ವಿಜಯಪುರದ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ವಕ್ಫ್ ಆಸ್ತಿ ವಿವಾದದಲ್ಲಿ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಇದರಿಂದ ಪ್ರತಿಪಕ್ಷಗಳಿಗೆ ಒಂದಷ್ಟು ಶಕ್ತಿ ಬಂದಿದೆ ಎನ್ನುತ್ತಿರುವಾಗಲೇ, ಮತ್ತೊಮ್ಮೆ ಬಿಜೆಪಿಯೊಳಗಿನ ಬೀದಿಗೆ ಬಿದ್ದಿದೆ. ವಕ್ಫ್ ಬೋರ್ಡ್ ಕಡೆಯಿಂದ ರೈತರಿಗೆ ನೊಟೀಸ್ ಜಾರಿಯಾಗಿದೆ. ಆದರೆ ಅಷ್ಟೆಲ್ಲ ನೋಟಿಸ್ ಕೊಟ್ಟಿಲ್ಲ, ಕೆಲವೇ ಕೆಲವರಿಗೆ ಅದೂ ಮುಸ್ಲಿಂ ವ್ಯಕ್ತಿಗಳ ಜಮೀನು ಹೊಂದಿರುವವರಿಗೆ ಮಾತ್ರ ನೋಟಿಸ್ ಕೊಟ್ಟಿದ್ದೇವೆ. ರೈತರ ಭೂಮಿಯನ್ನ ಕಬಳಿಸುವ ಹುನ್ನಾರ ಇಲ್ಲ ಎನ್ನುತ್ತಿರುವಾಗಲೇ, ಅತ್ತ ಯಾದಗಿರಿ, ಧಾರವಾಡದಲ್ಲೂ ಇದೇ ರೀತಿಯಲ್ಲಿ ರೈತರ ಜಮೀನಿನಲ್ಲಿ ವಕ್ಫ್ ಬೋರ್ಡ್ ಹೆಸರು ಪ್ರತ್ಯಕ್ಷವಾಗಿದೆ. ಆದರೆ ಹೋರಾಟ ನಡೆಸುವ ಹಾದಿಯಲ್ಲಿರುವ ಬಿಜೆಪಿಗೆ, ಪಕ್ಷದೊಳಗಿನ ಬೆಂಕಿ ಆರಿಸಿಕೊಂಡರೇ ಸಾಕಪ್ಪಾ ಸಾಕು ಎನ್ನುವಂತಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಬಿಜೆಪಿ ಪರಿಶೀಲನಾ ತಂಡವನ್ನು ರಚನೆ ಮಾಡಿದ್ದರು. ಆದ್ರೆ, ಯತ್ನಾಳ್ ತಂಡದಲ್ಲಿರಲಿಲ್ಲ. ಬಳಿಕ ಯತ್ನಾಳ್, ಬಿಜೆಪಿ ತಂಡ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದಕ್ಕೆ ಮಣಿದ ವಿಜಯೇಂದ್ರ , ವಿಜಯಪುರ ಪ್ರವಾಸಕ್ಕೆ ಒಂದು ದಿನ ಬಾಕಿ ಇರುವಾಗಲೇ ಬಿಜೆಪಿ ಪರಿಶೀಲನಾ ತಂಡವನ್ನು ಪುನಾರಚನೆ ಮಾಡಿದ್ದಾರೆ. ವಿಜಯಪುರ ಜಿಲ್ಲೆಗೆ ತೆರಳುವ ಕಾರಜೋಳ ನೇತೃತ್ವದ ತಂಡಕ್ಕೆ ಹೊಸದಾಗಿ ರಮೇಶ್ ಜಿಗಜಿಣಗಿ, ಶಾಸಕ ಯತ್ನಾಳ್ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ.ಜಿರಲಿ ಅವರನ್ನು ಸೇರ್ಪಡೆ ಮಾಡಿದ್ದಾರೆ.
ಯತ್ನಾಳ್ ಹೇಳಿದ್ದುದು ಏನು..?
ರೈತರ ಅಹವಾಲು ಸ್ವೀಕರಿಸಲು ಬಿಜೆಪಿಯಿಂದ ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಹಾಲಿ ಸಂಸದ, ಶಾಸಕ ನಾನು ಇದ್ದೇನೆ. ನಮ್ಮನ್ನ ಹೊರಗಿಟ್ಟು ತಂಡ ರಚಿಸಿದ್ದಾರೆ. ಇದು ವಿಜಯೇಂದ್ರನ ತಂಡಕ್ಕೆ ನಾನು ಬಹಿಷ್ಕಾರ ಹಾಕಿದ್ದೇನೆ. ವಕ್ಫ್ ವಿರುದ್ಧ ಮೊದಲು ಹೋರಾಟ ಪ್ರಾರಂಭಿಸಿದ್ದೇ ನಾನು. ವಿಜಯೇಂದ್ರ ನನ್ನನ್ನು ತುಳಿಯಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ಅಷ್ಟೇ ಅಲ್ಲ, ಯಡಿಯೂರಪ್ಪ ಸಿಎಂ ಆಗಿದ್ದಾಗ ಜಮೀರ್ ಅಹ್ಮದ್ ಖಾನ್‌ಗೆ 1,000 ಕೋಟಿ ರೂ. ಅನುದಾನ ನೀಡಿದ್ದರು. ಇದನ್ನು ನಾನು ಪ್ರಸ್ತಾಪಿಸಿ ವಿರೋಧ ಮಾಡಿದ್ದಕ್ಕೆ ಅದನ್ನು ವಾಪಸ್ ಪಡೆದರು ಎಂದಿರುವ ಯತ್ನಾಳ್, ಪೂಜ್ಯ ತಂದೆಯವರು ಕಿರಿಯ ಮಗ ಜಮೀರ್‌ಗೆ ಸಾವಿರ ಕೋಟಿ ರೂ. ಅನುದಾನ ನೀಡಿದ್ದರು. ರೂಪಾಯಿ ಅನುದಾನ ನೀಡಲು ಏನಾದರೂ ತೆಗೆದುಕೊಂಡಿರಬೇಕಲ್ಲ ಎಂದು ವ್ಯಂಗ್ಯವಾಗಿಯೇ ಕುಟುಕಿದ್ದರು.
ಯತ್ನಾಳ್ ಹೇಳಿಕೆ ನಂತರ ಸಮಿತಿಗೆ ಹೊಸ ಹೆಸರು
ಯತ್ನಾಳ್ ಅವರ ಈ ಹೇಳಿಕೆ ಹೊರಬಿದ್ದ ನಂತರ ಬಿಜೆಪಿಯ ಸಮಿತಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೊಂಡಿದೆ. ಯತ್ನಾಳ್ ಅವರನ್ನೂ ಸಮಿತಿಯಲ್ಲಿ ಸೇರಿಸಲಾಗಿದೆ.
ವಕ್ಫ್ ಬೋರ್ಡ್ ವಿವಾದ : ಯತ್ನಾಳ್ ಏನು ಮಾಡ್ತಿದ್ದಾರೆ..?
ಯತ್ನಾಳ್ ಅವರು ರೈತರ ಪರವಾಗಿ ನಿಂತಿದ್ದಾರೆ. ಅಲ್ಲದೆ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಬಂದಿರೋ ಹಿನ್ನೆಲೆಯಲ್ಲಿ, ನೋಟಿಸ್ ಪಡೆದಿರುವ ರೈತರಿಗೆ ಉಚಿತ ಕಾನೂನು ನೆರವು ನೀಡುತ್ತಿದ್ದಾರೆ. ಅದಕ್ಕೊಂದು ಪ್ರತ್ಯೇಕ ವಕೀಲರ ತಂಡವನ್ನೇ ನೇಮಕ ಮಾಡಿದ್ದಾರೆ.



