ಮುಡಾ ಹಗರಣ ಬೆನ್ನೆಲ್ಲೆ ಮುಖ್ಯಮಂತ್ರಿ ಸ್ಥಾನ ಬದಲಾವಣೆಯೇನೋ ಜೋರಾಗಿದೆ. ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಅನ್ನೋದು ಕಾಂಗ್ರೆಸ್‌ನ ಹಿರಿಯತಲೆಗಳು ಮಾತನಾಡಿಕೊಳ್ತಿರೋ ಗುಸುಗುಸು ಪಿಸುಪಿಸು ಮಾತು. ಆ ಮಾತುಗಳೆಲ್ಲ ತಮ್ಮ ತಮ್ಮ ಬೆಂಬಲಿಗ ನಾಯಕರ ರಹಸ್ಯ ಭೇಟಿಗಳಲ್ಲೇ ಬರುತ್ತಿವೆ ಅನ್ನೋದು ಕುತೂಹಲ.
ಸತೀಶ್ ಜಾರಕಿಹೊಳಿ ಅಚ್ಚರಿ : ಪ್ರತಿಸಲ ಸಿಎಂ ಬದಲಾವಣೆ ಚರ್ಚೆ ಬಂದಾಗಲೂ ಕೇಳಿ ಬರುವ ಹೆಸರು ಸತೀಶ್ ಜಾರಕಿಹೊಳಿಯವರದ್ದು. ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ, ವಾಲ್ಮೀಕಿ ಸಮುದಾಯ, ಅಹಿಂದ ವರ್ಗಕ್ಕೆ ಸೇರಿದವರು ಎಂಬುದರ ಜೊತೆಗೆ ಸಿದ್ದರಾಮಯ್ಯ ಅವರ ಅತ್ಯಾಪ್ತ ಬಳಗದವರು. ಸತೀಶ್ ಜಾರಕಿಹೊಳಿ ಮೊನ್ನೆಯಷ್ಟೇ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗಿ, ಗಂಟೆಗಟ್ಟಲೆ ಮಾತುಕತೆ ನಡೆಸಿದ್ರು. ಎಲ್ಲರಿಗೂ ಆಸೆ ಇರುತ್ತೆ ಅನ್ನೋ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಬದಲಾವಣೆ ಇಲ್ಲ ಅಂತಾನೂ ಹೇಳ್ತಾರೆ. ಪರಮೇಶ್ವರ್ ಜೊತೆಯಲ್ಲೂ ಮಾತುಕತೆ ನಡೆಸ್ತಾರೆ. ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಸತೀಶ್ ಜಾರಕಿಹೊಳಿ ಅವ್ರನ್ನ ಭೇಟಿಯಾಗಿದ್ದಾರೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯ ಸರ್ಕಾರಿ ನಿವಾಸದಲ್ಲಿ ಚರ್ಚೆ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆ ಕಾರ್ಯದ ನಿಮಿತ್ತ ಭೇಟಿಯಾಗಿದ್ದೇನೆ ರಾಜಕೀಯ ಮಾಡಬೇಡ್ರಪ್ಪಾ ಅಂತಾ ಮಾಧ್ಯಮಗಳಿಗೆ ಹೇಳಿದ್ದಾರೆ.
ಇಲಾಖೆಯ ಬಗ್ಗೆ, ತಮ್ಮ ಕ್ಷೇತ್ರದ ಕೆಲಸಗಳ ಬಗ್ಗೆ ಮಾತನಾಡಿರುವ ವಿಜಯೇಂದ್ರ, ನಂತರ ಜಾರಕಿಹೊಳಿ ಅವರ ಜೊತೆ ಪ್ರತ್ಯೇಕವಾಗಿ ಖಾಸಗಿಯಾಗಿ 5 ನಿಮಿಷ ಮಾತನಾಡಿದ್ರಂತೆ. ಆ 5 ನಿಮಿಷದ ಕುತೂಹಲವೇ ಎಲ್ಲರಲ್ಲೂ ಕುತೂಹಲ ಹುಟ್ಟಿಸಿರೋದು.
ಡಿಕೆ ಶಿವಕುಮಾರ್ ದೇವಸ್ಥಾನ ರೌಂಡ್ಸ್ : ಈ ಬೆಳವಣಿಗೆಗಳ ನಡುವೆ ನಿನ್ನೆ ರಾತ್ರಿ 10.30ರ ಸುಮಾರಿಗೆ ಡಿಸಿಎಂ ಡಿಕೆಶಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರೋ ಖರ್ಗೆ ನಿವಾಸಕ್ಕೆ ತೆರಳಿದ ಡಿಕೆಶಿ ಕೆಲಹೊತ್ತು ಚರ್ಚೆ ನಡೆಸಿದ್ದಾರೆ. ಅದು ಮುಗಿಯುತ್ತಲೇ ತಮಿಳುನಾಡಿನ ತಿರುವಣ್ಣಾಮಲೈನ ಅರುಣಾಚಲೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದಾರೆ. “ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಮುಂಚಿತವಾಗಿ ಈ ದೇವಾಲಯಕ್ಕೆ ಭೇಟಿ ನೀಡಿ, ರಾಜ್ಯದಲ್ಲಿ ಉತ್ತಮ ಆಡಳಿತ ಮಾಡುವ ಶಕ್ತಿ ದೊರೆಯಲಿ ಮತ್ತು ಸಮೃದ್ಧಿಯಾಗಿ ಮಳೆ ಬೀಳಲಿ ಎಂದು ಪ್ರಾರ್ಥಿಸಿದ್ದೆ. ಈ ಕಾರಣಕ್ಕೆ ಮತ್ತೆ ದೇವರ ದರ್ಶನ ಮಾಡಿದೆ. ಎಲ್ಲರ ಒಳಿತಿಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಡಿಕೆ ಸುರೇಶ್ ಸಿದ್ದರಾಮಯ್ಯ ಅವರೇ ಐದೂ ವರ್ಷ ಸಿಎಂ ಆಗಿರ್ತಾರೆ, ಅನುಮಾನ ಬೇಡ ಎಂದು ಹೇಳಿಕೆ ಕೊಟ್ಟಿದ್ದಾರೆ. ನಾಯಕತ್ವ ಬದಲಾವಣೆಯ ಪ್ರಶ್ನೆ ಹಾಗೂ ಚರ್ಚೆ ಎರಡೂ ಇಲ್ಲ ಎಂದಿರೋ ಡಿಕೆ ಸುರೇಶ್ ನಮ್ಮ ಪಕ್ಷದ ನಾಯಕರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದಿದ್ದಾರೆ.
ವಿಜಯೇಂದ್ರ ಅವರ ಭವಿಷ್ಯವಾಣಿ : ಸಿದ್ದ ರಾಮಯ್ಯ ಯಾವುದೇ ಸಂದರ್ಭದಲ್ಲಿಯಾದರೂ ರಾಜೀನಾಮೆ ನೀಡಬಹುದು. ಹೈಕಮಾಂಡ್ ರಾಜೀನಾಮೆ ಪಡೆಯುವ ಚಿಂತನೆ ನಡೆಸಿದೆ. ಹೈಕಮಾಂಡ್ ಏನು ಚರ್ಚೆ ನಡೆಸುತ್ತಿದೆ ಎಂಬುದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಎಂದಿರುವ ವಿಜಯೇಂದ್ರ ಅವರ ಪ್ರಕಾರ ದಸರಾ ಮುಗಿದ ನಂತರ ಸಿಎಂ ಬದಲಾವಣೆ ಖಚಿತ. ಡಿ.ಕೆ.ಶಿವಕುಮಾರ್ ಅವರಷ್ಟೇ ಅಲ್ಲ, ಇನ್ನೂ ಏಳೆಂಟು ಜನ ಮುಖ್ಯಮಂತ್ರಿ ಹುದ್ದೆ ಮೇಲೆ ಟವಲ್ ಹಾಕಿ ಕೂತಿದಾರೆ. ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದು ನಮಗೆ ಗೊತ್ತಿಲ್ಲ. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಆದರೆ, ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಸತ್ಯ ಎಂದಿದ್ದಾರೆ ವಿಜಯೇಂದ್ರ. ವಿಜಯೇಂದ್ರ ಅವರ ಪ್ರಕಾರ ಸತೀಶ್ ಜಾರಕಿಹೊಳಿಯನ್ನು ದೆಹಲಿಗೆ ಕಳುಹಿಸಿದ್ದೇ ಸಿದ್ದರಾಮಯ್ಯ.
ಇಷ್ಟಕ್ಕೂ ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಿದ್ದರಾಮಯ್ಯ ಏನ್ ಮಾಡ್ತಿದ್ದಾರೆ ಅಂತಾ ನೋಡಿದ್ರೆ, ಅವರಾಗಲೇ ಬೆಳಗಾವಿ ಅಧಿವೇಶನದಲ್ಲಿ ಜಾತಿ ಗಣತಿ ವರದಿ ಮಂಡಿಸಿ, ರಾಜ್ಯ ರಾಜಕೀಯದಲ್ಲಿ ಮತ್ತೊಂದು ಬಿರುಗಾಳಿ ಎಬ್ಬಿಸುವ ಸೂಚನೆ ಕೊಟ್ಟಿದ್ದಾರೆ.



