ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ಚಳಿ, ಗಾಳಿಯೆನ್ನದೆ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 7ನೇ ದಿನಕ್ಕೆ ಪ್ರವೇಶಿಸಿದೆ. ಈ ರೈತರ ಹೋರಾಟದಲ್ಲಿ ಗಮನ ಸೆಳೆಯುತ್ತಿರುವುದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ. ವಿಜಯೇಂದ್ರ ಅವರಿಗೆ ನವೆಂಬರ್ 5ರಂದು ಹುಟ್ಟುಹಬ್ಬ. ನವೆಂಬರ್ 5ರ ಪತ್ರಿಕೆ ಓಪನ್ ಮಾಡಿದರೆ.. ವಿಜಯೇಂದ್ರಗೆ ಹುಟ್ಟುಹಬ್ಬದ ಶುಭಾಶಯಗಳು ಎಂಬ ಜಾಹೀರಾತು ಕಣ್ಣಿಗೆ ಬೀಳುತ್ತದೆ. ಆದರೆ.. ವಿಜಯೇಂದ್ರ ಅಲ್ಲಿ ರೈತ ಹೋರಾಟದಲ್ಲಿದ್ದರೆ, ವಿಜಯೇಂದ್ರ ವಿರೋಧಿ ಬಣ ಮೀಡಿಯಾಗಳಲ್ಲಿ, ಟಿವಿಗಳಲ್ಲಿ ಮಾತನಾಡುತ್ತಲೇ ಇದೆ.
ಮಂಗಳವಾರದಿಂದಲೇ ರೈತರ ಜೊತೆ ಹೋರಾಟಕ್ಕಿಳಿದಿರುವ ವಿಜಯೇಂದ್ರ, ಬೆಳಗಾವಿಯ ಗುರ್ಲಾಪುರದ ಪ್ರತಿಭಟನೆ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ.. ರಾತ್ರಿಯೂ ರೈತರ ಜೊತೆ ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಹೋರಾಟಕ್ಕೆ ಬಲ ತುಂಬಿದ ನಾಯಕನಿಗೆ ರೈತರೇ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಕಳೆದ 6 ದಿನಗಳಿಂದ ರೈತರು ಶಾಂತಿಯುತ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಹೋರಾಟದ ಕಿಚ್ಚು ಅಕ್ಕಪಕ್ಕದ ತಾಲೂಕಿನಲ್ಲಿ ಬೆಳೆಯುತ್ತಿದೆ. ಆದರೆ ಯಾವೊಬ್ಬ ಸಚಿವರೂ ಸ್ಥಳಕ್ಕೆ ಬಂದಿಲ್ಲ ಎಂದು ಆಕ್ರೋಶ ಹೊರಹಾಕಿರುವ ವಿಜಯೇಂದ್ರ ಅದದೇ ರಾಜಕೀಯ ಮಾಡ್ತಾ ಟೈಂ ಪಾಸ್ ಮಾಡಬೇಡಿ. ರೈತರ ಹೋರಾಟದ ಕಿಚ್ಚು ರಾಜ್ಯಕ್ಕೆ ಹಬ್ಬೀತು ಎಚ್ಚರ ಎಂದು ಗುಡುಗಿದ್ದಾರೆ.
“ವಿಜಯೇಂದ್ರ ವಿರೋಧಿ ಬಣ ಫುಲ್ ಆಕ್ಟಿವ್ “
ಇತ್ತ ವಿಜಯೇಂದ್ರ ಅವರನ್ನು ಲಾಗಾಯ್ತಿನಿಂದಲೂ ವಿರೋಧಿಸುತ್ತಲೇ ಬಂದಿರುವ ಒಂದು ಬಣ ಈಗಲೂ ಆಕ್ಟಿವ್ ಇದೆ. ಯತ್ನಾಳ್ ಅವರನ್ನು ಹೊರಹಾಕಿದ ನಂತರ ಕೆಲವರು ಸೈಲೆಂಟ್ ಆಗಿದ್ದಾರೆ. ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಬೊಮ್ಮಾಯಿ, ಪ್ರತಾಪ್ ಸಿಂಹ, ವಿ ಸೋಮಣ್ಣ.. ಮೊದಲಾದವರು ಬಹಿರಂಗವಾಗಿ ಸೈಲೆಂಟ್ ಇದ್ದರೂ.. ಅವರ ಬಣದ ಯಾರಾದರೂ ಒಬ್ಬರು ಮೀಡಿಯಾಗಳಲ್ಲಿ ಮಾತನಾಡುವುದು ನಡೆಯುತ್ತಲೇ ಇದೆ. ಈ ಬಾರಿ ಎಸ್ ಆರ್ ವಿಶ್ವನಾಥ್.
ಎಸ್ ಆರ್ ವಿಶ್ವನಾಥ್ ಅವರಿಗೆ ಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಂಬರುವ ಚುನಾವಣೆಗೆ ಸಿದ್ಧತೆ ಸಂಬಂಧ ರಚಿಸಲಾಗಿರುವ ಸಮಿತಿಯಿಂದ ತಮ್ಮನ್ನು ಹೊರಗಿಟ್ಟಿರುವ ಬಗ್ಗೆ ಆಕ್ರೋಶ ಇದೆ. ನನ್ನನ್ನು ಸಮಿತಿಯಿಂದ ಕೈಬಿಟ್ಟಿರುವ ಬಗ್ಗೆ ಈವರೆಗೆ ವಿಜಯೇಂದ್ರ ಅವರು ನನಗೆ ಒಂದು ಕರೆಯನ್ನೂ ಮಾಡಿಲ್ಲ. ಅವರು ಎಲ್ಲ ಮುಖಂಡರ ಸಭೆ ಕರೆದು ಸಮಿತಿ ರಚಿಸಬಹುದಿತ್ತು. ಈ ಪಟ್ಟಿಯನ್ನು ಆರ್.ಅಶೋಕ್ ಮಾಡಿದರೊ ಅಥವಾ ಯಾರು ಮಾಡಿದರೊ ಗೊತ್ತಿಲ್ಲ. ಆದರೆ, ಅಶೋಕ್ ಅವರಾದರೂ ಇದನ್ನು ಗಮನಿಸಬೇಕಿತ್ತು. ಹಿಂದೆ ಇದೇ ಅಶೋಕ್ ಅವರು ಜಿಬಿಎ ಮಾಡಲು ಬಿಡಲ್ಲ. ಗಾಂಧೀಜಿ ತರ ದೇಹ ತುಂಡಾದರೂ ಬೆಂಗಳೂರು ಒಡೆಯಲು ಬಿಡಲ್ಲ ಎಂದಿದ್ದರು. ಈಗ ಸರ್ಕಾರದ ಮುಂದೆ ಶರಣಾಗಿದ್ದಾರೆ. ಮುಂದೆ ಎದುರಾಗುವ ಜಿಬಿಎ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದರೆ ಅದನ್ನು ಸಮಿತಿ ಮುಖಂಡರೇ ಹೊರಬೇಕು. ನಮ್ಮ ತಲೆಗೆ ಕಟ್ಟುವುದು ಬೇಡ. ನಾನು ನನ್ನ ಕ್ಷೇತ್ರ ನೋಡಿಕೊಳ್ಳುತ್ತೇನೆ.. ಎಂದಿದ್ದಾರಷ್ಟೇ ಅಲ್ಲದೆ.. ಸಮಿತಿಯಲ್ಲಿ ವಿ ಸೋಮಣ್ಣ, ಅರವಿಂದ ಲಿಂಬಾವಳಿ ಅವರನ್ನು ಸೇರಿಸಿಲ್ಲ ಎಂದು ಕಿಡಿ ಕಾರಿದ್ದಾರೆ.



