ವಿಜಯೇಂದ್ರ ಅವರಿಗೆ ಯತ್ನಾಳ್ ಹಲವು ಬಾರಿ ಓಪನ್ ಚಾಲೆಂಜ್ ಹಾಕಿದ್ದಾರೆ. ಏಕವಚನದಲ್ಲೇ ಪಂಥಾಹ್ವಾನ ಕೊಟ್ಟಿದ್ದಾರೆ. ತೊಡೆ ತಟ್ಟಿದ್ದಾರೆ. ಯತ್ನಾಳ್ ಅವರ ಮಾತಿನ ಭರಕ್ಕೆ, ಬೈಗುಳಕ್ಕೆ ಹೋಲಿಸಿದರೆ ವಿಜಯೇಂದ್ರರದ್ದು ತಾಳ್ಮೆಯ ಮಾತು ಎನ್ನಬಹುದು. ಹಾಗಂತ ತಾಳ್ಮೆಯ ಪರಮಾವತಾರ ಎಂದೇನೂ ಅಲ್ಲ. ಆದರೆ ಇದೀಗ ಯತ್ನಾಳ್ ತವರಲ್ಲೇ ಶಾಕ್ ಕೊಟ್ಟಿರೋದು ಹೊಸ ಬೆಳವಣಿಗೆ.
ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಗುರುಲಿಂಗಪ್ಪ ಅಂಗಡಿ ಸಾರಥ್ಯ ವಹಿಸಿಕೊಂಡಿದ್ದಾರೆ. ಆ ಮೂಲಕ ರೆಬೆಲ್ ನಾಯಕ ಬಸನಗೌಡ ಪಾಟೀಲ ಯತ್ನಾಳ್‌ರ ಪ್ರಬಲ ವಿರೋಧದ ನಡುವೆಯೂ ಬಿ.ವೈ. ವಿಜಯೇಂದ್ರ ತನಗೆ ಬೇಕಾದವರನ್ನೇ ಜಿಲ್ಲಾಧ್ಯಕ್ಷರನ್ನಾಗಿಸಿ ಮುಂದಿನ ಹಾದಿ ಸುಗಮಗೊಳಿಸಿಕೊಂಡಿದ್ದಾರೆ. 8 ಜನ ಪ್ರಬಲ ಆಕಾಂಕ್ಷಿಗಳ ಪೈಕಿ ಗುರುಲಿಂಗಪ್ಪ ಅಂಗಡಿ ಅವರನ್ನು ಆಯ್ಕೆಗೊಳಿಸಿ, ಭಾನುವಾರ ಪಕ್ಷದ ಕಾರ್ಯಾಲಯದಲ್ಲಿ ಕೋರ್ ಕಮಿಟಿ ಸಭೆಯ ನಂತರ ಚುನಾವಣಾಧಿಕಾರಿ ಹಾಗೂ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿಶೇಷ ವೀಕ್ಷಕರಾಗಿದ್ದ ಅಶ್ವತ್ಥ ನಾರಾಯಣ ಘೋಷಣೆ ಮಾಡಿದ್ದಾರೆ. ತಕ್ಷಣವೇ ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ್ ಅವರು ನೂತನ ಜಿಲ್ಲಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.
ಯತ್ನಾಳ್ ಹಠ ಏನಿತ್ತು..?
ಈವರೆಗೆ ಅಧ್ಯಕ್ಷರಾಗಿದ್ದ ಆರ್.ಎಸ್. ಪಾಟೀಲ್‌ರನ್ನೇ ಮುಂದುವರಿಸಬೇಕು, ಇಲ್ಲದಿದ್ದರೆ ತಾವು ಹೇಳಿದವರನ್ನೇ ಜಿಲ್ಲಾಧ್ಯಕ್ಷರನ್ನಾಗಿಸಬೇಕೆಂದು ಬಸನಗೌಡ ಪಾಟೀಲ ಯತ್ನಾಳ ಪಟ್ಟು ಹಿಡಿದಿದ್ದರು. ಆದರೆ, ಗುರುಲಿಂಗಪ್ಪ ಅಂಗಡಿ ಆಯ್ಕೆಗೊಳಿಸಿ ವಿಜಯೇಂದ್ರ ತಮ್ಮ ಪ್ರಾಬಲ್ಯ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲ, ಆರ್ ಎಸ್ ಪಾಟೀಲ್ ಮರುಮಾತನಾಡದೆ ವಿಜಯೇಂದ್ರ ಆಯ್ಕೆಯನ್ನು ಒಪ್ಪಿಕೊಂಡಿರುವುದು. ಆದರೆ ವಿಜಯಪುರ ಜಿಲ್ಲಾ ಬಿಜೆಪಿ ಮೂಲಗಳ ಪ್ರಕಾರ ಆರ್ ಎಸ್ ಪಾಟೀಲ್ ವೇದಿಕೆಯಲ್ಲಿ ನಡೆದುಕೊಂಡ ರೀತಿಯೇ ಬೇರೆ. ಯತ್ನಾಳ್ ಜೊತೆ ಮಾತನಾಡಿದ ನಂತರ ಆಗುವುದೇ ಬೇರೆ ಎನ್ನುತ್ತಾರೆ.
ಯಾರು ಈ ಗುರುಲಿಂಗಪ್ಪ ಅಂಗಡಿ..?
ಗುರುಲಿಂಗಪ್ಪ ಅಂಗಡಿ ಲಿಂಗಾಯತ ಬಣಜಿಗ ಸಮಾಜದವರು. ಉದ್ಯಮಿ. ವಿಧಾನಸಭೆ ಚುನಾವಣೆಯಲ್ಲಿ 8 ಕ್ಷೇತ್ರಗಳ ಪೈಕಿ ಒಂದರಲ್ಲೂ ಬಣಜಿಗ ಸಮಾಜಕ್ಕೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಜಿಲ್ಲಾಧ್ಯಕ್ಷ ಸ್ಥಾನವನ್ನಾದರೂ ಆ ಸಮಾಜಕ್ಕೆ ಕೊಟ್ಟು ಸಾಮಾಜಿಕ ನ್ಯಾಯದ ಲೆಕ್ಕದಲ್ಲಿ ತಮ್ಮವರಿಗೆ ಜಿಲ್ಲಾ ಸಾರಥ್ಯ ಕೊಡಿಸಿ, ತಮ್ಮ ಮುಂದಿನ ರಾಜಕೀಯ ಹಾದಿಯನ್ನು ವಿಜಯೇಂದ್ರ ಹಾಗೂ ಅವರ ತಂಡ ಸುಗಮಗೊಳಿಸಿಕೊಂಡಿದೆ ಎಂಬ ವಿಶ್ಲೇಷಣೆ ನಡೆದಿದೆ. ಗುರುಲಿಂಗಪ್ಪ ಅಂಗಡಿ ಆಯ್ಕೆಯಲ್ಲಿ ಮಾಜಿ ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿಯವರೂ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
ಯತ್ನಾಳ್ ರಿಯಾಕ್ಷನ್ ಏನಿತ್ತು..?
ವಿಜಯಪುರದವರೇ ಆದ ಗುರುಲಿಂಗಪ್ಪ ಅಂಗಡಿ ಯಾರು ಎಂಬುದೇ ತಮಗೆ ಗೊತ್ತಿಲ್ಲ ಎಂದಿದ್ದಾರೆ ಯತ್ನಾಳ್. ಗುರುಲಿಂಗಪ್ಪ ಯತ್ನಾಳ್ ವಿರೋಧಿ ಬಣದ ನಾಯಕ. ಬಬಲೇಶ್ವರದ ಕಾಂಗ್ರೆಸ್ ನಾಯಕ ಸಚಿವ ಎಂ.ಬಿ. ಪಾಟೀಲ್ ಕ್ಷೇತ್ರದವರು. ಪಕ್ಷ ಸಂಘಟನೆ, ಯತ್ನಾಳ್‌ಗೆ ಟಾಂಗ್ ಕೊಡುವುದು ಸೇರಿದಂತೆ ಅನೇಕ ರಾಜಕೀಯ ಲೆಕ್ಕಾಚಾರದೊಂದಿಗೆ ಅಂಗಡಿಗೆ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಕೊಡಿಸಲಾಗಿದೆ ಎನ್ನಲಾಗುತ್ತಿದೆ. ಎಂಬಿ ಪಾಟೀಲರ ಜೊತೆ ಯತ್ನಾಳ್ ಹೊಂದಾಣಿಕೆ ರಾಜಕೀಯ ಮಾಡುತ್ತಾರೆ ಎಂಬ ವಾದಗಳ ಹಿನ್ನೆಲಯಲ್ಲಿ ಬಬಲೇಶ್ವರದ ನಾಯಕರಿಗೇ ಮಣೆ ಹಾಕಿದ್ದಾರೆ ವಿಜಯೇಂದ್ರ ಎನ್ನುವುದು ಇನ್ನೊಂದು ಲೆಕ್ಕ.
ಸಿದ್ದರಾಮಯ್ಯ ಏನ್ ಹೇಳಿದ್ರು..?
ವಿಧಾನಸಭೆಯಲ್ಲಿ ಕೂಡಾ ಯತ್ನಾಳ್ ಸಿಎಂ ಆಗಬೇಕು ಎನ್ನುವ ವಿಚಾರ ಪ್ರಸ್ತಾಪವಾಗಿದೆ. ಯತ್ನಾಳ್ ಅವರು ಕೇಂದ್ರ ಸರ್ಕಾರ ಇಷ್ಟು ಕೋಟಿ ಕೊಟ್ಟಿದೆ, ಅಷ್ಟು ಕೊಟ್ಟಿದೆ ಎಂದು ಸುಳ್ಳು ಹೇಳ್ತಾರೆ. , ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದರು ತಾವು, ಮುಂದೆ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಹೊಂದಿದ್ದೀರಿ. ನಿಮ್ಮಂತವರು ಸದನದಲ್ಲಿ ಸುಳ್ಳು ಹೇಳುತ್ತಿದ್ದೀರಲ್ಲಾ ಎಂದು ಪ್ರಶ್ನೆ ಮಾಡಿದಾಗ.. “ಯಾಕೆ, ಎರಡೆರಡು ಬಾರಿ ಮುಖ್ಯಮಂತ್ರಿಯಾದವರೇ ಮತ್ತೆ ಆಗಬೇಕಾ? ಸಾಮಾನ್ಯ ಜನರಾದ ನಾವು ಯಾಕೆ ಆಗಬಾರದು?” ಎಂದು ಯತ್ನಾಳ್ ಉತ್ತರ ಕೊಟ್ಟರು.
ಅಪ್ಪ ಮುಖ್ಯಮಂತ್ರಿ ಆದ ನಂತರ ಮಗನೇ ಆಗಬೇಕು ಎಂದೇನಿಲ್ಲ. ಇದು ಪ್ರಜಾಪ್ರಭುತ್ವ ಎಂದು ಸಿದ್ದು ಉತ್ತರ ಕೊಟ್ಟರೆ ಯತ್ನಾಳ್ ಅವರು ಸಿಕ್ಕಿದ್ದೇ ಚಾನ್ಸು ಎಂದು, “ಮುಂದಿನ ಬಾರಿ ಮತ್ತೆ ‘ಅಪ್ಪ-ಮಗ’ ಅಂತಾ ಹೇಳ್ತೀರಾ ನೋಡಿ” ಎಂದು ವಿಜಯೇಂದ್ರ ಹೆಸರು ಪ್ರಸ್ತಾಪಿಸಿ ಯತ್ನಾಳ್ ಹೇಳಿದರು. ಒಟ್ಟಾರೆ ಸದನದಲ್ಲಿ ಸಿದ್ದರಾಮಯ್ಯ ಮತ್ತು ಯತ್ನಾಳ್ ನಡುವೆ ಮುಖ್ಯಮಂತ್ರಿ ಸ್ಥಾನದ ಕುರಿತು ಮಾತಿನ ಜಟಾಪಟಿ ಜೋರಾಗಿತ್ತು.



