ಮೈಸೂರು ಸ್ಯಾಂಡಲ್ ಸೋಪಿಗೆ ತಮನ್ನಾ ಭಾಟಿಯಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಸರ್ಕಾರ ಅಂದ್ರೆ ಕೆಎಸ್‌ಡಿಎಲ್, ತಮನ್ನಾಗೆ 2 ವರ್ಷ, 2 ದಿನಕ್ಕೆ 6 ಕೋಟಿ ರೂ. ನೀಡಲಿದೆ. ಆದರೆ ತಮನ್ನಾ ಆಯ್ಕೆಯಾಗುತ್ತಿದ್ದಂತೆಯೇ ಭಾರಿ ವಿರೋಧ ವ್ಯಕ್ತವಾಗಿದೆ. ರಾಜ್ಯ ಸರ್ಕಾರದ ಆಯಕಟ್ಟಿನ ಜಾಗದಲ್ಲಿರುವ ಪ್ರಮುಖ ನಾಯಕರನ್ನು ಬಿಟ್ಟರೆ, ಯಾರೊಬ್ಬರೂ ತಮನ್ನಾ ಅವರ ಆಯ್ಕೆಯನ್ನು ಒಪ್ಪುತ್ತಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಪ್ರಕಾರ ತಮನ್ನಾ ಭಾಟಿಯಾ ಅವರನ್ನು ಪೈನಲ್ ಮಾಡಿದ್ದು ಸಚಿವ ಜಮೀರ್ ಅಹ್ಮದ್. ಕೆಎಸ್‌ಡಿಎಲ್ ಸಂಸ್ಥೆ ಕಾಂಗ್ರೆಸ್ ಸರ್ಕಾರ ಹುಟ್ಟು ಹಾಕಿದ್ದಲ್ಲ. ಮೈಸೂರು ಮಹಾರಾಜರ ಕನಸಿನ ಕೂಸು. ಅಂತಹ ಸಂಸ್ಥೆಗೆ ರಾಯಭಾರಿಯಾಗಿ ಕರ್ನಾಟಕದಲ್ಲಿ ಯಾರೂ ಸಿಗಲಿಲ್ಲವೇ? ಪರಿಣಿತರ ಸಲಹೆ ಪಡೆದುಕೊಂಡೆವು ಎಂದು ಮಂತ್ರಿಗಳು ಹೇಳುತ್ತಿದ್ದಾರೆ. ಇದಕ್ಕೆ ಪರಿಣಿತರ ಸಲಹೆ ಯಾಕೆ ಬೇಕು? ಆ ಪರಿಣಿತರು ಯಾರು? ಆ ಪರಿಣಿತರಲ್ಲಿ ಜಮೀರ್ ಅಹಮ್ಮದ್ ಇದ್ದಾರಾ? ಯಾರ್ಯಾರು ಇದ್ದಾರೆ ಪರಿಣಿತರು ಅಂದ್ರೆ? ಇದನ್ನು ರಾಜ್ಯದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ತಮನ್ನಾ ಭಾಟಿಯಾ ಅವರನ್ನು ಕರೆತರುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಅವಮಾನ ಎಂದು ಹೇಳಿದ್ದರು. ಪರೋಕ್ಷವಾಗಿ ಜಮೀರ್ ಅಹ್ಮದ್ ಹೆಸರು ಹೇಳಿದ್ದರು ವಿಜಯೇಂದ್ರ.
ಸಚಿವ ಎಂಬಿ ಪಾಟೀಲ್ ಹೆಸರು ಹೇಳಿದ್ದರೆ ವಿವಾದವಾಗುತ್ತಿರಲಿಲ್ಲ. ಏಕೆಂದರೆ ಮೈಸೂರು ಸ್ಯಾಂಡಲ್ ಸಂಸ್ಥೆ ಬರುವುದು ಎಂಬಿ ಪಾಟೀಲರ ಇಲಾಖೆಗೆ. ಹೀಗಾಗಿ ಜಮೀರ್ ಅಹ್ಮದ್ ಅವರೇ ತಮನ್ನಾ ಅವರನ್ನು ಆಯ್ಕೆ ಮಾಡಿದರಾ ಎಂದು ಪ್ರಶ್ನೆ ಎದುರಾಯ್ತು. ಇದಕ್ಕೆ ಜಮೀರ್ ಅಹ್ಮದ್ ಹೌದೂ ಎನ್ನಲಿಲ್ಲ. ಇಲ್ಲ ಎಂದೂ ಹೇಳಲಿಲ್ಲ. ಬದಲಿಗೆ.. ‘ಆ ಸಂದರ್ಭದಲ್ಲಿ ವಿಜಯೇಂದ್ರ ಅವರು ಎಲ್ಲೋ ನಮ್ಮ ಜೊತೆಯಲ್ಲಿ ಬಂದಿರಬಹುದು, ಅದಕ್ಕೆ ಹೇಳಿದ್ದಾರೆʼ ಎಂದು ಉತ್ತರ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ತಮನ್ನಾ ಅವರನ್ನು ಬಿಟ್ಟು ಕನ್ನಡದಲ್ಲಿಯೇ ಪ್ರತಿಭಾವಂತರಿದ್ದರು ಎಂದೂ ಹೇಳಿಕೆ ಕೊಟ್ಟಿದ್ದಾರೆ.
ಈ ನಡುವೆ ಮಧು ಬಂಗಾರಪ್ಪ ಮಾತ್ರ ಇಷ್ಟ ಇಲ್ಲದಿದ್ದರೆ ತಮನ್ನಾ ಸಿನಿಮಾಗಳನ್ನು ನೋಡಬೇಡಿ ಎಂದೆಲ್ಲ ಡೈಲಾಗ್ ಹೊಡೆದಿದ್ದಾರೆ. ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪಿಗೆ ಪ್ರಚಾರದ ರಾಯಭಾರಿಯನ್ನಾಗಿ ಆಕೆ ಮಾಡಿರುವುದು ಸದ್ಯಕ್ಕೆ ರಾಜ್ಯಾದ್ಯಂತ ವಿವಾದ ಸೃಷ್ಟಿಸಿದೆ. ವಿಶೇಷ ಎಂದರೆ ರಾಜ್ಯ ಸರ್ಕಾರದವರೇ ಬಹುತೇಕ ಜನ ಈ ನಿರ್ಧಾರವನ್ನು ಒಪ್ಪುತ್ತಿಲ್ಲ. ಕಾಂಗ್ರೆಸ್ಸಿಗರೇ ಒಪ್ಪುತ್ತಿಲ್ಲ. ಒಡೆಯರ್ ಕುಟುಂಬದವರೂ ಒಪ್ಪುತ್ತಿಲ್ಲ. ಚಿತ್ರರಂಗದವರೂ ಒಪ್ಪುತ್ತಿಲ್ಲ. ಕನ್ನಡ ಸಂಘಟನೆಗಳೂ ಒಪ್ಪುತ್ತಿಲ್ಲ.
ಮೈಸೂರು ಒಡೆಯರ್ ಕುಟುಂಬದ ಯದುವೀರ್ ಅವರೂ ಕೂಡಾ ತಮನ್ನಾ ಆಯ್ಕೆ ಉತ್ತಮ ಆಯ್ಕೆ ಅಲ್ಲ ಎನ್ನುತ್ತಿದ್ದಾರೆ. ಮೈಸೂರು ಸ್ಯಾಂಡಲ್ ಸಂಸ್ಥೆ ಸ್ಥಾಪನೆಯಾಗಿದ್ದೇ ಕನ್ನಡಿಗರಿಗೆ ಒಂದು ಉದ್ಯಮ ಹಾಗೂ ಲಾಭ ಪಡೆಯುವ ಉದ್ದೇಶದಿಂದಲೇ ಮಾಡಿದ್ದು. ಆದರೆ ರಾಯಭಾರಿಯನ್ನಾಗಿ ಆಯ್ಕೆ ಮಾಡುವಾಗ ಕನ್ನಡದ ನಟ, ನಟಿ, ಕ್ರೀಡಾಪಟುಗಳನ್ನು ಗುರುತಿಸಬಹುದಿತ್ತು. ಇಡೀ ಭಾರತಕ್ಕೆ ಪರಿಚಯ ಇರುವ ಅದೆಷ್ಟು ಜನ ಇಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಈ ನಡುವೆ ತಮನ್ನಾ ಭಾಟಿಯಾ ಅವರ ಆಯ್ಕೆ ಜಮೀರ್ ಅಹ್ಮದ್ ಅವರದ್ದು ಎನ್ನುವುದೂ ವಿವಾದ ಸೃಷ್ಟಿಸಿದೆ. ಜಮೀರ್ ಅಹ್ಮದ್ ಅವರಿಗೂ, ಮೈಸೂರು ಸ್ಯಾಂಡಲ್ ಸೋಪಿಗೂ ಇರುವ ಲಿಂಕ್ ಗೊತ್ತಿಲ್ಲ. ಆದರೆ, ತಮನ್ನಾ ಭಾಟಿಯಾ ಅವರ ಆಯ್ಕೆಯ ಹಿಂದೆ ಜಮೀರ್ ಹೆಸರು ಕೇಳಿ ಬರುತ್ತಿದೆ. ಯಾಕೆ.. ಎನ್ನುವುದು 6 ಕೋಟಿ ಕೊಟ್ಟವರಿಗೂ ಗೊತ್ತಿಲ್ಲ.



