ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ. ಅದರಲ್ಲಿ ಅನುಮಾನ ಇಲ್ಲ. ಅಧಿಕಾರ ಇದೆಯೋ.. ಇಲ್ಲವೋ.. ಅದು ಅವರು ಮಾತ್ರ ಹೇಳೋಕೆ ಸಾಧ್ಯ. ಹೀಗಿರುವಾಗಲೇ ವಿಜಯೇಂದ್ರ ಅವರಿಗೆ ಅವಕಾಶವೊಂದು ತಂತಾನಾಗಿಯೇ ಒದಗಿ ಬಂತು. ಅದು.. ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಹೋರಾಟ. ವಾಸ್ತವವಾಗಿ ರಾಜ್ಯ ಸರ್ಕಾರ ಸಡನ್ ಆಗಿ ಎದ್ದು ಕುಳಿತಿದ್ದೇ ಆಗ.. ವಿಜಯೇಂದ್ರ ಎಂಟ್ರಿ ಕೊಟ್ಟ ನಂತರವೇ.. ಆಕ್ಟಿವ್ ಆಗಿದ್ದು. ಆದರೆ.. ಅದಾದ ನಂತರ ವಿಜಯೇಂದ್ರ ನಡೆದುಕೊಂಡ ನಡೆಯ ಬಗ್ಗೆ, ಇಟ್ಟ ಹೆಜ್ಜೆಗಳ ಬಗ್ಗೆ ಪರ ವಿರೋಧ ಚರ್ಚೆಯಂತೂ ಆಗುತ್ತಿದೆ. ಇಷ್ಟಕ್ಕೂ ವಿಜಯೇಂದ್ರ ಈ ವಿಷಯದ ನಂತರ ಲೀಡರ್ ಆದ್ರಾ.. ಡ್ಯಾಮೇಜ್ ಮಾಡ್ಕೊಂಡ್ರಾ..?
ಮೊದಲಿಗೆ ಪಾಸಿಟಿವ್ ಕಥೆ :
ಕಬ್ಬು ಬೆಳೆಗಾರರ ಜತೆ ಸೇರಿ ಅವರು ನಡೆಸಿದ ಬೀದಿ ಹೋರಾಟಕ್ಕೆ ವಿಜಯೇಂದ್ರ ಎಂಟ್ರಿ ಆಗಿದ್ದು ನವೆಂಬರ್ 4ರಂದು. ಹೋರಾಟವನ್ನು ಬೆಂಬಲಿಸಿ ಗುರ್ಲಾಪುರ ದಲ್ಲಿ ಬೀದಿಗಳಿದ ಬಿ.ವೈ.ವಿಜಯೇಂದ್ರ, “ರೈತರಿಗೆ ನ್ಯಾಯ ಸಿಗುವವರೆಗೂ ನಾನಿಲ್ಲಿಂದ ಹೊರಡಯವುದಿಲ್ಲ” ಅಂತ ಘೋಷಿಸಿಬಿಟ್ಟರು. ಹುಟ್ಟುಹಬ್ಬವನ್ನೂ ರೈತರ ಜೊತೆಯಲ್ಲೇ ಆಚರಿಸಿದ ವಿಜಯೇಂದ್ರ ಹೋರಾಟ, ರಾಜ್ಯ ಸರ್ಕಾರವನ್ನು ಅಲರ್ಟ್ ಮಾಡಿತ್ತು. ಒಂದು ವಾರದಿಂದ ರೈತರ ಹೋರಾಟಕ್ಕೆ ಪಂಚೇಂದ್ರಿಯಗಳನ್ನೂ ಬಂದ್ ಮಾಡಿಕೊಂಡು ಕುಳಿತಿದ್ದ ರಾಜ್ಯ ಸರ್ಕಾರ, ವಿಜಯೇಂದ್ರ ಎಂಟ್ರಿ ನಂತರ ಸಿಎಂ ಸಿದ್ಧರಾಮಯ್ಯ ಅವರೇ ಎಂಟ್ರಿ ಆಗಿ ಸಮಸ್ಯೆ ಪರಿಹರಿಸುವಂತೆ ಮಾಡಬೇಕಾಯ್ತು. ಇದು ಅಮಿತ್ ಶಾ ಅವರಿಗೂ ತಲುಪಿ.. ಹುಟ್ಟುಹಬ್ಬದ ಶುಭಾಶಯ ಕೋರಿ ವಿಶ್ ಮಾಡಿದ್ರು. ಆಗ ವಿಜಯೇಂದ್ರ ರೈತರ ಜೊತೆಯಲ್ಲೇ ಇದ್ರು. ಅಷ್ಟೇ ಅಲ್ಲ, ಕಬ್ಬು ಬೆಳೆಗಾರರ ಅಹವಾಲು ಸ್ವೀಕರಿಸಲು ಸರಕಾರದ ಪ್ರತಿನಿಧಿ ಬರುವುದು ಸ್ಪಷ್ಟವಾದ ಮೇಲೆ ಅಲ್ಲಿಂದ ಹೊರಟರು.
ಅದು ಅಮಿತ್ ಶಾ ಅವರಿಗೆ ಅಷ್ಟೇ ಅಲ್ಲ, ಬೆಂಗಳೂರಿಗೆ ಬಂದಿದ್ದ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕಿವಿಗೂ ತಲುಪಿದೆ. ರೈತ ಹೋರಾಟದ ಯಶಸ್ಸಿನಲ್ಲಿ ವಿಜಯೇಂದ್ರ ಪಾತ್ರ ದೊಡ್ಡದು ಎಂಬ ಮಾತು ಹರಡಿದ್ದು, ವಿಜಯೇಂದ್ರ ವಿರೋಧಿಗಳು ಅಲರ್ಟ್ ಆಗುವಂತೆ ಮಾಡಿದೆ. ಹೀಗಾಗಿಯೇ ಹಲವು ಮಾಧ್ಯಮ ಪ್ರತಿನಿಧಿಗಳನ್ನು ಸಂಪರ್ಕಿಸಿ ವಿಜಯೇಂದ್ರ ಅವರ ಪಾತ್ರ ಝೀರೋ ಎನ್ನೋಕೆ ಶುರು ಮಾಡಿದ್ದಾರೆ. ಹೋರಾಟದ ಕ್ರೆಡಿಟ್ ರೈತರದ್ದೇ ಹೊರತು, ವಿಜಯೇಂದ್ರ ಅವರದ್ದಲ್ಲ.. ಎಂದಿದ್ದಾರೆ.
ಆದರೆ.. ಮೀಡಿಯಾದವರು ಯತ್ನಾಳ್ ವಿಷಯ ಪ್ರಸ್ತಾಪ ಮಾಡಿದ್ದಾರೆ. ಯತ್ನಾಳ್ ಅವರು ಎಂದಿನಂತೆ ರೈತರನ್ನು ಉಡಾಫೆಯಾಗಿ ನೋಡಿದ್ರಲ್ಲ.. ಅದಕ್ಕೇನ್ ಹೇಳ್ತೀರಿ ಎನ್ನುತ್ತಿದ್ದಂತೆ ಈಗಲೂ ಯತ್ನಾಳ್ ಜೊತೆಯಲ್ಲಿರುವ ಬಣ ಸೈಲೆಂಟ್ ಆಗಿದೆ.
ನೆಗೆಟಿವ್ ಕಥೆಯೂ ಇದೆ :
ನೆಗೆಟಿವ್ ಕಥೆ ಏನೆಂದರೆ.. ವಿಜಯೇಂದ್ರ ಅವರಿಗೆ ತಾಳ್ಮೆ ಇಲ್ಲ. ಹೋರಾಟ ಮಾಡುವವರಿಗೆ ತಾಳ್ಮೆಯೂ ಮುಖ್ಯ. ಸರ್ಕಾರ ಪ್ರತಿಭಟನಾ ಸ್ಥಳಕ್ಕೆ ಬರುವವರೆಗೆ ಕಾದು.. ಆನಂತರ ರೈತರನ್ನೇ ಮಾತುಕತೆಗೆ ಕೂರಿಸಬೇಕಿತ್ತು. ಆದರೆ.. ಯಾರೋ ಒಬ್ಬರು ಬರುತ್ತಾರೆ ಎಂದ ತಕ್ಷಣ ಬೆಳಗಾವಿ ಬಿಟ್ಟು ಬೆಂಗಳೂರಿಗೆ ಓಡಿ ಬಂದುಬಿಟ್ಟರು. ಇದು ಹೋರಾಟಗಾರನ ಲಕ್ಷಣ ಅಲ್ಲ. ಬೆಂಗಳೂರಿಗೆ ಬಂದ ವಿಜಯೇಂದ್ರ ಮಾಡಿದ್ದಾದರೂ ಏನು..? ರೈತರ ಹೋರಾಟಕ್ಕೆ ಒಂದು ಗೆಲುವು ಸಿಗುವವರೆಗೆ ಕಾದಿದ್ದರೆ, ಬೆಳಗಾವಿಯಿಂದ ವಾಪಸ್ ಬರುವಾಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ.. ರೈತ ನಾಯಕ ವಿಜಯೇಂದ್ರ ಆಗಿ ವಾಪಸ್ ಬರುತ್ತಿದ್ದರು. ಒಂದೊಳ್ಳೆ ಚಾನ್ಸ್ ಮಿಸ್ ಮಾಡಿಕೊಂಡರು ಎನ್ನುವ ವಾದವೂ ಇದೆ.



