ಕರ್ನಾಟಕ ಬಿಜೆಪಿಯು ಎಲ್ಲಾ 39 (ಬಿಜೆಪಿಯ ಸಂಘಟನಾತ್ಮಕ ಜಿಲ್ಲೆಗಳು) ಜಿಲ್ಲೆಗಳಿಗೆ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸಿ, ಘೋಷಣೆಯನ್ನೂ ಮಾಡಿಯಾಗಿದೆ. ಈ ಪೈಕಿ 34 ಅಧ್ಯಕ್ಷರು ವಿಜಯೇಂದ್ರ ಅವರ ಪರವಾಗಿದ್ದಾರೆ. ಕರ್ನಾಟಕ ಬಿಜೆಪಿ ಘಟಕಕ್ಕೆ ಯಡಿಯೂರಪ್ಪನವರ ಪುತ್ರ ಬಿವೈ ವಿಜಯೇಂದ್ರ ಅವರ ಹೆಸರೇ ಅಂತಿಮ ಎಂದು ಹೇಳಲಾಗುತ್ತಿದೆ. ಆದರೆ ವಾಸ್ತವ ಪರಿಸ್ಥಿತಿ ಹಾಗಿಲ್ಲ. ಮತ್ತೆ ಮತ್ತೆ ಸಭೆ ಸೇರುತ್ತಿರುವ ರೆಬಲ್ಸ್ ಟೀಂ ಬಿಜೆಪಿ ಹೈಕಮಾಂಡ್ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸುತ್ತಿದೆ.
ರೆಬಲ್ಸ್ ಟೀಂ ವಾದ :
ರೆಬಲ್ಸ್ ಟೀಂ ವಾದ ಒಂದೇ. ವಿಜಯೇಂದ್ರ ಲೀಡರ್ ಅಲ್ಲ. ಯಡಿಯೂರಪ್ಪ ಮಗ ಮಾತ್ರ. ರಾಜ್ಯದಲ್ಲಿ ವಿಜಯೇಂದ್ರ ಅವರ ಪರ ಯಾವ ಅಲೆಯೂ ಇಲ್ಲ. ಜನಪ್ರಿಯತೆಯೂ ಇಲ್ಲ. ಕಾರ್ಯಕರ್ತರಲ್ಲಿ ವಿಶ್ವಾಸವೂ ಇಲ್ಲ. ಕೇವಲ ಯಡಿಯೂರಪ್ಪ ಅವರ ಎಂಬ ಹೆಸರಲ್ಲಿ ಜನ ಸೇರುತ್ತಿದ್ದಾರೆ. ಅಷ್ಟೇ.
ರೆಬಲ್ಸ್ ಟೀಂ ಮೀಟಿಂಗ್ :
ಬಿಜೆಪಿಯ ರೆಬೆಲ್ ನಾಯಕರು ಒಂದು ಕಡೆ ಸಭೆ ಸೇರಿದ್ದಾರೆ. ಇನ್ನೊಂದು ಕಡೆ ಬಿಜೆಪಿ ನಾಯಕರು ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಚೇರಿ ಕೇಶವಕೃಪಾದಲ್ಲಿ ಸಭೆ ಸೇರಿದ್ದಾರೆ. ಸಿದ್ದೇಶ್ವರ ನಿವಾಸದಲ್ಲಿನ ಸಭೆಗೆ ಭಿನ್ನ ಕ್ಯಾಂಪಿನಲ್ಲಿರುವ ಬಿಪಿ ಹರೀಶ್ ಭಾಗಿಯಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಹೆಸರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ತರಲು ಮುಂದಾಗಿದ್ದಾರೆ. ಜೂನ್ 23 ಅಥವಾ ಜೂನ್ 24ರಂದು ದೆಹಲಿಗೆ ತೆರಳಿ, ಟಾಪ್ ಲೀಡರುಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ದಾವಣಗೆರೆಯ ಮಾಜಿ ಸಂಸದ ಜಿಎಂ ಸಿದ್ದೇಶ್ವರ ಅವರ ಬೆಂಗಳೂರು ಯುಬಿ ಸಿಟಿಯಲ್ಲಿನ ಮನೆಯಲ್ಲಿ ಸಚಿವ ಸೋಮಣ್ಣ ಕೂಡಾ ಭಾಗಿಯಾಗಿದ್ದರು ಎನ್ನುವುದೇ ವಿಶೇಷ. ಈ ಸಭೆಗೆ ಬೊಮ್ಮಾಯಿ, ಆರ್ ಅಶೋಕ್ ಮೊದಲಾದವರ ಕುಮ್ಮಕ್ಕೂ ಇದೆ ಎನ್ನಲಾಗಿದೆ.
ಯಡಿಯೂರಪ್ಪ ಅಖಾಡಕ್ಕೆ :
ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ, ಯಡಿಯೂರಪ್ಪ ಅವರಿಗೆ ನೀವು ಪಕ್ಷದಲ್ಲಿ ಸಕ್ರಿಯರಾಗಿದ್ದುಕೊಂಡು ರಾಜ್ಯ ನಾಯಕರಿಗೆ ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದ್ದಾರಂತೆ. ಸುಮಾರು 20 ನಿಮಿಷ ನಡೆದ ಮಾತುಕತೆ ಬಳಿಕ ನೀವು ಪಕ್ಷದ ಚಟುವಟಿಕೆಗಳಿಂದ ದೂರ ಇರಬೇಡಿ. ಸಕ್ರಿಯರಾಗಿರಿ ಎಂದು ಹೇಳಿದರಂತೆ. ಅದಾದ ಮೇಲೆ ಮಾತನಾಡಿದ ಯಡಿಯೂರಪ್ಪ ಪ್ರತಿನಿತ್ಯ ಪಕ್ಷದ ಕಚೇರಿಗೆ ಬಂದು ಮಧ್ಯಾಹ್ನದವರೆಗೆ ಇರಲು ನಿರ್ಧರಿಸಿದ್ದೇನೆ. ಪ್ರತಿ ವಾರ ಒಂದೆರಡು ಜಿಲ್ಲೆಗೆ ಭೇಟಿ ನೀಡುತ್ತೇನೆ ಎಂದಿದ್ದಾರೆ.
ವಿಜಯೇಂದ್ರ ಟೀಂ ರೆಡಿ :
ಈ ನಡುವೆ ವಿಜಯೇಂದ್ರ ಟೀಂ ಕೂಡಾ ಆಕ್ಟಿವ್ ಆಗಿದೆ. ನಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಲೇಬೇಕು. ಕೆಲವರಿಗೆ ಅತೃಪ್ತಿ ಇರುವುದು ನಿಜ. ಅದನ್ನು ಸರಿಪಡಿಸುವ ಕೆಲಸವನ್ನು ವರಿಷ್ಠರು ಮಾಡಲಿದ್ದಾರೆ. ಸ್ಥಳೀಯವಾಗಿ ಸಣ್ಣಪುಟ್ಟ ಗೊಂದಲ ಇರುವುದನ್ನು ನಾನು ಅಲ್ಲಗೆಳೆಯುವುದಿಲ್ಲ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶಾಸಕ ಸಿ.ಟಿ.ರವಿ ಸೇರಿದಂತೆ ಮತ್ತಿತರರು ಚರ್ಚೆ ಮಾಡಿ ಸಮಸ್ಯೆಯನ್ನು ಇತ್ಯರ್ಥಪಡಿಸುತ್ತೇವೆ ಎಂದಿದ್ದಾರೆ. ವಿಶೇಷ ಎಂದರೆ ಈ ಲಿಸ್ಟಿನಲ್ಲಿ ಸಿಟಿ ರವಿ ಹೆಸರೂ ಇರುವುದು.



