ವಿಜಯೇಂದ್ರ ಮತ್ತು ಬಸನ ಗೌಡ ಪಾಟೀಲ್ ಯತ್ನಾಳ್ ನಡುವಿನ ಸಮರ ಹೊಸದೇನಲ್ಲ. ಮೊದಮೊದಲು ಯತ್ನಾಳ್ ಅಗತ್ಯ ಬಿದ್ದಾಗಲೆಲ್ಲ ಯಡಿಯೂರಪ್ಪ ಜೊತೆ ರಾಜಿ ಮಾಡಿಕೊಂಡು ಪ್ರಚಾರಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಯಡಿಯೂರಪ್ಪ ಅವರೂ ಅಷ್ಟೇ, ಯತ್ನಾಳ್ ಅವರು ಏನೂ ಹೇಳಿಯೇ ಇಲ್ಲವೇನೋ ಎಂಬಂತೆ ಪ್ರಚಾರ ಮಾಡಿ ಬರುತ್ತಿದ್ದರು. ಆದರೆ, ವಿಜಯೇಂದ್ರ ವಿಷಯದಲ್ಲಿ ಹಾಗಾಗಿಲ್ಲ.
ಯತ್ನಾಳ್ ವಿಜಯೇಂದ್ರ ಅವರನ್ನು ಹೋದಲ್ಲಿ ಬಂದಲ್ಲಿ ಅಟ್ಯಾಕ್ ಮಾಡುತ್ತಲೇ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಅಬ್ಬರಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರು ಮಾತ್ರ ಫುಲ್ ಸೈಲೆಂಟ್. ಆರಂಭದಲ್ಲಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಅಂತಿದ್ದ ಬಿಜೆಪಿ ಹೈಕಮಾಂಡ್, ನೋಡೋಣ.. ನೋಡೋಣ.. ಖಂಡಿತಾ ಆಕ್ಷನ್ ತೆಗೆದುಕೊಳ್ತೇವೆ. ಅಕ್ಟೋಬರ್ ಅಂತ್ಯದಲ್ಲಿ ಸಸ್ಪೆಂಡ್ ಮಾಡೋಣ ಎಂದಿದ್ದರಂತೆ. ಈಗ ಇದ್ದಕ್ಕಿದ್ದಂತೆ ರಾಜೀ ಮಾಡ್ಕೊಳ್ಳಿ ಅಂದಿದ್ದಾರಂತೆ.
ವಿಜಯೇಂದ್ರ ಸುತಾರಾಂ ಒಪ್ಪಿಲ್ಲ. ಯತ್ನಾಳ್ ಅವರು ತಮ್ಮ, ತಮ್ಮ ತಂದೆಯ ವಿರುದ್ಧ ಅಷ್ಟೇ ಅಲ್ಲ, ಬಿಜೆಪಿಗೂ ರಾಷ್ಟ್ರಮಟ್ಟದಲ್ಲಿ ಮುಜುಗರ ಮಾಡಿದ್ಧಾರೆ. ಇದನ್ನು ಹೇಗೆ ಸಹಿಸಿಕೊಳ್ಳೋದು, ನೋ ನೋ ಎಂದರಂತೆ. ಹೀಗಾಗಿ ದೆಹಲಿಗೆ ಹೋದರೂ.. ನಾನು ಯತ್ನಾಳ್ ವಿರುದ್ಧ ಕಂಪ್ಲೇಂಟು ಕೊಡಲು ಬಂದಿಲ್ಲ ಎಂದು ಹೇಳಿದ್ದಾರೆ ವಿಜಯೇಂದ್ರ.
ತಾವು ವರಿಷ್ಠರ ಜೊತೆ ಮಾತುಕತೆ ನಡೆಸಿದ್ದು ಪಕ್ಷದ ಸಂಘಟನೆ ಮತ್ತು ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತಾದ ಚರ್ಚೆಯೇ ಹೊರತು ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಯಾರ ವಿರುದ್ಧವೂ ದೂರು ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.
ಯತ್ನಾಳ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಬಿಜೆಪಿ ಶಾಸಕರು ಮತ್ತು ಕೆಲ ಮಾಜಿ ಸಂಸದರು ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆಯೊಂದನ್ನು ನಡೆಸುವ ಬಗ್ಗೆ ಕೇಳಿದಾಗ ವಿಜಯೇಂದ್ರ, ಪಾದಯಾತ್ರೆ ಯಾರೇ ನಡೆಸಲಿ, ಅದು ಪಕ್ಷದ ಬೆಳವಣಿಗೆಗೆ ಪೂರಕವಾಗಿರಬೇಕು ಮತ್ತು ವರಿಷ್ಠರ ಅನುಮತಿ ಮೇರೆಗೆ ನಡೆದಿರಬೇಕು, ಹಾಗಾದಲ್ಲಿ ಮಾತ್ರ ಪಕ್ಷದ ರಾಜ್ಯಾಧ್ಯಕ್ಷನಾಗಿ ತನ್ನ ವಿರೋಧವೇನೂ ಇರಲ್ಲ ಎಂದರು. ಪಕ್ಷದ ವರಿಷ್ಠರಾದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಅಮಿತ್ ಶಾ ತನ್ನನ್ನು ರಾಜ್ಯಾಧ್ಯಕ್ಷ ಮಾಡಿದಾಗ ಕೆಲ ಹಿರಿಯ ನಾಯಕರಿಗೆ ಅದು ಇಷ್ಟವಾಗಿರಲಿಲ್ಲ ಅನ್ನೋದನ್ನು ಅಂಗೀಕರಿಸುತ್ತೇನೆ ಎಂದು ಹೇಳಿದ ವಿಜಯೇಂದ್ರ, ಅವರೆಲ್ಲ ತನ್ನ ಕಾರ್ಯಕ್ಷಮತೆ ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ಬೇಕಾಗಲಿದೆ ಎಂದಿದ್ದಾರೆ.
ವಿಜಯೇಂದ್ರ ಅವರ ಜೊತೆ ಬಿಜೆಪಿಯ ಹಿರಿಯ ನಾಯಕರಾದ ಪ್ರಹ್ಲಾದ್ ಜೋಶಿ ಮತ್ತು ಬಿ ಎಲ್ ಸಂತೋಷ್ ನಿಂತಿದ್ದಾರಂತೆ. ಹೌದು, ಬಿಎಲ್ ಸಂತೋಷ್ ಅವರೂ ವಿಜಯೇಂದ್ರ ಅವರಿಗೆ ಯತ್ನಾಳ್ ಸೇರಿದಂತೆ ಅವರ ಜೊತೆಯಲ್ಲಿರುವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋದು ಹೇಗೆ ಎಂದು ಸಲಹೆ ಕೊಟ್ಟಿದ್ದಾರಂತೆ. ಯಾವ ಯಾವ ಕಾರಣಕ್ಕೆ ಯಾವ ಯಾವ ನಾಯಕರು ವಿಜಯೇಂದ್ರ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂಬ ಮಾಹಿತಿ ನೀಡಿದ್ದಷ್ಟೇ ಅಲ್ಲ, ಯಾವ ಯಾವ ನಾಯಕರನ್ನು ಯಾವ ರೀತಿ ಸಂಭಾಳಿಸಬೇಕು ಎಂದು ಹೇಳಿದ್ದಾರಂತೆ. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ನಿಭಾಯಿಸುವುದು ಕಷ್ಟ ಎಂದೂ ಸಲಹೆ ಕೊಟ್ಟಿದ್ದಾರಂತೆ.
ಎಲ್ಲದಕ್ಕೂ ಅಕ್ಟೋಬರ್ ಉತ್ತರ ಹೇಳಲಿದೆ.



