ಧರ್ಮಸ್ಥಳ ಗ್ರಾಮದಲ್ಲಿ ತಲೆಬುರುಡೆ ಪತ್ತೆ ಕಾರ್ಯಾಚರಣೆ ಜುಲೈ 28ರಿಂದ ಆಗಸ್ಟ್ 13ರ ವರೆಗೆ ಹಲವು ಹಂತಗಳಲ್ಲಿ ನಡೆದಿದೆ. ಈ 15 ದಿನಗಳ ಕಾರ್ಯಾಚರಣೆಗೆ ಬರೋಬ್ಬರಿ ಅರ್ಧ ಕೋಟಿಗೂ (₹50 ಲಕ್ಷ) ಅಧಿಕ ವೆಚ್ಚ ವ್ಯಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಫಲಿತಾಂಶ ಶೂನ್ಯ. ಒಟ್ಟಾರೆ 20ಕ್ಕೂ ಹೆಚ್ಚು ಗುಂಡಿಗಳನ್ನ ಅಗೆಯಲಾಗಿದೆ. ಅನಾಮಿಕನೇ ಈಗ ಎಲ್ಲೆಲ್ಲಿ ಅಗೆಯಬೇಕು ಎಂದು ಎಸ್‌ಐಟಿಯವರಿಗೆ ಆದೇಶ ನೀಡುತ್ತಿದ್ದಾನೆ. ಈ ಫಲಿತಾಂಶವೇ ಈಗ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣ ಆಗಿದೆ. ರಾಜ್ಯಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ.
ಪಕ್ಷದ ನಾಯಕರಿಗೆ ಸಿದ್ಧರಾಮಯ್ಯ ಸೈಲೆಂಟ್ ಸೂಚನೆ : ಪ್ರಕರಣ ಕುರಿತಂತೆ ಸಿದ್ಧರಾಮಯ್ಯ ಪಕ್ಷದ ನಾಯಕರಿಗೆ ಸ್ಪಷ್ಟ ಸೂಚನೆ ರವಾನಿಸಿದ್ಧಾರೆ. ಬೇಳೂರು ಗೋಪಾಲಕೃಷ್ಣ, ದಿನೇಶ್ ಗುಂಡೂರಾವ್, ಶಿವಗಂಗಾ ಬಸವರಾಜ್ ಸೇರಿದಂತೆ ಕೆಲವು ಶಾಸಕರು ಧರ್ಮಸ್ಥಳ ಪರ ಧ್ವನಿ ಎತ್ತಿದ್ದರು. ಈಗ ಬಗ್ಗೆ ಸೂಚನೆ ನೀಡಿರುವ ʻʻಎಸ್‌ಐಟಿ ರಚನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಅಭಿಪ್ರಾಯವೇ ಇದೆ. ಕೆಲವು ಯೂಟೂಬರ್, ಆರ್‌ಟಿಐ ಕಾರ್ಯಕರ್ತರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ತನಿಖೆ ಮುಗಿಯುವ ವರೆಗೆ ಈ ಬಗ್ಗೆ ಯಾರೊಬ್ಬರೂ ಮಾತನಾಡುವುದು ಬೇಡ. ಪ್ರಕರಣದಲ್ಲಿ ಯಾರೊಬ್ಬರೂ ಭಾವನಾತ್ಮಕವಾಗಿ ಹೇಳಿಕೆ ನೀಡಬೇಡಿ. ಈ ವಿಚಾರದಲ್ಲಿ ಪ್ರತಿಯೊಬ್ಬ ಸಚಿವ, ಶಾಸಕರೂ ಎಚ್ಚರ ವಹಿಸಬೇಕುʼʼ ಎಂದು ಸೂಚಿಸಿದ್ದಾರೆ.
ಹೋರಾಟಕ್ಕೆ ಧುಮುಕಿದ ಬಿಜೆಪಿ, ವಿಜಯೇಂದ್ರ : ರಾಜ್ಯಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ಬೆಂಗಳೂರಿನಿಂದ ಬೀದರ್‌ವರೆಗೆ ಅಂದರೆ.. ಬೆಂಗಳೂರು, ತುಮಕೂರು, ಕೋಲಾರ, ಮಂಡ್ಯ, ಚಿತ್ರದುರ್ಗ, ಹಾಸನ, ದಾವಣಗೆರೆ, ಮೈಸೂರು, ಬೆಳಗಾವಿ, ಚಾಮರಾಜನಗರ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಹಾವೇರಿ, ಶಿವಮೊಗ್ಗ, ರಾಮನಗರ, ಕೊಪ್ಪಳ, ಯಾದಗಿರಿ, ಬಳ್ಳಾರಿ, ಬೀದರ್, ಚಿಕ್ಕಮಗಳೂರು, ಕಲಬರಗಿ.. ಹೀಗೆ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಯುತ್ತಿವೆ. ಇತ್ತ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಕೂಡಾ ಹೋರಾಟಕ್ಕೆ ಧುಮುಕಿದ್ದಾರೆ.
ವಿಜಯೇಂದ್ರ ಈ ಮೊದಲು ಕೂಡಾ ಎಸ್‌ಐಟಿ ರಚನೆಗೆ ಬೆಂಬಲ ನೀಡಿದ್ದರು. ಅನುಮಾನ ಪರಿಹಾರವಾಗಲಿ ಎಂದ ಹೇಳಿದ್ದರಷ್ಟೇ ಅಲ್ಲ, ಧರ್ಮಸ್ಥಳದಲ್ಲಿ ಕೆಡುಕು ಆಗಿಲ್ಲ ಎನ್ನುವುದು ನನ್ನ ನಂಬಿಕೆ ಎಂದೂ ಹೇಳಿದ್ದರು ಈಗ ಪಕ್ಷದ ಶಾಸಕರು, ಹಿರಿಯರ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಇದೇ 17ರಂದು ಭಾನುವಾರ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ.
ಅಂದು ಮಂಜುನಾಥೇಶ್ವರನ ದರ್ಶನ ಪಡೆದು ಬರಲಿದ್ದೇವೆ. ನಾವು ಬಿಜೆಪಿ ಕಾರ್ಯಕರ್ತರು ಎಂಬುದಕ್ಕಿಂತ ಹೆಚ್ಚಾಗಿ ಧರ್ಮಸ್ಥಳ ಮಂಜುನಾಥೇಶ್ವರನ ಭಕ್ತರಾಗಿ ಅಲ್ಲಿಗೆ ತೆರಳುತ್ತೇವೆ. ಈ ತನಿಖೆಯ ಹಿಂದೆ ಕೆಲವು ಸಮಾಜಘಾತುಕ ಶಕ್ತಿಗಳು, ಎಸ್‌ಡಿಪಿಐ, ಬೇರೆ ಬೇರೆ ಕುತಂತ್ರಗಳು ನಡೆಯುತ್ತಿವೆ ಎಂಬ ಚರ್ಚೆಗಳು ಜನಸಾಮಾನ್ಯರಲ್ಲಿ ನಡೆಯುತ್ತಿವೆ. ನಾವು ಮಂಜುನಾಥೇಶ್ವರನ ಹಾಗೂ ಅಣ್ಣಪ್ಪ ಸ್ವಾಮಿಯ ದರ್ಶನ ಪಡೆಯಲು ಹೋಗಲಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿಯ ಎಲ್ಲ ನಾಯಕರೂ ಕೂಡಾ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥನ ದರ್ಶನ ಪಡೆದರೆ ಅದು ನೀಡುವ ಸಂದೇಶ ಏನು ಎನ್ನುವುದು ಎಲ್ಲರಿಗೂ ಗೊತ್ತಾಗುತ್ತದೆ. ಹೋರಾಟ ಮುಗಿದಿಲ್ಲ.



