ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ, ವಿಜಯೇಂದ್ರ ನಾಯಕತ್ವದ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಾ ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿರುವ ಯತ್ನಾಳ್ ಬಣಕ್ಕೆ ಶಾಕ್ ಎನ್ನಿಸುವಂತಹ ವರದಿ ಬಂದಿವೆ. ಯತ್ನಾಳ್ ಹೊಸ ಪಕ್ಷ ಕಟ್ಟುತ್ತಾರೆ ಎಂಬ ವದಂತಿಗಳಿಗೆ ಉತ್ತರ ನೀಡಿರುವ ಯತ್ನಾಳ್ ʻʻ ಆ ರೀತಿ ಎಲ್ಲಾ ನಾವು ವಿಚಾರ ಮಾಡಿಲ್ಲ. ನಾವು ಬಿಜೆಪಿಯನ್ನೇ ಶಕ್ತಿಶಾಲಿ ಮಾಡುತ್ತೇವೆ. ಬಿಜೆಪಿಯನ್ನು ಹಾಳು ಮಾಡುವ ಕೆಲಸ ಮಾಡುವುದಿಲ್ಲ. ಬಿಜೆಪಿಯನ್ನು ನಮ್ಮ ಜಾತಿ ಹೆಸರಿನಿಂದ ಬ್ಲಾಕ್‌ಮೇಲ್ ಮಾಡುವವರು ಅಲ್ಲ. ಬಿಜೆಪಿಯನ್ನು ಕಟ್ಟಬೇಕು. ಈ ಹೋರಾಟ ವ್ಯಕ್ತಿಯ ವಿರುದ್ಧ ಮಾತ್ರ ಅಲ್ಲ, ಕುಟುಂಬದ ವಿರುದ್ಧʼʼ ಎಂದಿದ್ದಾರೆ.
ಸಮೀಕ್ಷೆಯಲ್ಲಿ ವಿಜಯೇಂದ್ರಗೆ 89%
ಇದರ ನಡುವೆ ಅಮಿತ್ ಶಾ ಒಂದು ರಹಸ್ಯ ವರದಿ ತರಿಸಿದ್ದಾರೆ. ತಮ್ಮದೇ ಮೂಲ ಗಳಿಂದ ಸರ್ವೇ ರಿಪೋರ್ಟು ತರಿಸಿಕೊಳ್ಳಲು ನಿರ್ಧರಿಸಿದ್ದ ಅಮಿತ್ ಶಾ ಕರ್ನಾಟಕ ಬಿಜೆಪಿಯಲ್ಲಿ ಯಾರಿಗೆ ಪವರ್ ಹೆಚ್ಚು? ಯಾರು ಅಧ್ಯಕ್ಷರಾಗಿದ್ದರೆ ಪಕ್ಷ ಸಂಘಟನೆಗೆ ಅನುಕೂಲ? ಅಂತ ಅವರು ಸರ್ವೇ ಮಾಡಿಸಿದ್ದಾರೆ. 89 ಪರ್ಸೆಂಟು ಮಂದಿ ವಿಜಯೇಂದ್ರ ಅವರ ಪರವಾಗಿ ನಿಂತಿದ್ದರೆ, ಉಳಿದವರು ಯತ್ನಾಳ್ ಆಗಲಿ ಎಂಬ ವಾದಕ್ಕೆ ಪರವಾಗಿಯೇನೂ ಇಲ್ಲ. ಯತ್ನಾಳ್ ಪರ ವಾಲುತ್ತಿರುವವರ ಪ್ರಮಾಣ ಶೇ.5ನ್ನೂ ದಾಟಿಲ್ಲವಂತೆ.
ಅಷ್ಟೇ ಅಲ್ಲ, ಇವತ್ತಿನ ಸ್ಥಿತಿಯಲ್ಲಿ ವಿಜಯೇಂದ್ರ ಹೊರತು ಪಡಿಸಿ ಯಾರೇ ಅಧ್ಯಕ್ಷರಾದರೂ ಪಕ್ಷ ಸಂಘಟನೆ ಕಷ್ಟ. ಅದೇ ರೀತಿ ಯಡಿಯೂರಪ್ಪ ಬ್ಯಾಕ್ ಗ್ರೌಂಡು ಇರುವ ವಿಜಯೇಂದ್ರ ಅವರಂತೆ ಇಡೀ ರಾಜ್ಯದಲ್ಲಿ ‘ನೇಮು-ಫೇಮು’ ಇರುವ ಮತ್ತೊಬ್ಬ ನಾಯಕರಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವಾಗ ಸರ್ವೆ ರಿಪೋರ್ಟು ಹೀಗೆ ಹೇಳಿತೋ, ಅದರ ಪ್ರಕಾರವೇ ಮುಂದಿನ ಹೆಜ್ಜೆ ಇಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ಅಲ್ಲಿಗೆ ರಾಜ್ಯ ಬಿಜೆಪಿಯಲ್ಲಿ ‘ವಿಜಯೇಂದ್ರ ಯುಗ’ ಮುಂದುವರಿಯುವುದು ಖಚಿತವಾದಂತಾಗಿದೆ.
ಯತ್ನಾಳ್ ಬಣದ ಮನವೊಲಿಕೆ ಹೇಗೆ..?
ವಿಜಯೇಂದ್ರ ವಿರೋಧಿ ಪಡೆಯ ಯತ್ನಾಳ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಮತ್ತಿತರರಿಗೆ ತುಪ್ಪು ಸುರಿದವರಲ್ಲಿ ಹೈಕಮಾಂಡಿನವರೂ ಇದ್ದಾರೆ. ಇಲ್ಲದೇ ಇದ್ದರೆ ಇಷ್ಟು ಸುದೀರ್ಘ ಕಾಲ ಬಾಯಿಗೆ ಬಂದಂತೆ ಮಾತನಾಡಿಯೂ ಸೈಲೆಂಟ್ ಆಗಿರಲು ಸಾಧ್ಯವಿರಲಿಲ್ಲ. ಹೀಗಾಗಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆಯಲ್ಲಿ ಪ್ರಮುಖವಾಗಿರುವ ನಾಯಕರೊಬ್ಬರಿಗೆ ಸಂಧಾನದ ಹೊಣೆ ಹೊರಿಸಲಾಗಿದೆ. ಅವರಿಗೆ ಅಮಿತ ಶಾ ಅವರು ತಮ್ಮ ಸಮೀಕ್ಷೆಯ ರಿಪೋರ್ಟ್ ಕೊಟ್ಟಿದ್ದು, . “ಇವತ್ತಿನ ಪರಿಸ್ಥಿತಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಬದಲಿಸಲು ಸಾಧ್ಯವಿಲ್ಲ. ಹೀಗಾಗಿ ಅವರ ಪದಚ್ಯುತಿಗಾಗಿ ಹೋರಾಡುತ್ತಿರುವವರು ಪಕ್ಷದ ಹಿತದೃಷ್ಟಿ ಯಿಂದ ಹೊಂದಿಕೊಂಡು ಹೋಗಬೇಕು ಮತ್ತು ಹೀಗೆ ಹೊಂದಿಕೊಂಡು ಹೋಗುವಂತೆ ನೀವು ಅವರ ಮನವೊಲಿಸಬೇಕು” ಎಂದು ತಿಳಿಸಲು ಉದ್ದೇಶಿಸಿದ್ಧಾರೆ.
ಸಂದೇಶದ ಬೆನ್ನಲ್ಲೇ ವಿಜಯೇಂದ್ರ ವಿರೋಧಿ ಪಡೆಯ ಯತ್ನಾಳ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಮತ್ತಿತರರ ಜತೆ ಸಭೆ ನಡೆಸಿದ ಆರೆಸ್ಸೆಸ್‌ನ ಪ್ರಮುಖರು “ಇವತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಲು ವರಿಷ್ಠರು ಒಲವು ತೋರಿಸುತ್ತಿಲ್ಲ. ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಹೊಂದಿಕೊಂಡು ಹೋಗಬೇಕು. ಹಾಗಂತ ನಿಮ್ಮ ಶಕ್ತಿ ಕುಗ್ಗಿಸುವುದು ವರಿಷ್ಠರ ಉದ್ದೇಶವಲ್ಲ. ಹೀಗಾಗಿ ಯತ್ನಾಳ್ ಅವರು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಬೇಕು, ಅರವಿಂದ ಲಿಂಬಾವಳಿಯವರು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಬೇಕು ಎಂಬುದು ವರಿಷ್ಠರ ಬಯಕೆ” ಎಂದಿದ್ದಾರೆ.
ಯತ್ನಾಳ್ ಅವರೇನೂ ಇದನ್ನು ಒಪ್ಪಿಲ್ಲ. ಯತ್ನಾಳ್ ಆಂಡ್ ಗ್ಯಾಂಗು ಪ್ರತಿಕ್ರಿಯಿಸಿ, “ಈ ಕುರಿತು ಎಲ್ಲರ ಜತೆ ಮಾತನಾಡುತ್ತೇವೆ ಸರ್” ಅಂತ ಹೇಳಿ ಮೇಲೆದ್ದು ಬಂದಿದೆ.



