ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರೀಗ ಒಂದು ಪಕ್ಷದ ನಾಯಕರಾಗಿ ಉಳಿದಿಲ್ಲ. ವಯಸ್ಸು ಮಾಗಿದಂತೆ ಅವರನ್ನು ಪ್ರೀತಿಸುವ, ಗೌರವಿಸುವವರ ಸಂಖ್ಯೆ ಹೆಚ್ಚುತ್ತಿದೆ. ರಾಜಕೀಯದಲ್ಲಿ ಅದು ಸಹಜವೂ ಹೌದು. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ದೇವೇಗೌಡರ ಮನೆಗೆ ಭೇಟಿ ನೀಡಿ.. ಆಶೀರ್ವಾದ ಪಡೆದುಕೊಂಡಿದ್ದಾರೆ. ಇಷ್ಟಕ್ಕೂ ಅದರಲ್ಲೇನು ವಿಶೇಷ ಇದೆ.. ಬಿಜೆಪಿ ಹಾಗೂ ಜೆಡಿಎಸ್ ಎರಡೂ ಮಿತ್ರ ಪಕ್ಷಗಳು. ಮೋದಿ ಸರ್ಕಾರದಲ್ಲಿ ಕುಮಾರಸ್ವಾಮಿ ಸಚಿವರಾಗಿದ್ದಾರೆ. ದೇವೇಗೌಡರಿಗೆ ಮೋದಿ ಗೌರವ ಕೊಡುವುದು ಹೊಸದೇನೂ ಅಲ್ಲ. ಎದುರಾಳಿ ಪಕ್ಷದಲ್ಲಿದ್ದಾಗಲೂ ದೇವೇಗೌಡರನ್ನು ಮೋದಿ ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಇದರಲ್ಲೇನು ಸ್ಪೆಷಲ್ಲು ಅಂತೀರಾ..
ರಾಜಕೀಯದಲ್ಲಿ ಯಾವುದೂ ಸಹಜವಲ್ಲ. ಕಣ್ಣಿಗೆ ಕಾಣುವ ಘಟನೆಯ ಹಿಂದೆ ಕಣ್ಣಿಗೆ ಕಾಣದ ಯಾವುದೋ ಉದ್ದೇಶ, ತಂತ್ರಗಾರಿಕೆ ಇದ್ದೇ ಇರುತ್ತದೆ ಎನ್ನುತ್ತಾರೆ ರಾಜಕೀಯ ಪಂಡಿತರು. ಅದರಲ್ಲಿಯೂ ವಿಜಯೇಂದ್ರ ಮತ್ತು ದೇವೇಗೌಡರು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದಾರೆ.
ಈಗ ವಿಜಯೇಂದ್ರ ಕೊಟ್ಟಿರುವ ಕಾರಣ ಇಷ್ಟೇ.. ಪ್ರಧಾನಿ ಮೋದಿ ಅವರ ರಾಜತಾಂತ್ರಿಕ ನೈಪುಣ್ಯತೆ ಮೆಚ್ಚಿ ದೊಡ್ಡಗೌಡರು ಬರೆದಿದ್ದ ಪತ್ರ. ಗೌಡರ ಮನೆಗೆ ಭೇಟಿ ನೀಡಿದ್ದು ಒಬ್ಬರೇ ಅಲ್ಲ.. ವಿಜಯೇಂದ್ರ ಜೊತೆ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ, ಶಾಸಕ ಎಂ.ಕೃಷ್ಣಪ್ಪ, ಸುರೇಶ್ ಗೌಡ, ಸಿ.ಕೆ.ರಾಮಮೂರ್ತಿ, ಮಾಜಿ ಶಾಸಕ ನಂದೀಶ್ ರೆಡ್ಡಿ ಸೇರಿದಂತೆ ಕೆಲ ನಾಯಕರು ಜೊತೆಗಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಹಿರಿಯ ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇವೆ. ಪ್ರಧಾನಿ ಮೋದಿ ಅವರು ಶಾಂಘೈ ಶೃಂಗಸಭೆಯಲ್ಲಿ ಪಾಲ್ಗೊಂಡ ಬಗ್ಗೆ ದೇವೇಗೌಡರು ಪತ್ರ ಬರೆದು ಅಭಿನಂದನೆ ತಿಳಿಸಿದ್ದರು. ಮೋದಿ ಅವರ ದಿಟ್ಟ ಹೆಜ್ಜೆಯನ್ನು ಶ್ಲಾಘಿಸಿದ್ದರು. ಇಂತಹ ಇಳಿಯ ವಯಸ್ಸಿನಲ್ಲೂ ದೇಶದ ಬಗ್ಗೆ ಅವರ ಕಾಳಜಿ, ಪ್ರಧಾನಿ ಮೇಲೆ ಇರಿಸಿರುವ ವಿಶ್ವಾಸ ನಮ್ಮೆಲ್ಲರಿಗೂ ಮಾದರಿ. ಹೀಗಾಗಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇವೆ. ಸುಮಾರು ಅರ್ಧ ತಾಸು ಅವರು ದೇಶದ ರಾಜಕೀಯದ ಬಗ್ಗೆ ಮಾತನಾಡಿದರು. ತಾವು ಪ್ರಧಾನಿ ಆಗಿದ್ದಾಗ ನಡೆದ ಘಟನೆಗಳನ್ನು ಮೆಲುಕು ಹಾಕಿದರು ಎಂದರು.
ದೇವೇಗೌಡ ನಮ್ಮ ಹೆಮ್ಮೆಯ ನಾಯಕ :ನಮ್ಮ ಹೆಮ್ಮೆಯ ನಾಯಕರೂ ಆದ ಮುತ್ಸದ್ದಿ ದೇವೇಗೌಡರು ಹಲವು ಸಂದರ್ಭಗಳಲ್ಲಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಬೆಂಬಲಿಸಿದ್ದಾರೆ. ದೇವೇಗೌಡರ ಕಾರ್ಯ ಶೈಲಿಗೆ ಅಭಿನಂದನೆ ತಿಳಿಸಿದ್ದೇವೆ. ನಾವು ನಮ್ಮ ಪಕ್ಷ ಬಲಪಡಿಸಲು, ಅವರು ಅವರ ಪಕ್ಷ ಬಲಪಡಿಸಲು ಕಾರ್ಯತಂತ್ರ ಮಾಡುತ್ತಿದ್ದಾರೆ. ನಮ್ಮ ನಡುವೆ ಉತ್ತಮ ಮೈತ್ರಿಯಿದೆ. ಸಮನ್ವಯತೆಯೂ ಚೆನ್ನಾಗಿದೆ. ಒಂದೇ ಉದ್ದೇಶಕ್ಕೆ ನಮ್ಮಿಬ್ಬರ ಹೋರಾಟ ಇರಲಿದೆ ಎಂದವರು ಡಾ.ಸಿ.ಎನ್.ಅಶ್ವತ್ಥನಾರಾಯಣ.
ಟ್ರಂಪ್ ತೆರಿಗೆ ನೀತಿ ವಿಚಾರದಲ್ಲಿ ಬಿಕ್ಕಟ್ಟು ಎದುರಾದಾಗ ಮೋದಿ ಅವರು ಹಲವು ದೇಶಗಳ ಜತೆ ವ್ಯಾಪಾರ ವಹಿವಾಟು ಒಪ್ಪಂದ ಮಾಡಿಕೊಂಡು ದೇಶದ ಹಿತ ಕಾಪಾಡುವ ಕ್ರಮ ಕೈಗೊಂಡಿದ್ದರು. 48 ಗಂಟೆಗಳಲ್ಲೇ ತಮ್ಮ ನಾಯಕತ್ವದ ಸಾಮರ್ಥ್ಯ ಪ್ರದರ್ಶಿಸಿದ್ದರು. ಇದನ್ನು ಬೆಂಬಲಿಸಿ ದೇವೇಗೌಡರು ಪತ್ರ ಬರೆದಿದ್ದರು ಎಂದರು.



