ರಾಜ್ಯ ರಾಜಕೀಯದಲ್ಲಿ ಬಿಜೆಪಿಗೆ ಅತಿ ದೊಡ್ಡ ಸವಾಲು ಎದುರಾಗಿರುವುದು ವಿಜಯೇಂದ್ರ ಯಡಿಯೂರಪ್ಪ (BY Viajayendra) ಅವರಿಗೆ. ವಿಜಯೇಂದ್ರ ಅವರು ಯಡಿಯೂರಪ್ಪ (BS Yeddyurappa) ಮಗ. ಇದೇ ಮೊದಲ ಬಾರಿಗೆ ಶಾಸಕರಾಗಿರುವವರು. ವಯಸ್ಸಿನ್ನೂ ೫೦ ವರ್ಷ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ವಿಜಯೇಂದ್ರ ಅವರಿಗೆ ಇರುವ ಅತಿ ದೊಡ್ಡ ಸವಾಲೆಂದರೆ ರಾಜ್ಯವನ್ನು ಗೆಲ್ಲುವುದಕ್ಕೂ ಮೊದಲು ಬಿಜೆಪಿಯವರನ್ನೂ ಗೆಲ್ಲೋದು. BY Vijayendra challenge is win Karnataka state bjp before wins Karnataka voters
ಹೌದು, ಅಚ್ಚರಿ ಎನಿಸಿದರೂ ಇದು ಸತ್ಯ. ಏಕೆಂದರೆ ರಾಜ್ಯದಲ್ಲಿ ಯಡಿಯೂರಪ್ಪ ಹೆಸರಿನಲ್ಲಿ ಗೆಲ್ಲುತ್ತಿರುವ ಶಾಸಕರಷ್ಟೇ ಯಡಿಯೂರಪ್ಪ ಕಂಡರೆ, ಹೆಸರು ಕೇಳಿದರೆ ಉರಿದು ಬೀಳುವವರೂ ಇದ್ದಾರೆ. ಅಂತಹವರು ಯಾರೆಂದು ವಿಜಯೇಂದ್ರ ಅವರಿಗೂ ಗೊತ್ತು.
ಇಷ್ಟಕ್ಕೂ ತಾವು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಕಾರಣ ಬೇರೆ. ಕೊನೆಯ ಕ್ಷಣದವರೆಗೂ ತಮ್ಮ ಹೆಸರು ಲಿಸ್ಟಿನಲ್ಲಿ ಇರಲಿಲ್ಲ ಎನ್ನುವುದು ವಿಜಯೇಂದ್ರ ಅವರಿಗೂ ಗೊತ್ತಿದೆ. ಮೋದಿ ಮನಸ್ಸಿನಲ್ಲಿ ಶೋಭಾ ಕರಂದ್ಲಾಜೆ ಹೆಸರಿತ್ತು. ಅಮಿತ್ ಶಾ ಮನಸ್ಸಿನಲ್ಲಿ ಸೋಮಣ್ಣ ಹೆಸರಿತ್ತು. ಆದರೆ ಜೆಡಿಎಸ್ ಮೈತ್ರಿಯಾದ ಕಾರಣಕ್ಕೆ ಶೋಭಾ ಅವರ ಹೆಸರು ಲಿಸ್ಟಿನಿಂದ ಹೊರಹೋದರೆ, ಸೋಮಣ್ಣ ಅವರಿಗೆ ಪಟ್ಟ ಕಟ್ಟಿ ಯಡಿಯೂರಪ್ಪ ಅವರ ವಿರುದ್ಧ ರಿಸ್ಕ್ ಏಕೆ ಎಂಬ ಮನೋಭಾವ ಬಿಜೆಪಿ ವರಿಷ್ಠರದ್ದು. ಜೊತೆಗೆ ಕಾರ್ಯಕರ್ತರಲ್ಲೂ ಅಷ್ಟೆ, ಸೋಮಣ್ಣ ಎಲ್ಲರಿಗೂ ಸಲ್ಲುವ ನಾಯಕರಲ್ಲ. ಒಂದೆರಡು ಜಿಲ್ಲೆ ಬಿಟ್ಟರೆ ಇಡೀ ರಾಜ್ಯದುದ್ದಗಲಕ್ಕೆ ಜನರನ್ನು ಸೆಳೆಯುವ ನಾಯಕ ಅಲ್ಲ ಎಂಬ ಅಭಿಪ್ರಾಯವೂ ಇತ್ತು. ಜೊತೆಗೆ ಲೋಕಸಭೆ ಎಲೆಕ್ಷನ್.
ಕಳೆದ ಬಾರಿ ೨೫ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ, ಈ ಬಾರಿ ಅದೇ ಸಂಖ್ಯೆ ಪುನರಾವರ್ತನೆ ಮಾಡಿಕೊಳ್ಳುವ ವಿಶ್ವಾಸ ಇಲ್ಲ. ಸ್ವತ್ ವಿಶ್ವಾಸ ಇಲ್ಲದಿದ್ದಾಗ ಗೆಲ್ಲುವುದೂ ಕಷ್ಟ. ಹೀಗಾಗಿಯೇ ಒಕ್ಕಲಿಗರ ಮತಗಳಿಗೆ ಜೆಡಿಎಸ್, ದೇವೇಗೌಡ-ಕುಮಾರಸ್ವಾಮಿ ಅವರನ್ನು ನಂಬಿಕೊಂಡಿರುವ ಬಿಜೆಪಿ, ಲಿಂಗಾಯತರ ವಿಜಯೇಂದ್ರರನ್ನು ಮುನ್ನೆಲೆಗೆ ತರುವ ಮೂಲಕ ಆ ವೋಟ್ ಬ್ಯಾಂಕ್ʻನ್ನು ಗಟ್ಟಿ ಮಾಡಿಕೊಳ್ಳುವ ಮನಸ್ಸು ಮಾಡಿದೆ.
ವಿಜಯೇಂದ್ರ ಅವರ ವಯಸ್ಸು ಚಿಕ್ಕದು. ಈಗಿನ್ನೂ ೫೦ ವರ್ಷ. ಹೀಗಾಗಿಯೇ ವಿಜಯೇಂದ್ರ ಅವರಿಗೆ ಎದುರಾಗಿರುವ ಸವಾಲುಗಳೆಂದರೆ ತಮಗಿಂತಲೂ ಹಿರಿಯರಾಗಿರುವ ಖುದ್ದು ಯಡಿಯೂರಪ್ಪ, ಗೋವಿಂದ ಕಾರಜೋಳ, ಆರ್.ಅಶೋಕ್, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಈಶ್ವರಪ್ಪ, ಬಸನಗೌಡ ಪಾಟೀಲ ಯತ್ನಾಳ್, ಮುರುಗೇಶ್ ನಿರಾಣಿ, ಪ್ರಹ್ಲಾದ್ ಜೋಷಿ ಅವರಂತಹ ಸೀನಿಯರ್ ಲೀಡರುಗಳನ್ನೂ, ಪಕ್ಷದಲ್ಲಿ ಸೀನಿಯರ್ ಆಗಿರುವ, ಯಡಿಯೂರಪ್ಪ ಅವರಿಂದ ಒಂದು ಅಂತರದಲ್ಲೇ ಇರುವ ನಾಯಕರನ್ನೂ ಒಟ್ಟುಗೂಡಿಸಿ ಕರೆದುಕೊಂಡು ಹೋಗಬೇಕಾದ ದೊಡ್ಡ ಜವಾಬ್ದಾರಿ ಇದೆ. ವಂಶ ಪಾರಂಪರ್ಯ ರಾಜಕಾರಣವನ್ನೂ ಟೀಕಿಸುತ್ತಿರುವವರಿಗೆ, ಆರ್. ಎಸ್. ಎಸ್. ಕಟ್ಟಾಳುಗಳನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು.
ಹೀಗಾಗಿಯೇ ವಿಜಯೇಂದ್ರ ಅವರ ಅತಿ ದೊಡ್ಡ ಚಾಲೆಂಜ್ ಪಕ್ಷದೊಳಗೆ ಇರುವ ವಿರೋಧಿಗಳನ್ನು ಗೆಲ್ಲುವುದು. ಪಕ್ಷದೊಳಗಿನ ವಿರೋಧಿಗಳನ್ನು ನಿವಾರಿಸಿಕೊಳ್ಳುವುದು ಸುಲಭ. ಆದರೆ ನಾಯಕನಾದವನು ಹಾಗೂ ನಾಯಕ ನಾಗಬೇಕಾದವನು ವಿರೋಧಿಗಳನ್ನೂ ಗೆದ್ದುಕೊಂಡು ತನ್ನ ಸೈನ್ಯ ಮಾಡಿಕೊಳ್ಳುತ್ತಾನೆ. ಅದರಲ್ಲಿಯೇ ಅದರಲ್ಲಿಯೇ ಆತನ ಶ್ರೇಯಸ್ಸೂ ಇದೆ.



