ಬಿಜೆಪಿ ಮೊದಲ ಆಪರೇಷನ್ ಮಾಡಿದೆ. ರಾಜ್ಯದಲ್ಲಿ ಸೋತಾಗಿನಿಂದ ಬಿಜೆಪಿಯಲ್ಲಿ ನಾವು ಹೋಗ್ತೇವೆ.. ನಾವೂ ಹೋಗ್ತೇವೆ.. ಎಂಬ ಮಾತುಗಳೇ ಹೆಚ್ಚಾಗಿತ್ತು. ಒಂದು ಹಂತದ ಬ್ರೇಕ್ ಬಿದ್ದಿದ್ದು ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ. ಒಂದು ಕಡೆ ಭಿನ್ನಮತೀಯರನ್ನು ಸಮಾಧಾನ ಪಡಿಸುತ್ತಲೇ, ಪಕ್ಷ ಬಿಟ್ಟು ಹೋದವರನ್ನು ಸೆಳೆಯುವ ಪ್ರಯತ್ನವನ್ನು ವಿಜಯೇಂದ್ರ ಮಾಡುತ್ತಿದ್ದಾರೆ. ಇದು ಶುರುವಾಗಿದ್ದು ಎಲ್ಲಿಂದ ಅನ್ನೋ ಪ್ರಶ್ನೆ ಸಹಜವಾಗಿಯೇ ಉದ್ಭವವಾಗಿದೆ. ಅಂದಹಾಗೆ ಈ ಟಾಸ್ಕ್ ಯಡಿಯೂರಪ್ಪ ಅವರದ್ದೂ ಅಲ್ಲ, ಕುಮಾರಸ್ವಾಮಿ ಅವರದ್ದೂ ಅಲ್ಲ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಹೈಕಮಾಂಡ್ ಮತ್ತು ವಿಜಯೇಂದ್ರ ಅವರದ್ದು. ಹಾಗಂತ ಯಡಿಯೂರಪ್ಪ ಪಾತ್ರ ಇಲ್ಲವೇ ಇಲ್ಲ ಎನ್ನುವಂತಿಲ್ಲ.
ಆದರೆ ಈ ವಿಷಯದಲ್ಲಿ ಕುಮಾರಸ್ವಾಮಿ ಅವರಿಗೆ ವಿನಾಕಾರಣ ಹೈಪ್ ನೀಡುವ ಪ್ರಯತ್ನ ನಡೆಯುತ್ತಿದೆ. ಜಗದೀಶ್ ಶೆಟ್ಟರ್ ಬಿಜೆಪಿಯನ್ನು ಮರು ಸೇರ್ಪಡೆ ಮಾಡುವ ಕಾರ್ಯಾಚರಣೆಗೆ ಕುಮಾರಸ್ವಾಮಿ ಸಾರಥ್ಯವನ್ನು ನೀಡಿ ಸೀಕ್ರೆಟ್ ಟಾಸ್ಕ್ ನೀಡಲಾಗಿತ್ತು ಎಂಬ ಮಾತು ಕೇಳಿಬರುತ್ತಿದೆ. ಆದ್ದರಿಂದ ಬಿಜೆಪಿ ಹೈ ಕಮಾಂಡ್ ಕೊಟ್ಟಿದ್ದ ಟಾಸ್ಕ್ ಅನ್ನು ಮಾಜಿ ಸಿಎಂ ಕುಮಾರಸ್ವಾಮಿ ಅವರು ಯಶಸ್ವಿಯಾಗಿ ಕಂಪ್ಲೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಾಗೇನೂ ಆಗಿಲ್ಲ. ಕುಮಾರಸ್ವಾಮಿ ಅವರು ಮಾತನಾಡಿದ್ಧಾರೆ ಎಂಬುದು ಬಿಟ್ಟರೆ, ಮಿಕ್ಕಂತೆ ನಡೆದ ಕಥೆಯೇ ಬೇರೆ.
ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಸಂದರ್ಭದಲ್ಲಿ ಕಾಂಗ್ರೆಸ್ಸಿನಲ್ಲಿದ್ದ ಜಗದೀಶ್ ಶೆಟ್ಟರ್ ಅಭಿನಂದನೆ ಸಲ್ಲಿಸಲು ಫೋನ್ ಮಾಡಿದ್ದರಂತೆ. ಆಗ ಶೆಟ್ಟರ್ ಅವರಿಗೆ ವಿಜಯೇಂದ್ರ ಆಹ್ವಾನ ಕೊಟ್ಟರಂತೆ. ಅದಾದ ಮೇಲೆ ಮುನೇನಕೊಪ್ಪ ಅವರು ವಿಜಯೇಂದ್ರ ಅವರನ್ನು ಅಭಿನಂದಿಸಲು ಮನೆಗೆ ಹೋದಾಗ ವಿಜಯೇಂದ್ರ, ಮುನೇನಕೊಪ್ಪ ಎದುರೇ ನೇರವಾಗಿ ಹೇಳಿ ಶೆಟ್ಟರ್ ಜೊತೆ ಮಾತನಾಡುವಂತೆ ತಿಳಿಸಿದ್ದಾರೆ. ಶೆಟ್ಟರ್ ಅವರಿಂದ ಮಾತುಕತೆಗೆ ಓಕೆ ಎಂಬ ಸಿಗ್ನಲ್ ಸಿಕ್ಕ ಕೂಡಲೇ ಎಂಟ್ರಿ ಕೊಟ್ಟಿರುವುದು ಯಡಿಯೂರಪ್ಪ. ಇಷ್ಟಕ್ಕೂ ಶೆಟ್ಟರ್ ಅವರಿಗೆ ಅಸಮಾಧಾನ ಇದ್ದದ್ದು ಯಡಿಯೂರಪ್ಪ ಜೊತೆಗೆ ಅಲ್ಲ. ಯಡಿಯೂರಪ್ಪ ವಿರೋಧಿ ಬಣದ ಕೈ ಮೇಲಾಗುತ್ತಿರುವುದರ ಬಗ್ಗೆ. ಆ ಅಸಮಾಧಾನ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡುತ್ತಿದ್ದಂತೆಯೇ ಶಮನವಾಗಿತ್ತು. ವಿಶೇಷವೆಂದರೆ ಬಿಜೆಪಿಯ ಉನ್ನತ ಪರಮೋನ್ನತ ನಾಯಕರಿಗೂ ಈ ಬಗ್ಗೆ ಗೊತ್ತಿರಲಿಲ್ಲ. ಹೈಕಮಾಂಡ್ʻನಲ್ಲಿ ರಾಷ್ಟೃೀಯ ಅಧ್ಯಕ್ಷ ಜೆಪಿ ನಡ್ಡಾ, ಅಮಿತ್ ಶಾ ಅವರು ಸೇರಿದಂತೆ ಕೆಲವೇ ಕೆಲವರಿಗೆ ಮಾತ್ರ ಶೆಟ್ಟರ್ ರೀ ಎಂಟ್ರಿ ಬಗ್ಗೆ ಮಾಹಿತಿ ಇತ್ತು. ವಿಜಯೇಂದ್ರ ಅವರ ಸುತ್ತಲೇ ಇರುವ ಅತ್ಯಾಪ್ತರಿಗೂ, ವಿಜಯೇಂದ್ರ ಅವರನ್ನು ಕಟ್ಟಿ ಹಾಕುವ ಪ್ರಯತ್ನದಲ್ಲಿರುವ ನಾಯಕರಿಗೂ, ಹುಬ್ಬಳ್ಳಿ ಧಾರವಾಡ ನಾಯಕರಿಗೂ ಮಾಹಿತಿ ಇರಲಿಲ್ಲ. ಅಂತಿಮವಾಗಿ ಹೈಕಮಾಂಡ್ ಕೊಟ್ಟಿರುವ ಭರವಸೆಯೊಂದಿಗೆ ಶೆಟ್ಟರ್ ವಾಪಸ್ ಆಗಿದ್ಧಾರೆ.
ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ ಎಂಬುದರ ಹೊರತಾಗಿ, ಬೇರೆಯೇನೂ ನಡೆದಿಲ್ಲ ಎನ್ನಲಾಗುತ್ತಿದೆ. ಇಷ್ಟಕ್ಕೂ ಕುಮಾರಸ್ವಾಮಿ ಅವರು ಬಿಜೆಪಿಯ ಮಿತ್ರಪಕ್ಷದ ರಾಜ್ಯಾಧ್ಯಕ್ಷರೇ ಹೊರತು, ಬಿಜೆಪಿಯ ಲೀಡರ್ ಅಲ್ಲ. ಇನ್ನು ಶೆಟ್ಟರ್, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರಲ್ಲಿ ಒಬ್ಬರು. ಹೀಗಾಗಿ ಈಗ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ, ತಮ್ಮನ್ನು ಬೆಳೆಸಿದ ನಾಯಕರಲ್ಲಿ ಒಬ್ಬರಾದ ಯಡಿಯೂರಪ್ಪ ಅವರ ಮಾತಿಗಿಂತ ಹೆಚ್ಚಿನ ಮನ್ನಣೆಯನ್ನು ಕುಮಾರಸ್ವಾಮಿಗೆ ಕೊಟ್ಟಿರುವ ಸಾಧ್ಯತೆ ಇಲ್ಲ.
ಬಿಜೆಪಿಯೊಳಗೆ ಏನು ನಡೆಯುತ್ತಿದೆ ಎಂಬ ಬಗ್ಗೆ ಬಿಜೆಪಿಯೊಳಗೇ ಒಂದು ಕಿವಿ ಇಟ್ಟುಕೊಂಡಿರುವ ಕಾಂಗ್ರೆಸ್ಸಿನ ಪ್ರಚಂಡ ನಾಯಕರಿಗೂ ಗೊತ್ತಿಲ್ಲದಂತೆ ಆಪರೇಷನ್ ಮಾಡುವಲ್ಲಿ ವಿಜಯೇಂದ್ರ ಗೆದ್ದಿದ್ದಾರೆ.



