ಅತ್ತ ಬಸನಗೌಡ ಪಾಟೀಲ ಯತ್ನಾಳ್ ತಗ್ಗುತ್ತಿಲ್ಲ. ಏಕೆಂದರೆ ಆಡಿದ ಮಾತುಗಳೇ ಶಾಪವಾಗಿ ಕಾಡುತ್ತಿವೆ. ಇತ್ತ ವಿಜಯೇಂದ್ರ ಬಗ್ಗುತ್ತಿಲ್ಲ. ವಿಜಯೇಂದ್ರ ಜೊತೆ ದೊಡ್ಡ ಸಮುದಾಯ ಇದೆ. ಕಾರ್ಯಕರ್ತರಿದ್ದಾರೆ. ಕಂಟ್ರೋಲಿಗೆ ತೆಗೆದುಕೊಳ್ಳುವ ಹುಮ್ಮಸ್ಸಿನಲ್ಲಿ ಮುನ್ನುಗ್ಗಿದ್ದ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಈಗ ಇಂಗು ತಿಂದ ಮಂಗನಂತಾಗಿರುವುದೇ ಸದ್ಯದ ಮಟ್ಟಿಗೆ ಹೊಸ ಬೆಳವಣಿಗೆ. ಯತ್ನಾಳ್ ಬಣದ ಮೂಲಕ ವಿಜಯೇಂದ್ರರನ್ನು ಬಗ್ಗಿಸಬಹುದು ಎಂದು ಹೊರಟಿದ್ದ ನಾಯಕರಿಗೆ ಅದೇ ತಿರುಗುಬಾಣವಾಗಿ ಕಾಡುವುದಕ್ಕೆ ಶುರುವಾಗಿದೆ.
ಯತ್ನಾಳ್ ಬಣದ ಮೀಟಿಂಗ್ ಯಾವಾಗ..?
ಬಹಿರಂಗ ಹೇಳಿಕೆ ನೀಡುತ್ತಿದ್ದ ಕಾರಣಕ್ಕೆ ರಾಜ್ಯ ಬಿಜೆಪಿ ಭಿನ್ನರ ಪಡೆ ನಾಯಕ ಯತ್ನಾಳ್‌ಗೆ ನೋಟಿಸ್ ನೀಡಲಾಗಿತ್ತು. 3 ದಿನದೊಳಗೆ ಉತ್ತರ ನೀಡಬೇಕು ಎಂದು ಗಡುವು ನೀಡಿತ್ತು. ಆದರೆ ಯತ್ನಾಳ್ ಯಾವುದೇ ಉತ್ತರ ಕೊಟ್ಟಿರಲಿಲ್ಲ. ಅಲ್ಲದೆ ಉತ್ತರ ಕೊಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆ ಬಳಿಕ ಭಿನ್ನರ ಪಡೆಯ ಚಟುವಟಿಕೆ ಸ್ತಬ್ಧವಾಗಿತ್ತು.ಈ ನಡುವೆ, ಫೆ.20ರೊಳಗೆ ರಾಜ್ಯ ಬಿಜೆಪಿ ಅಧ್ಯಕ್ಷರ ಪ್ರಶ್ನೆಗೆ ಉತ್ತರ ಸಿಗಲಿದೆ ಎಂದು ವಿಜಯೇಂದ್ರ ಹೇಳಿದ್ದರು. ಆ ಹೇಳಿಕೆ ಹೊರಬಿದ್ದ ಮರುದಿನವೇ ಅಲರ್ಟ್ ಆದ ಭಿನ್ನರು. ಫೆ.20ರಂದೇ ಸಭೆ ಸೇರಲು ನಾಯಕರ ತೀರ್ಮಾನ ಮಾಡಿದ್ದಾರೆ. ಗುರುವಾರ ನಡೆಯುವ ಸಭೆಯಲ್ಲಿ ಯಾವೆಲ್ಲಾ ವಿಷಯವನ್ನು ಚರ್ಚೆ ಮಾಡುತ್ತಾರೆ ಎಂಬುದು ಸದ್ಯದ ಕುತೂಹಲ.
ಈ ತಿಂಗಳ 20ರೊಳಗೆ ರಾಜ್ಯಾಧ್ಯಕ್ಷ ಕುರಿತ ಪ್ರಶ್ನೆಗೆ ಉತ್ತರ ಸಿಗಲಿದೆ ಎಂದು ವಿಜಯೇಂದ್ರ ಅವರು ಹೇಳಿಕೆ ನೀಡಿದ ಮರುದಿನವೇ ಅಲರ್ಟ್ ಆದ ಯತ್ನಾಳ್ ಬಣದ ಮುಖಂಡರು ಸಭೆ ನಡೆಸುವ ತೀರ್ಮಾನ ಕೈಗೊಂಡಿರುವುದು ಕುತೂಹಲ ಮೂಡಿಸಿದೆ. ಹಿಂದೆ ಸಭೆ ಸೇರಿದಾಗ ವಕ್ಫ್ ಆಸ್ತಿ ವಿವಾದ ಕುರಿತು ಚರ್ಚೆ ನಡೆಯುತ್ತಿತ್ತು. ಆ ನೆಪ ಹೇಳಲಾಗಿತ್ತು. ಈಗ ವಕ್ಫ್ ವಿವಾದ ಸದ್ಯಕ್ಕೆ ಮುಗಿದಿದೆ. ರಾಜ್ಯಾಧ್ಯಕ್ಷ ಹುದ್ದೆಗೆ ತಮ್ಮ ಬಣದಿಂದ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ತಿರ್ಮಾನ ಹೊರಬಿದ್ದಿಲ್ಲ. ಚುನಾವಣೆ ನಡೆಯುವುದೇ ಆದಲ್ಲಿ ಅಭ್ಯರ್ಥಿ ಆಯ್ಕೆ ಮಾಡುವ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಒಂದೆಡೆ ಬಂಡಾಯ ಶಾಸಕ ಬಸನಗೌಡ ಪಾಟೀಲಗೆ ಶೋಕಾಸ್ ನೋಟಿಸ್ ನೀಡಿದ ಬಳಿಕ ಅವರ ಬಣ ಮೌನಕ್ಕೆ ಶರಣಾಗಿದೆ. ಮತ್ತೊಂದೆಡೆ ಫೆಬ್ರವರಿ 20ರಂದು ಎಲ್ಲವೂ ಸರಿಯಾಗಲಿದೆ ಎಂದು ರಾಜ್ಯಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಹಾಗಾದರೆ ಯತ್ನಾಳ್ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳುತ್ತಾ? ಮುಂದಿನ ನಡೆ ಏನಿರಬಹುದು ಎಂಬುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.
ವಿಚಿತ್ರ ಎಂದರೆ ಈ ಬಾರಿ ಯತ್ನಾಳ್ ಬಣದಲ್ಲಿ ಸ್ವಲ್ಪ ಮಟ್ಟಿಗೆ ಬಿರುಕು ಮೂಡಿದೆ. ಯತ್ನಾಳ್ ಬಣದಲ್ಲಿದ್ದ ನಾಯಕರು ಈಗ ಒಂದು ಹೆಜ್ಜೆ ಹಿಂದೆ ಸರಿಯುವ ಸುಳಿವು ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಏಕೆಂದರೆ ಯತ್ನಾಳ್ ಬಣದಲ್ಲಿರುವ ಕೆಲವು ನಾಯಕರಿಗೆ ಬಿಜೆಪಿ ಬಿಟ್ಟರೆ ಬೇರೆ ಆಯ್ಕೆಗಳಿಲ್ಲ. ಜೆಡಿಎಸ್ ಮಿತ್ರಪಕ್ಷವಾಗಿರೋದ್ರಿಂದ ಹೋಗೋಕೆ ಸಾಧ್ಯವಾಗ್ತಿಲ್ಲ. ಇಷ್ಟು ದಿನ ವಿಜಯೇಂದ್ರ ವಿರುದ್ಧ ಹೋರಾಟದಲ್ಲಿ ಅಡ್ಜಸ್ಟ್ ಮೆಂಟ್ ಮಾಡಿಕೊಳ್ತಾರೆ ಎಂದು ಓಪನ್ ಆಗಿ ಹೇಳಿದ್ದವರಿಗೆ, ಈಗ ಕಾಂಗ್ರೆಸ್ಸಿಗೆ ಹೋದರೆ ತಾವೇ ಅಡ್ಜಸ್ಟ್ ಮೆಂಟ್ ಎಂದು ಬಿಂಬಿಸಿಕೊಂಡಂತಾಗುತ್ತದೆ. ಅದು ಅವಮಾನ ಎನ್ನುವ ಭಯವೂ ಇದೆ. ಒಟ್ಟಿನಲ್ಲಿ ಆಡಿದ ಮಾತುಗಳೇ ಯತ್ನಾಳ್ ಬಣದಲ್ಲಿರೋವ್ರಿಗೆ ಶತ್ರುವಾಗಿ ಕಾಡುತ್ತಿವೆ.



