ವಿಜಯೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷರಾದ ದಿನದಿಂದಲೂ ರಾಜ್ಯ ಬಿಜೆಪಿಯ ಒಂದು ವರ್ಗ ವಿಜಯೇಂದ್ರ ಅವರನ್ನು ವಿರೋಧಿಸುತ್ತಲೇ ಇದೆ. ಕೆಲವರು ಒಳಗೊಳಗೆ ವಿರೋಧಿಸಿದರೆ, ಇನ್ನೂ ಕೆಲವರು ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ. ಸೇಮ್ ಯಡಿಯೂರಪ್ಪ ಅವರೇ ಎದುರಿಸಿದ್ದ ಸವಾಲುಗಳನ್ನು ವಿಜಯೇಂದ್ರ ಅವರೂ ಎದುರಿಸುತ್ತಿದ್ದಾರೆ. ಯಡಿಯೂರಪ್ಪ ವಿರುದ್ಧ ಟೀಕೆಗಳು ಬರುತ್ತಿದ್ದುದು ಅಧಿಕಾರ ಸಿಕ್ಕ ಮೇಲೆ. ಅದಕ್ಕೂ ಮೊದಲು ಯಡಿಯೂರಪ್ಪ ಪಕ್ಷಕ್ಕೆ ಶಕ್ತಿಯಾಗಿರುತ್ತಿದ್ದರು. ಪಕ್ಷವನ್ನು ಅಧಿಕಾರಕ್ಕೆ ತರುವ ತಂತ್ರ ಮಂತ್ರಗಳೆಲ್ಲ ಯಡಿಯೂರಪ್ಪ ಅವರದ್ದಾದರೂ, ಅಧಿಕಾರ ಸಿಕ್ಕ ಮೇಲೆ ವಿರೋಧ ಶುರುವಾಗುತ್ತಿತ್ತು. ಈಗ ವಿಜಯೇಂದ್ರ ಅವರೂ ಇಂಥದ್ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಆದರೆ ಇಷ್ಟು ದಿನ ಮೌನವಾಗಿರುತ್ತಿದ್ದ ವಿಜಯೇಂದ್ರ ಯತ್ನಾಳ್, ಪ್ರತಾಪ್ ಸಿಂಹ, ರಮೇಶ್ ಜಾರಕಿಹೊಳಿ, ಲಿಂಬಾವಳಿ, ಬಿಪಿ ಹರೀಶ್, ಸಿಟಿ ರವಿ, ಈಶ್ವರಪ್ಪ.. ಹೀಗೆ ಯಾರು ಟೀಕೆ ಮಾಡಿದರೂ.. ಕೌಂಟರ್ ಕೊಡುವುದಕ್ಕೆ ಹೋಗುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಅದರಲ್ಲೂ ಆರ್ ಎಸ್ ಎಸ್ ನಾಯಕರ ಸಭೆ ಬಳಿಕ ವಿಜಯೇಂದ್ರ ಇನ್ನೂ ಸುಮ್ಮನಿದ್ದರೆ ಉಳಿಗಾಲ ಇಲ್ಲ ಎಂಬ ತರ್ಕಕ್ಕೆ ಬಂದಿದ್ದಾರೆ. ಇದೀಗ ಯತ್ನಾಳ್ ವಿರುದ್ಧ ಬಹಿರಂಗವಾಗಿಯೇ ಗುಡುಗಿದ್ದಾರೆ.
ಇತ್ತೀಚೆಗೆ ಯತ್ನಾಳ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿಯ ಮುಂದುವರಿದ ಭಾಗದಲ್ಲಿ ಯಡಿಯೂರಪ್ಪ ಲಿಂಗಾಯತರಿಗೆ ೨ಎ ಮೀಸಲಾತಿ ಕೊಡುವುದಕ್ಕೆ ವಿರೋಧವಾಗಿದ್ದರು ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಕೌಂಟರ್ ಕೊಟ್ಟಿರುವ ವಿಜಯೇಂದ್ರ ʻಮೀಸಲಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಯತ್ನಾಳ್ ಅವರಿಂದ ಕಲಿಯುವಂತದ್ದು ಏನೂ ಇಲ್ಲʼ ಎಂದು ಕೌಂಟರ್ ಕೊಟ್ಟಿದ್ದಾರೆ. ಇದಕ್ಕೂ ಮುನ್ನ್ರಮೇಶ ಜಾರಕಿಹೊಳಿ ಅವರಿಗೂ ನೇರಾನೇರ ಎದಿರೇಟು ಕೊಟ್ಟಿದ್ದ ವಿಜಯೇಂದ್ರ ರಮೇಶ್ ಜಾರಕಿಹೊಳಿ ಅವರಂತಹವರ ಬಾಯಲ್ಲಿ ಪಕ್ಷ, ಸಿದ್ಧಾಂತದಂತಹ ಮಾತುಗಳು ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಟಾಂಟ್ ಕೊಟ್ಟಿದ್ದರು. ಇಂತಹ ಹೇಳಿಕೆಗಳ ಮೂಲಕ ವಿರೋಧಿಗಳನ್ನು ನೇರಾನೇರವಾಗಿ ಅಟ್ಯಾಕ್ ಮಾಡುತ್ತಿದ್ದಾರೆ. ಆರಂಭದ ದಿನಗಳಿಂದ ಮೌನವಾಗಿಯೇ ಇರುತ್ತಿದ್ದ ವಿಜಯೇಂದ್ರ, ಇದ್ದಕ್ಕಿದ್ದಂತೆ ಕೌಂಟರ್ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರವೂ ಇದೆ.
ವಿಜಯೇಂದ್ರ ಕೌಂಟರ್ ಹಿಂದೆ.. ಅವರ ಪವರ್..!
ಹಿಂದೆಲ್ಲ ಭಿನ್ನಮತೀಯ ನಾಯಕರು ತಮ್ಮನ್ನು ಟೀಕಿಸಿದರೆ ವಿಜಯೇಂದ್ರ ಸಹಿಸಿಕೊಂಡು ಸುಮ್ಮನಿರುತ್ತಿದ್ದ ತಿರುಗಿ ಬಿದ್ದಿರುವುದರ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿದ್ದಾರೆ ಎನ್ನಲಾಗುತ್ತಿದೆ. ತಮ್ಮನ್ನು ಯಾರೇನೂ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿರುವುದು ಯತ್ನಾಳ್ ಪಡೆಗೆ ಶುಭ ಸುದ್ದಿಯೇನೂ ಅಲ್ಲ. ಇತ್ತೀಚೆಗೆ ದಿಲ್ಲಿಗೆ ಹೋಗಿದ್ದ ವಿಜಯೇಂದ್ರ ಅವರಿಗೆ ನೀವು ಯಾವುದಕ್ಕೂ ಯೋಚನೆ ಮಾಡಬೇಡಿ. ಪಕ್ಷ ಕಟ್ಟಲು ಏನು ಮಾಡಬೇಕು ಅನ್ನಿಸುತ್ತದೋ ಅದನ್ನು ಮಾಡಿ. ಬಿಬಿಎಂಪಿ ಎಲೆಕ್ಷನ್ ಸದ್ಯಕ್ಕೆ ನಿಮ್ಮ ಟಾರ್ಗೆಟ್ ಆಗಿರಲಿ. ಮೊದಲು ಕರ್ನಾಟಕದ ರಾಜಧಾನಿಯನ್ನು ವಶಪಡಿಸಿಕೊಂಡರೆ ನಂತರ ರಾಜ್ಯವನ್ನು ವಶಪಡಿಸಿಕೊಳ್ಳುವುದು ಸುಲಭ’ ಅನ್ನೋ ಸೂಚನೆ ಸಿಕ್ಕಿದೆಯಂತೆ.
ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ನಂತರ ಹೆಜ್ಜೆ ಹೆಜ್ಜೆಗೂ ನಡ್ಡಾ ಬ್ರೇಕ್ ಹಾಕುತ್ತಿದ್ದರು. ಆದರೆ ಇತ್ತೀಚೆಗೆ ಕರ್ನಾಟಕದಿಂದ ಅವರಿಗೆ ಬರುತ್ತಿರುವ ರಿಪೋರ್ಟುಗಳು ವಿಜಯೇಂದ್ರ ಜನಪ್ರಿಯತೆ ಹೆಚ್ಚುತ್ತಿರುವ ಸುಳಿವು ಕೊಟ್ಟಿವೆ. ವಿಜಯೇಂದ್ರ ಅವರಂತೆ ಪಕ್ಷ ಸಂಘಟಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಹೇಳುತ್ತಿದೆ. ಪರಿಣಾಮ? ನಡ್ಡಾ ಅವರೀಗ ವಿಜಯೇಂದ್ರ ಅವರ ಬೆನ್ನಿಗೆ ನಿಂತಿದ್ದಾರೆ.
ವಿಜಯೇಂದ್ರ ವಿರೋಧಿಗಳ ಪಡೆಯಲ್ಲಿರುವ ಯತ್ನಾಳ್, ಪ್ರತಾಪ್ ಸಿಂಹ, ರಮೇಶ್ ಜಾರಕಿಹೊಳಿ, ಲಿಂಬಾವಳಿ, ಬಿಪಿ ಹರೀಶ್, ಸಿಟಿ ರವಿ, ಜೊಲ್ಲೆ ಮೊದಲಾದವರು ತಮ್ಮ ಕ್ಷೇತ್ರಗಳಲ್ಲಿಯೇ ಲೀಡ್ ಕೊಡಿಸಲು ಒದ್ದಾಡುವ ನಾಯಕರು. ಅಕ್ಕಪಕ್ಕದ ಕ್ಷೇತ್ರಗಳಲ್ಲೂ ಪ್ರಭಾವ ಇಲ್ಲದಂತಹವರು. ಇಂತಹವರ ಬೆನ್ನಿಗೆ ನಿಂತರೆ ಪಕ್ಷಕ್ಕೆ ಯಾವ ಲಾಭವೂ ಇಲ್ಲ ಎಂಬ ಕಾರಣಕ್ಕಾಗಿಯೇ ನಡ್ಡಾ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ವಿಜಯೇಂದ್ರ ಮೇಲುಗೈ ಎನ್ನಲಾಗುತ್ತಿದೆ. ಆದರೆ ಬಿಜೆಪಿಯೊಳಗಿನ ಲೆಕ್ಕಾಚಾರಗಳನ್ನು ಅರ್ಥ ಮಾಡಿಕೊಳ್ಳೋದು ಅಷ್ಟು ಸುಲಭವೂ ಅಲ್ಲ.



