ಮುಡಾ ಪ್ರಕರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಸುದ್ದಿ ತೀವ್ರವಾಘಿ ಹಬ್ಬಿರುವ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ನವದೆಹಲಿಗೆ ತೆರಳಿದ್ದಾರೆ. ವರಿಷ್ಠರ ಸೂಚನೆಯಂತೆ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿ.ವೈ.ವಿಜಯೇಂದ್ರ ದೆಹಲಿಗೆ ಹೋಗಿರುವುದು ಒಂದು ಕುತೂಹಲ ಸೃಷ್ಟಿಸಿದ್ದರೆ, ಆರ್.ಎಸ್.ಎಸ್. ಮಧ್ಯಪ್ರವೇಶ ಮಾಡಿರುವುದು ಇನ್ನೊಂದು ಕುತೂಹಲ ಹುಟ್ಟುಹಾಕಿದೆ. ಮೇಲ್ನೋಟಕ್ಕೆ ವಿಜಯೇಂದ್ರ, ಛಲವಾದಿ ನಾರಾಯಣ ಸ್ವಾಮಿ ದೆಹಲಿ ಪ್ರಯಾಣದಲ್ಲಿ ಯಾವುದೇ ವಿಶೇಷತೆ ಇಲ್ಲ ಆದರೆ, ಆಂತರಿಕ ವಿಷಯ ಹಾಗಿಲ್ಲ.
ಆರ್.ಎಸ್.ಎಸ್. ಮಧ್ಯಪ್ರವೇಶ :
ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿ ಆರ್.ಎಸ್.ಎಸ್. ಶಾಖೆ ಇದೆ. ಆ ಶಾಖೆಯಲ್ಲಿ ಬಿಜೆಪಿಯ ಸುಮಾರು 40 ಮುಖಂಡರ ಸಭೆ ಕರೆಯಲಾಗಿದೆ. ರಾಜ್ಯ ಉಸ್ತವಾಗಿ ಡಾ.ರಾಧಾ ಮೋಹನ್ ದಾಸ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ.. ಸೇರಿದಂತೆ ಪ್ರಮುಖ ನಾಯಕರನ್ನೆಲ್ಲ ಸಭೆಗೆ ಆಹ್ವಾನ ನೀಡಲಾಗಿದೆ.
ಸಾಮಾನ್ಯವಾಗಿ ಆರ್.ಎಸ್.ಎಸ್. ಈ ರೀತಿಯ ಸಭೆ ನಡೆಸುವುದಿಲ್ಲ. ಅದರಲ್ಲೂ ಇತ್ತೀಚೆಗಂತೂ ಆರ್.ಎಸ್.ಎಸ್. ರಾಜಕೀಯ ಸಭೆಯನ್ನೇ ಕರೆದಿರಲಿಲ್ಲ. ವಿಧಾನಸಭೆ ಚುನಾವಣೆಗೂ ಕರೆದಿರಲಿಲ್ಲ. ಲೋಕಸಭೆಗೂ ಕರೆದಿರಲಿಲ್ಲ. ಎಲೆಕ್ಷನ್ ಮುಗಿದ ಮೇಲೂ ಸಭೆ ಮಾಡಿರಲಿಲ್ಲ. ಇದೀಗ ಇದ್ದಕ್ಕಿದ್ದಂತೆ ಸಭೆ ಕರೆದಿದ್ದು ಏಕೆ ಎನ್ನುವುದೇ ಕುತೂಹಲ ಹುಟ್ಟಿಸಿದೆ.
ಈ ಸಭೆ ಆರ್.ಎಸ್.ಎಸ್. ಒಳಗೆ ಮುಕ್ತವಾಗಿ ನಡೆಯಲಿದೆ. ಆದರೆ, ಕ್ಯಾಮೆರಾಗಳಿಗೆ ಪ್ರವೇಶ ಇರುವುದಿಲ್ಲ. ಅಲ್ಲಿ ಎಲ್ಲ ನಾಯಕರೂ ಮುಕ್ತವಾಗಿ ತಮ್ಮ ತಮ್ಮ ಅಭಿಪ್ರಾಯ ಹೇಳಿಕೊಳ್ಳಬಹುದು. ಈ ಸಭೆ ನಡೆಸಿ, ಭಿನ್ನಮತವನ್ನು ಬಗೆಹರಿಸಿ ಎಂದು ಬಿಜೆಪಿ ರಾಷ್ಟ್ರೀಯ ನಾಯಕರೇ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ ಎನ್ನಲಾಗುತ್ತಿದೆ.
ಆರ್.ಎಸ್.ಎಸ್. ಕರೆದಿರುವ ಈ ಸಭೆಗೂ ಮೊದಲೇ ವಿಜಯೇಂದ್ರ ದೆಹಲಿಗೆ ಹೋಗಿ ಬರುತ್ತಾರೆ. ಅಂದ್ರೆ, ದೆಹಲಿಯಲ್ಲಿ ಈ ಕುರಿತು ಯಾವ ರೀತಿ ವರ್ತಿಸಬೇಕು ಎಂಬ ಸಲಹೆಯನ್ನೇನಾದರೂ ಹೈಕಮಾಂಡ್ ನೀಡುತ್ತಿದೆಯಾ.. ಈ ಬಗ್ಗೆ ಮಾಹಿತಿ ಇಲ್ಲ. ಆದರೆ ವಿಜಯೇಂದ್ರ ಮತ್ತು ಯತ್ನಾಳ್ ಅವರ ಭಿನ್ನ ನಡೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿರುವುದಂತೂ ಸತ್ಯ್ ರಾಜ್ಯಾಧ್ಯಕ್ಷರಾಗಿರುವ ಕಾರಣಕ್ಕೆ ವಿಜಯೇಂದ್ರ ತಮಗೆ ತಾವೇ ಒಂದು ಬೌಂಡರಿ ಹಾಕಿಕೊಂಡಿದ್ದಾರೆ ಎನ್ನಬಹುದು. ಆದರೆ ಯತ್ನಾಳ್, ಜಾರಕಿಹೊಳಿ ಸೇರಿದಂತೆ ಅವರ ಬಣದ ನಾಯಕರಾರೂ ಬಾರ್ಡರ್ ಹಾಕಿಕೊಂಡಿಲ್ಲ.
ವಿಜಯೇಂದ್ರ ದೆಹಲಿ ಭೇಟಿ ಹಿಂದೆ ಬೇರೆಯದೇ ಕಥೆ ಇದ್ಯಂತೆ..!
ಕಿತ್ತೂರು ಕರ್ನಾಟಕ ಭಾಗದ ಪ್ರಭಾವಿ ಸಚಿವರೊಬ್ಬರು ಕೆಲದಿನಗಳ ಹಿಂದೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಜೊತೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.ಬೆಳಗಾವಿಯ ಮಾಜಿ ಸಚಿವರೊಬ್ಬರು ಮಹಾರಾಷ್ಟ್ರದ ಬಿಜೆಪಿ ಹಿರಿಯ ನಾಯಕರ ಜೊತೆ ಸತತ ಸಂಪರ್ಕದಲ್ಲಿದ್ದು ಅವರ ಸೂಚನೆ ಮೇರೆಗೆ ಪ್ರಮೋದ್ ಸಾವಂತ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಕರ್ನಾಟಕ ರಾಜಕಾರಣದ ಬೆಳವಣಿಗೆಗಳ ಬಗ್ಗೆ ದೆಹಲಿ ಬಿಜೆಪಿ ನಾಯಕರು ನಿರಂತರವಾಗಿ ಕಣ್ಣಿಟ್ಟಿದ್ದಾರೆ. ಪ್ರತಿಯೊಂದು ಬೆಳವಣಿಗೆಗಳ ಬಗ್ಗೆ ಪ್ರತಿದಿನ ರಾಜ್ಯ ನಾಯಕರ ಜೊತೆ ಮಾಹಿತಿಯನ್ನು ಪಡೆಯುತ್ತಿದ್ದಾರೆ.ಗುರುವಾರ ಹೈಕೋರ್ಟ್‌ನಲ್ಲಿ ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಸನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಅರ್ಜಿಯ ವಿಚಾರಣೆ ಅಂತಿಮ ಹಂತಕ್ಕೆ ತಲುಪಿದೆ.



