ಬಸನಗೌಡ ಪಾಟೀಲ್ ಯತ್ನಾಳ್. ರಾಜ್ಯ ಬಿಜೆಪಿ ನಾಯಕರಿಗೆ ಅತ್ತ ಉಗುಳಲೂ ಆಗದ.. ನುಂಗಲೂ ಆಗದ ಬಿಸಿ ಬಿಸಿ ತುಪ್ಪ. ಕಟ್ಟರ್ ಹಿಂದುತ್ವವಾದಿ. ನನಗೆ ಹಿಂದೂಗಳ ವೋಟುಗಳಷ್ಟೇ ಸಾಕು ಎಂದು ಬಹಿರಂಗವಾಗಿ ಹೇಳುವ ಯತ್ನಾಳ್, ಮುಸ್ಲಿಮರ ಜೊತೆ ವ್ಯವಹಾರ ಮಾಡ್ತಾರೆ. ಯಡಿಯೂರಪ್ಪ ವಿರುದ್ಧ ಹಿಗ್ಗಾಮುಗ್ಗಾ ಟೀಕಿಸುವ ಯತ್ನಾಳ್, ಎಲೆಕ್ಷನ್ ಸಮಯದಲ್ಲಿ ಯಡಿಯೂರಪ್ಪ ಅವರನ್ನು ಕ್ಷೇತ್ರಕ್ಕೆ ಕರೆತಂದು ಪ್ರಚಾರ ಮಾಡಿಸಿಕೊಳ್ತಾರೆ. ಎಲೆಕ್ಷನ್ ಮುಗಿದ ಮೇಲೆ ಹೋರಾಟ ಮತ್ತೆ ಶುರುವಾಗುತ್ತೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾದಾಗಿನಿಂದಲೂ ಯಡಿಯೂರಪ್ಪ & ಫ್ಯಾಮಿಲಿ ವಿರುದ್ಧ ಹೋರಾಟ ನಡೆಯುತ್ತಲೇ ಇದೆ. ಈ ಹೋರಾಟಕ್ಕೆ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಬೆಂಬಲ ಕೊಟ್ಟಿದ್ದಾರೆ. ಯತ್ನಾಳ್ ಜೊತೆಯಲ್ಲಿ ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ, ಸಿಟಿ ರವಿ, ಜಿಎಂ ಸಿದ್ದೇಶ್ವರ, ಅರವಿಂದ ಲಿಂಬಾವಳಿ, ಬಿಪಿ ಹರೀಶ್.. ಮೊದಲಾದವರೆಲ್ಲ ಇರೋದು ರಹಸ್ಯವೇನಲ್ಲ. ಬಹಿರಂಗವಾಗಿ ನಾವು ಪಕ್ಷ ನಿಷ್ಠರು ಎನ್ನುತ್ತಾರಾದರೂ.. ಯಡಿಯೂರಪ್ಪ ವಿರುದ್ಧ, ವಿಜಯೇಂದ್ರ ವಿರುದ್ಧ ಹೋರಾಟ ಚಾಲ್ತಿಯಲ್ಲಿದ್ದೇ ಇದೆ.
https://x.com/BYVijayendra/status/1828732845465981260
ಇದರ ನಡುವೆ ಯತ್ನಾಳ್ ಅವರ ಅತಿ ದೊಡ್ಡ ಸಂಕಟ, ಸಂಕಷ್ಟ, ಹೋರಾಟಕ್ಕೆ ವಿಜಯೇಂದ್ರ ಬೆಂಬಲ ನೀಡಿರುವುದು ಅಚ್ಚರಿ ಹುಟ್ಟಿಸಿದೆ. ವಿಜಯಪುರದ ಬಿಜೆಪಿ ಶಾಸಕ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೂ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಚರ್ಚ್ ಸ್ಟ್ರೀಟ್ ಕಚೇರಿಯಲ್ಲಿ ಧರಣಿ ಕೂತಿದ್ದಾರೆ. ಆರ್.ಅಶೋಕ್, ಜಯನಗರದ ಶಾಸಕ ಸಿ.ಕೆ.ರಾಮಮೂರ್ತಿ, ಸಿ.ಟಿ.ರವಿ, ಅರವಿಂದ್ ಬೆಲ್ಲದ್, ಬಸವರಾಜ ಬೊಮ್ಮಾಯಿ, ಡಾ.ಅಶ್ವತ್ ನಾರಾಯಣ್ ಆದಿಯಾಗಿ ಹಲವರು ಬೆಂಬಲವನ್ನು ಸೂಚಿಸಿದ್ದರು. ಇದೀಗ ವಿಜಯೇಂದ್ರ ಅವರೂ ಜೆಪಿ ಹಿರಿಯ ನಾಯಕ ಯತ್ನಾಳ್ ಅವರ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸಿ ಇಲ್ಲದಿದ್ದರೆ ಇಲ್ಲೂ ದ್ವೇಷದ ರಾಜಕಾರಣ ಮಾಡುತ್ತಿದ್ದೀರಾ ಎನ್ನುವ ನಿಲುವಿಗೆ ಬರಬೇಕಾಗುತ್ತದೆ ಎಂದು ವಿಜಯೇಂದ್ರ, ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ನ್ಯಾಯಾಲಯದ ಆದೇಶ ಇದ್ದರೂ ಸಕ್ಕರೆ ಕಾರ್ಖಾನೆ ತೆರೆಯಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅನುವು ಮಾಡಿಕೊಡದೆ ಉಪಟಳ ನೀಡುತ್ತಿರುವುದನ್ನು ಖಂಡಿಸಿ ಕಾರ್ಖಾನೆಯ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯ ಶಾಸಕರೂ ಆದ ಯತ್ನಾಳ್ ಅವರು ಪ್ರಶ್ನಿಸುತ್ತಿರುವ ಕ್ರಮ ನ್ಯಾಯೋಚಿತವಾಗಿದೆ. ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಕಾರ್ಖಾನೆ ಆರಂಭಕ್ಕೆ ತೊಂದರೆ ಉಂಟಾಗದಂತೆ ಕ್ರಮವಹಿಸಲಿ. ಸಾವಿರಾರು ರೈತರು, ನೂರಾರು ಕಾರ್ಮಿಕರ ಬದುಕಿನ ಪ್ರಶ್ನೆಯಾಗಿರುವ ಕಾರ್ಖಾನೆ ವಿಷಯದಲ್ಲಿ ರಾಜಕಾರಣ ಬಿಡಿ. ನ್ಯಾಯಾಲಯದ ಆದೇಶ ಪಾಲಿಸಿ ಎಂದು ಆಗ್ರಹಿಸಿದ್ದಾರೆ.
ವಿಶೇಷ ಎಂದರೆ.. ಯತ್ನಾಳ್ ಅವರಿಗೆ ಬೆಂಬಲ ಘೋಷಿಸಿದ ನಂತರ.. ಎಲ್ಲರೂ ಇದು ಯಡಿಯೂರಪ್ಪ ಮಾಡೆಲ್ ಎಂದು ವಿಜಯೇಂದ್ರ ಅವರನ್ನು ಹೊಗಳುತ್ತಿದ್ದಾರೆ.
ನೀವೂ ನಿಮ್ಮ ತಂದೆಯಂತೆ ಕಷ್ಟದಲ್ಲಿರುವವರ ಪರ ನ್ಯಾಯದ ಪರ ನಿಂತಿದ್ದೀರಿ..
ಇಂತಹ ವಿಚಾರಗಳಿಂದಾಗಿಯೇ ನೀವು ಅಂದ್ರೆ ನಮಗೆ ತುಂಬಾ ಇಷ್ಟ..
ನಿಮ್ಮ ತಂದೆಯವರೂ ಕೂಡಾ ಇಂತಹ ವಿಷಯಗಳಲ್ಲಿ ರಾಜಕೀಯ ಶತ್ರುವಾಗಿದ್ದರೂ.. ಬೆಂಬಲಕ್ಕೆ ಬರುತ್ತಿದ್ದರು..
ಎಂದೆಲ್ಲ ಯಡಿಯೂರಪ್ಪ ಅವರ ರಾಜಕೀಯ ನಡೆಯನ್ನು ನೆನಪಿಸಿಕೊಂಡಿದ್ದಾರೆ.
ವಿಜಯೇಂದ್ರ ಅವರ ಈ ಗಾಂಧಿಗಿರಿ ಯತ್ನಾಳ್ ಮತ್ತವರ ಬೆಂಬಲಿಗರ ಆಕ್ರೋಶವನ್ನು ತಣ್ಣಗೆ ಮಾಡುತ್ತಾ..? ಯತ್ನಾಳ್ ಅವರ ನಡೆ ನುಡಿ ಬಲ್ಲವರು ಅದೆಲ್ಲ ಸುಳ್ಳು ಎನ್ನುತ್ತಾರೆ.



