ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಯತ್ನಾಳ್ ಟೀಂ ಯುದ್ಧವನ್ನೇ ಶುರು ಮಾಡಿದೆ. ಹೈಕಮಾಂಡ್ ಎಲ್ಲವನ್ನೂ ನೋಡುತ್ತ ತಣ್ಣಗೆ ಕುಳಿತಿರುವುದನ್ನು ಬಿಟ್ಟರೆ ಮತ್ತೇನನ್ನೂ ಮಾಡುತ್ತಿಲ್ಲ. ಇಲ್ಲಿ ಸಿಎಂ ಸಿದ್ಧರಾಮಯ್ಯ ಯಾವುದೋ ಊರಿನಲ್ಲಿ ನೀಡಿದ ಯಾವುದೋ ಹೇಳಿಕೆ, ಇಲ್ಲಿ ಸುದ್ದಿಯಾಗುವ ಮೊದಲೇ ನರೇಂದ್ರ ಮೋದಿಯವರಿಗೆ ತಲುಪುತ್ತದೆ. ಅಮಿತ್ ಶಾಗೆ ಮುಟ್ಟುತ್ತದೆ. ಇಷ್ಟೆಲ್ಲ ನಡೆಯುವಾಗ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಹಗ್ಗಜಗ್ಗಾಟಗಳು, ಬೀದಿ ಜಗಳಗಳ ಬಗ್ಗೆ ಮಾಹಿತಿ ಇಲ್ಲ ಎನ್ನುವುದು ಹಾಸ್ಯಾಸ್ಪದ. ಒಟ್ಟಿನಲ್ಲಿ ಬಿಜೆಪಿಯಲ್ಲೀಗ ಮೂರು ಬಣಗಳು ಸೃಷ್ಟಿಯಾಗಿರುವುದು ಸತ್ಯ.
ವಿಜಯೇಂದ್ರ ಟೀಂ.. ಯತ್ನಾಳ್ ಟೀಂ.. ಮತ್ತು ತಟಸ್ಥ ಟೀಂ.
ಒಂದು ಬಣ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸುತ್ತಿದ್ದರೆ, ಮತ್ತೊಂದು ಬಣ ವಿಜಯೇಂದ್ರ ಪರ ಗಟ್ಟಿಯಾಗಿ ನಿಂತಿದೆ. ಇನ್ನು ಮೂರನೇ ಬಣ ಅತ್ತ ಪರನೂ ಅಲ್ಲ, ಇತ್ತ ನೇರವಾಗಿ ವಿರೋಧನೂ ಅಲ್ಲ, ನಾವೆಲ್ಲ ಬಿಜೆಪಿಯವರು. ಎಲ್ಲವನ್ನೂ ಸರಿ ಮಾಡಿ ಎನ್ನುತ್ತಿದೆ. ಆದರೆ.. ಇನ್ನೂ ಒಂದು ಬಣ ಇದೆ. ಆ ಬಣದವರು ಕೊನೆಯಲ್ಲಿ ಯಾರು ಗೆಲ್ತಾರೋ.. ನೋಡೋಣ.. ಎಂದು ಕಾಯುತ್ತಿದೆ.
ವಿಜಯೇಂದ್ರ ವಿರೋಧಿ ಗುಂಪು :
ಬಸನಗೌಡ ಪಾಟೀಲ ಯತ್ನಾಳ್
ರಮೇಶ್ ಜಾರಕಿಹೊಳಿ
ಬಿ.ಪಿ ಹರೀಶ್
ಅರವಿಂದ ಲಿಂಬಾವಳಿ
ಜಿಎಸ್ ಸಿದ್ದೇಶ್ವರ
ಕುಮಾರ ಬಂಗಾರಪ್ಪ
ಬಿ.ವಿ ನಾಯ್ಕ್
ಪ್ರತಾಪ ಸಿಂಹ
ಚಂದ್ರಪ್ಪ ಹೊಳಲ್ಕೆರೆ
ಅಣ್ಣಾ ಸಾಹೇಬ್ ಜೊಲ್ಲೆ
ಶ್ರೀಮಂತ ಪಾಟೀಲ್
ಡಾ. ಕೆ ಸುಧಾಕರ್ ( ಇವರಿನ್ನೂ ಯತ್ನಾಳ್ ಟೀಂನಲ್ಲಿ ನೇರವಾಗಿ ಕಾಣಿಸಿಕೊಂಡಿಲ್ಲ)
ವಿಜಯೇಂದ್ರ ಟೀಂ
ಗೋವಿಂದ ಕಾರಜೋಳ
ಜ್ಯೋತಿ ಗಣೇಶ್
ಸುರೇಶ್ ಗೌಡ
ಸಿ.ಕೆ ರಾಮಮೂರ್ತಿ
ಎಸ್. ಆರ್ ವಿಶ್ವನಾಥ್
ಹರೀಶ್ ಪೂಂಜಾ
ಪ್ರೀತಂ ಗೌಡ
ಛಲವಾದಿ ನಾರಾಯಣ ಸ್ವಾಮಿ
ಎಂ. ಪಿ ರೇಣುಕಾಚಾರ್ಯ
ಬಿಸಿ ಪಾಟೀಲ್
ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ತಟಸ್ಥ ಬಣ
ಶ್ರೀರಾಮುಲು
ಬಸವರಾಜ ಬೊಮ್ಮಾಯಿ
ಆರ್. ಅಶೋಕ್
ಡಿ.ವಿ ಸದಾನಂದ ಗೌಡ
ಸುನೀಲ್ ಕುಮಾರ್
ಸಿ.ಟಿ ರವಿ
ಈ ತಟಸ್ಥ ಬಣದ ವಿಶೇಷತೆ ಎಂದರೆ ಇವರೆಲ್ಲ ಒಂದು ಕಾಲದಲ್ಲಿ ಯಡಿಯೂರಪ್ಪ ಅವರಿಂದ ಉಪಕೃತರಾದವರು. ಬಹುಶಃ ಸುನಿಲ್ ಕುಮಾರ್ ಬಿಟ್ಟರೆ ಮಿಕ್ಕವರು ಯಡಿಯೂರಪ್ಪ ಸಿಎಂ ಆದಾಗ ಲಾಭ ಪಡೆದವರೇ. ಡಿವಿಎಸ್ ಮತ್ತು ಬೊಮ್ಮಾಯಿ ಇಬ್ಬರೂ ಸಿಎಂ ಪಟ್ಟಕ್ಕೇರಿದ್ದವರು. ಶ್ರೀರಾಮುಲು, ಆರ್.ಅಶೋಕ್ ಡಿಸಿಎಂ ಆಗಿದ್ದವರು. ಇನ್ನು ಸಿಟಿ ರವಿ ಯಡಿಯೂರಪ್ಪ ವಿರುದ್ಧ ಕೆಂಡಕಾರಲು ಹೋಗಿ ಕೈಸುಟ್ಟುಕೊಂಡವರು. ಒಂದು ರೀತಿಯಲ್ಲಿ ಸುನಿಲ್ ಕುಮಾರ್ ಮಾತ್ರ ಬಿಜೆಪಿ ನಿಷ್ಠರು ಎನ್ನಬಹುದು.
ಸದ್ಯಕ್ಕೆ ಬಿಜೆಪಿಯಲ್ಲಿ ನಾನಾ.. ನೀನಾ.. ಅವರಾ.. ಎಂಬ ಹೋರಾಟ ನಡೆಯುತ್ತಲೇ ಇದೆ. ಇನ್ನೂ ವಿಚಿತ್ರ ಎಂದರೆ ಯತ್ನಾಳ್ ಬಣದಲ್ಲಿರುವ ನಾಯಕರಲ್ಲಿಯೂ ಯಡಿಯೂರಪ್ಪ ಅವರಿಂದ ಉಪಕೃತರಾದವರಿದ್ದಾರೆ. ಹಾಗೆ ನೋಡಿದರೆ ಯತ್ನಾಳ್ ಕೂಡಾ ಯಡಿಯೂರಪ್ಪ ಅವರಿಂದಲೇ ಬಿಜೆಪಿಗೆ ವಾಪಸ್ ಬಂದವರು. ರಮೇಶ್ ಜಾರಕಿಹೊಳಿ ಅವರನ್ನು ಕಾಪಾಡಿದವರು ಯಡಿಯೂರಪ್ಪ. ಯತ್ನಾಳ್ ಅವರಂತಹ ಕೆಲವರನ್ನು ಬಿಟ್ಟರೆ ಯತ್ನಾಳ್ ಟೀಂನ ಬಹುತೇಕರು ಯಡಿಯೂರಪ್ಪ ಅವರಿಗೆ ಎದುರು ಮಾತನಾಡುವುದಿಲ್ಲ. ಆದರೆ ಸಮಸ್ಯೆ ವಿಜಯೇಂದ್ರ ಅವರದ್ದೇ.



