ಧರ್ಮಸ್ಥಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಬುದ್ಧತೆ ಮೆರೆದಿದ್ದು, ಮುತ್ಸದ್ಧಿಯಂತೆ ಹೆಜ್ಜೆ ಹಾಕಿರುವುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ರೀತಿಯ ಪ್ರಬುದ್ಧತೆ, ಮುತ್ಸದ್ಧಿತನದ ಹಿಂದೆ ಯಡಿಯೂರಪ್ಪ ಅವರ ಮಾರ್ಗದರ್ಶನ ಕೆಲಸ ಮಾಡಿದೆ ಎನ್ನುವವರಿಗೇನೂ ಕಡಿಮೆ ಇಲ್ಲ. ಇದ್ದರೆ.. ಅದನ್ನು ತಳ್ಳಿಹಾಕುವ ಹಾಗೂ ಇಲ್ಲ. ರಾಜ್ಯದ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ಸಿನ ಬಹುತೇಕ ನಾಯಕರು ಇದು ʻಬಿಜೆಪಿಯವರಿದ ಸಾಮರಸ್ಯಕ್ಕೆ ಬೆಂಕಿ ಹಚ್ಚುವ ಪ್ರಯತ್ನʼ ಎಂದು ಟೀಕೆ ಮಾಡುತ್ತಿದ್ದರೂ.. ಅದಕ್ಕೆ ಅವಕಾಶವನ್ನೇ ಕೊಡದೆ ಹೋರಾಟ ಮಾಡಿದ್ದಾರೆ ವಿಜಯೇಂದ್ರ.
ಧರ್ಮಸ್ಥಳದಲ್ಲಿಂದು ನಡೆದ “ನಮ್ಮ ನಡಿಗೆ ಧರ್ಮದೆಡೆಗೆ, ಧರ್ಮಸ್ಥಳ ಚಲೋ” ಗೆ ಕರೆ ನೀಡಿದ್ದ ಕಾರ್ಯಕ್ರಮ ಅಕ್ಷರಶಃ ಸಮರ ಭೂಮಿ ನೆನಪಿಸಿದೆ ಎಂಬುದೇನೋ ನಿಜ. ಆದರೆ.. ಇಡೀ ಧರ್ಮಯದ್ಧ ಸಮಾವೇಶದಲ್ಲಿ ಎದ್ದು ಕಂಡಿದ್ದು ವಿಜಯೇಂದ್ರ ಅವರ ತಾಳ್ಮೆ. ಮುತ್ಸದ್ಧಿತನದ ಮಾತು ಮತ್ತು ಎಚ್ಚರಿಕೆಯ ರಾಜಕೀಯ ಹೆಜ್ಜೆ. ಇದು ಮುತ್ಸದ್ಧಿತನ ಎನ್ನುವುದಕ್ಕೆ ಕಾರಣಗಳೂ ಇವೆ.
ವಿಜಯೇಂದ್ರ ಪ್ರಬುದ್ಧತೆ ನಂ.1 : ಬಿಜೆಪಿ ಬಾವುಟ ಆಚೆ ಇಟ್ಟಿದ್ದು
ಇಡೀ ಯಾತ್ರೆಯಲ್ಲಿ ವಿಜಯೇಂದ್ರ ಎಲ್ಲಿಯೂ ಇದು ಬಿಜೆಪಿ ಯಾತ್ರೆ ಎಂದು ಹೇಳಲಿಲ್ಲ. ಪಕ್ಷದ ನಾಯಕರೂ ಹಾಗೆಯೇ ಹೇಳುವಂತೆ ನೋಡಿಕೊಂಡ ವಿಜಯೇಂದ್ರ, ಇದು ಭಕ್ತರ ನಡಿಗೆ. ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂಬ ಸಂದೇಶ ಎಂದರು. ಇಡೀ ಯಾತ್ರೆಯಲ್ಲಿ, ವೇದಿಕೆಯಲ್ಲಿ, ನಡಿಗೆಯಲ್ಲಿ ಎಲ್ಲಿಯೂ ಬಿಜೆಪಿ ಬಾವುಟ ಇರಲಿಲ್ಲ. ಅಷ್ಟೇ ಅಲ್ಲ, ಬಿಜೆಪಿಯ ಘೋಷಣೆಯೂ ಇರಲಿಲ್ಲ. ಕೇವಲ ಭಗವಾ ಧ್ವಜ ಹಾಗೂ ಹಿಂದುತ್ವದ ಮಾತುಗಳಿದ್ದವು.
ವಿಜಯೇಂದ್ರ ಪ್ರಬುದ್ಧತೆ ನಂ.2 : ಟೀಕೆಯಲ್ಲೂ ಪ್ರಬುದ್ಧತೆ
ಸಿದ್ಧರಾಮಯ್ಯ ಸೇರಿದಂತೆ ಸರ್ಕಾರದ ಬಹುತೇಕರನ್ನು ಟೀಕೆ ಮಾಡಿದರಾದರೂ.. ಎಲ್ಲಿಯೂ ನಾಲಗೆ ಮಿತಿ ಮೀರದಂತೆ ನೋಡಿಕೊಂಡರು. ಎಷ್ಟೋ ಬಾರಿ ಯಶಸ್ವಿ ಹೋರಾಟಗಳು ಕೊನೆಗೆ ಯಾವುದೋ ಒಂದು ಎಡವಟ್ಟಿನ ಮಾತಿನಿಂದ ಹೋರಾಟದ ಮೂಲ ಉದ್ದೇಶವೇ ಮರೆಯಾಗುತ್ತದೆ. ಉದಾಹರಣೆಗೆ… ವಕ್ಫ್ ವಿರೋಧಿ ಹೋರಾಟದಲ್ಲಿ ಯತ್ನಾಳ್ ಹೋರಾಟ ಮಾಡಿದರೇನೋ ಹೌದು, ಆದರೆ, ವಿಜಯೇಂದ್ರ ವಿರುದ್ಧ ಆಡಿದ ಕೆಳದರ್ಜೆಯ ಮಾತುಗಳಲ್ಲಿ ಅವರ ಹೋರಾಟವೇ ಕೊಚ್ಚಿ ಹೋಯ್ತು. ಆ ರೀತಿ ಆಗದಂತೆ ನೋಡಿಕೊಂಡಿದ್ದು ವಿಜಯೇಂದ್ರ.
ವಿಜಯೇಂದ್ರ ಪ್ರಬುದ್ಧತೆ ನಂ.3 : ಪಕ್ಷದಲ್ಲಿ ಒಗ್ಗಟ್ಟಿದೆ ಎಂಬ ಸಂದೇಶ
ಇನ್ನು ಹೋರಾಟ ಶುರುವಾಗ್ತಿದ್ದಂತೆ ಅವರು ಒಪ್ಪಿಲ್ಲವಂತೆ. ಇವರು ವಿರೋಧಿಸಿದ್ರಂತೆ ಎಂಬ ಮಾತುಗಳ ನಡುವೆಯೇ, ಆರ್. ಅಶೋಕ್, ಚಲವಾದಿ ನಾರಾಯಣ ಸ್ವಾಮಿ, ಸಿಟಿ ರವಿ, ಸುನಿಲ್ ಕುಮಾರ್.. ಅವರಂತಹವರೂ ಜೊತೆಗೆ ಸಾಗುವಂತೆ ನೋಡಿಕೊಂಡರು. ಆ ಮೂಲಕ ವಿಜಯೇಂದ್ರ ಒಂದು ಸಂದೇಶವನ್ನಂತೂ ರವಾನಿಸಿದರು.
ವಿಜಯೇಂದ್ರ ಪ್ರಬುದ್ಧತೆ ನಂ.4 :
ವಿಜಯೇಂದ್ರ ಎಲ್ಲಿಯೂ ಎಸ್‌ಐಟಿ ಮಾಡಿದ್ದು ತಪ್ಪು ಎಂದು ಹೇಳಲಿಲ್ಲ. ಬದಲಿಗೆ ಷಡ್ಯಂತ್ರದ ಹಿಂದಿನ ಮುಖವಾಡ ಬಯಲು ಮಾಡಿ ಎಂದು ಅಗ್ರಹಿಸಿ, ಒತ್ತಡ ಹೇರುವಲ್ಲಿ ಯಶಸ್ವಿಯಾದರು.
ವಿಜಯೇಂದ್ರ ಪ್ರಬುದ್ಧತೆ ನಂ.5 :
ಜಸ್ಟಿಸ್ ಫಾರ್ ಸೌಜನ್ಯ ಹೋರಾಟಕ್ಕೂ ಬೆಂಬಲ ಸೂಚಿಸಿದ ವಿಜಯೇಂದ್ರ, ಕುಸುಮಾವತಿ ಅವರ ಮನೆಗೆ ಭೇಟಿ ನೀಡಿ, ಮೇಲ್ಮನವಿ ಸಲ್ಲಿಸಿದರೆ ಕಾನೂನು ವೆಚ್ಚವನ್ನು ತಾವೇ ಭರಿಸುವ ಭರವಸೆಯನ್ನೂ ಕೊಟ್ಟರು. ಕುಸುಮಾವತಿ ಅವರ ಕುಟುಂಬದವರ ಅಧಿಕೃತ ಒಪ್ಪಿಗೆ ಇಲ್ಲದೆ ಕಾನೂನು ಹೋರಾಟವನ್ನು ಮತ್ತೆ ಆರಂಭಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ವಿಜಯೇಂದ್ರ ದಿಟ್ಟ ಹೆಜ್ಜೆಯನ್ನೇ ಇಟ್ಟರು ಎನ್ನುವುದರಲ್ಲಿ ಅನುಮಾನವಿಲ್ಲ.
ಒಂದು ಕಡೆ ಧರ್ಮದ ಪರವಾಗಿ ನಿಲ್ಲುತ್ತೇವೆ ಎಂದು ಬಿಜೆಪಿ ಸಾರಿದೆ. ನಮ್ಮ ಹೋರಾಟ, ಹಿಂದೂಗಳ ಭಾವನೆಗೆ ಧಕ್ಕೆ ತರಬಾರದು, ವಿನಾಕಾರಣ, ದೇವಾಲಯಗಳನ್ನು ಟಾರ್ಗೆಟ್ ಮಾಡಬಾರದು ಎಂದು ಹೇಳುವ ಮೂಲಕ, ಸೌಜನ್ಯ ಮತ್ತು ಧರ್ಮಸ್ಥಳ ವಿವಾದಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ಇಟ್ಟಿರುವ ಹೆಜ್ಜೆ ಸಿದ್ಧರಾಮಯ್ಯ ಅವರನ್ನೂ ಅಚ್ಚರಿಗೆ ದೂಡಿದೆಯಂತೆ.



