಿರುದ್ಧ ತಟಸ್ಥರು ಹಗೆತನ ಮುಂದುವರೆಸಿದ್ದಾರೆ. ಕೇಂದ್ರ ಸಚಿವ ವಿ ಸೋಮಣ್ಣ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಬಸವರಾಜ ಬೊಮ್ಮಾಯಿ, ಸಂಸದ ಕೆ ಸುಧಾಕರ್ ಮೊದಲಾದವರು ಹೋರಾಟಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆ. ಕೊರಗುವುದನ್ನು ಮಾತ್ರ ಬಿಟ್ಟಿಲ್ಲ. ಇನ್ನು ಕೆಲವು ನಾಯಕರು ನಾಮ್ ಕಾವಸ್ತೆಗೆ ಬಂದು ಟಿವಿಗಳ ಮುಂದೆ ಮುಖ ತೋರಿಸಿ ಕಣ್ಮರೆಯಾಗುತ್ತಿದ್ದಾರೆ.
ಯಡಿಯೂರಪ್ಪ ವಿಷಯದಲ್ಲಿ ಮಾಡಿದ್ದ ತಪ್ಪೇ ರಿಪೀಟ್..!
ತಟಸ್ಥ ಬಣದಲ್ಲಿರುವ ಇದೇ ನಾಯಕರು ಯಡಿಯೂರಪ್ಪ ವಿಷಯದಲ್ಲಿಯೂ ಇದೇ ತಪ್ಪು ಮಾಡಿದ್ದರು. ಯಡಿಯೂರಪ್ಪ ಅವರ ಜೊತೆಯಲ್ಲಿದ್ದುಕೊಂಡೇ ಯಡಿಯೂರಪ್ಪ ಅವರ ವಿರುದ್ದ ಸಂಚು ಮಾಡುವವರ ಜೊತೆಯಲ್ಲೂ ಇರುತ್ತಿದ್ದರು. ಇದನ್ನು ಒಂದು ಹಂತದವರೆಗೂ ತಾಳ್ಮೆಯಿಂದ ಸಹಿಸಿಕೊಂಡಿದ್ದ ಯಡಿಯೂರಪ್ಪ, ನಂತರ ತಮ್ಮ ತಂತ್ರಗಾರಿಕೆಯ ಏಟು ಕೊಟ್ಟರು. ಈಗ ತಟಸ್ಥ ಬಣದಲ್ಲಿರುವ ಬಹುತೇಕ ನಾಯಕರು, ಯತ್ನಾಳ್ ಗುಂಪಿನಲ್ಲಿರುವ ಬಹುತೇಕ ನಾಯಕರು.. ಯಡಿಯೂರಪ್ಪ ವಿರುದ್ಧ ಅವರು ಅಧಿಕಾರದಲ್ಲಿ ಇದ್ದಾಗಲೂ ಸಂಚು ಮಾಡಿದ್ದವರೇ. ಹಾಗಾದರೆ ಇದರಿಂದ ಬಿಜೆಪಿಗೆ ಅಥವಾ ವಿಜಯೇಂದ್ರಗೆ ಸಮಸ್ಯೆ ಆಗುತ್ತದಾ.. ಕಾದು ನೋಡಬೇಕು.
ವಿಜಯೇಂದ್ರಗೆ ನಷ್ಟ ಫಿಕ್ಸಾ..?
ತಟಸ್ಥ ಬಣದಲ್ಲಿರುವವರು ಯಾರ ನಾಯಕತ್ವವನ್ನೂ ಒಪ್ಪಿಕೊಳ್ಳುವವರಲ್ಲ. ಸ್ವತಃ ನಾಯಕತ್ವ ವಹಿಸಿಕೊಳ್ಳಿ ಎಂದರೆ ಅದಕ್ಕೂ ಸಿದ್ಧರಿಲ್ಲ. ಹೀಗಾಗಿ ಬಿಜೆಪಿ ಹೈಕಮಾಂಡಿನವರು ಈ ನಾಯಕರನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ. ಆದರೆ ಇದರಿಂದ ವಿಜಯೇಂದ್ರ ಅವರಿಗೆ ನಾಯಕರನ್ನೆಲ್ಲ ಒಟ್ಟಾಗಿ ಕರೆದೊಯ್ಯಲು ಸಾಧ್ಯವಾಗಿಲ್ಲ ಎಂಬ ಸಂದೇಶ ಹೋಗುವುದಂತೂ ನಿಶ್ಚಿತ. ಅದನ್ನು ವಿಜಯೇಂದ್ರ ಎದುರಿಸಲೇಬೇಕು. ಹಾಗೆ ನೋಡಿದರೆ, ಆ ವಿಷಯದಲ್ಲಿ ವಿಜಯೇಂದ್ರ ಅವರದ್ದೂ ತಪ್ಪುಗಳಿವೆ. ತಿದ್ದಿಕೊಳ್ಳಬೇಕಾದ ಅಗತ್ಯತೆಯೂ ಇದೆ.



