ಇದು ರಾಜ್ಯ ರಾಜಕಾರಣದ ನಿರಂತರ ಸುದ್ದಿ. ಇಲ್ಲಿ ವಿಜಯೇಂದ್ರ ವಿರುದ್ಧ ಅಖಾಡದಲ್ಲಿರುವುದು ಬಸನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ. ಯತ್ನಾಳ್ ಮತ್ತು ಜಾರಕಿಹೊಳಿ ಇಬ್ಬರೂ ಓಪನ್ ಆಗಿಯೇ ವಿಜಯೇಂದ್ರ ವಿರುದ್ಧ ತೊಡೆ ತಟ್ಟತೊಡಗಿದ್ದಾರೆ. ಇವರ ಹಿಂದೆ ಬಿ ಎಲ್ ಸಂತೋಷ್ ಕುಮ್ಮಕ್ಕಿದೆ ಎನ್ನುವುದು ಬಿಜೆಪಿಯಲ್ಲಿ ಎಲ್ಲರಿಗೂ ಗೊತ್ತಿರುವ ಗುಟ್ಟು. ವಿಶೇಷ ಏನಂದ್ರೆ ಈ ಬಾರಿ ಒಂದು ಕಡೆ ಅಬ್ಬರಿಸುತ್ತಲೇ.. ಮತ್ತೊಂದು ಕಡೆ ಡೆಲ್ಲಿ ಗೇಮ್ ಆಡುವುದಕ್ಕೆ ಶುರು ಮಾಡಿರುವುದು.
ಮೊದ ಮೊದಲು ಸೈಲೆಂಟ್ ಆಗಿ ದೆಹಲಿ ನಾಯಕರು ಸುಮ್ಮನಾಗಿಸುತ್ತಾರೆ ಎಂದು ಕಾದಿದ್ದ ವಿಜಯೇಂದ್ರ ಈಗ ತಾವೂ ಬಹಿರಂಗವಾಗಿಯೇ ರಣರಂಗಕ್ಕೆ ಧುಮುಕಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕು ದಶಕಗಳಿಂದ ರೈತರ ಪರವಾಗಿ ಧ್ವನಿ ಎತ್ತುತ್ತಿರುವ ಧೀಮಂತ ನಾಯಕ. ಬಿಎಸ್‌ವೈ ಪಕ್ಷ ಕಟ್ಟದಿದ್ದರೆ ಕೆಲವರಿಗೆ ವೇದಿಕೆ ಹತ್ತುವ ಯೋಗ್ಯತೆ ಎಲ್ಲಿತ್ತು ಎಂದು ಪ್ರಶ್ನೆ ಮಾಡಿರುವ ವಿಜಯೇಂದ್ರ ಬಿಎಸ್‌ವೈ ಬಿಜೆಪಿ ವೇದಿಕೆ ಹತ್ತಬಾರದು ಎಂಬ ಯತ್ನಾಳ್ ಹೇಳಿಕೆಗೆ ಬಹಿರಂಗವಾಗಿಯೇ ಗುಡುಗಿದ್ದಾರೆ. ಹೀಗಿದ್ದರೂ ಬಿಜೆಪಿ ಹೈಕಮಾಂಡ್ ಏಕೆ ಯತ್ನಾಳ್, ಜಾರಕಿಹೊಳಿ ಅವರಿಗೆ ಬ್ರೇಕ್ ಹಾಕುತ್ತಿಲ್ಲ ಎಂದು ನೋಡಿದರೆ ಸಂತೋಷ ರಹಸ್ಯ ಗೊತ್ತಾಗುತ್ತದೆ.
ಬಿಎಸ್‌ವೈ, ಅನಂತಕುಮಾರ್ ಪಕ್ಷ ಕಟ್ಟಿದ್ದಾರೆ. ಅವರು ಪಕ್ಷ ಕಟ್ಟದಿದ್ದರೆ ವೇದಿಕೆ ಹತ್ತುವ ಯೋಗ್ಯತೆಯೂ ಕೆಲವರಿಗಿರುತ್ತಿರಲಿಲ್ಲ. ಬಿಎಸ್‌ವೈ ಕೊಡುಗೆ ಮರೆತಿದ್ದರೆ ಯತ್ನಾಳ್ ನೆನಪಿಸಿಕೊಳ್ಳಲಿ. ಯತ್ನಾಳ್ ಮನಬಂದಂತೆ ಮಾತಾಡುವುದನ್ನು ಬಿಡಲಿ. ಹಗುರವಾಗಿ ಮಾತಾಡಿದರೆ ಮುಂದೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ವಿಜಯೇಂದ್ರ. ಆದರೆ ಯತ್ನಾಳ್ ಮತ್ತು ಜಾರಕಿಹೊಳಿ ಇವಕ್ಕೆಲ್ಲ ಕೇರ್ ಮಾಡಿದಂತೆ ಕಂಡು ಬರುತ್ತಿಲ್ಲ.
ಬದಲಿಗೆ ಬೆಂಗಳೂರಿನ ಖಾಸಗಿ ಹೋಟೆಲ್ಲಿನಲ್ಲಿ ತಮ್ಮ ತಮ್ಮ ಬೆಂಬಲಿಗರ ಜೊತೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಆ ಸಭೆಯ ಒನ್ ಲೈನ್ ಅಜೆಂಡಾ ʻವಿಜಯೇಂದ್ರ ಹಟಾವೋʼ ಎಂಬುದು ರಹಸ್ಯವೇನಲ್ಲ. ಡಿಸೆಂಬರಿನಲ್ಲಿ ವಿಜಯೇಂದ್ರ ಅವರ ಅಧಿಕಾರಾವಧಿ ಅಂತ್ಯವಾಗಲಿದೆ. ಅದೇ ಸಮಯಕ್ಕೆ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯೂ ಆಗಲಿದೆ. ಈ ಹೊತ್ತಿನಲ್ಲೇ ವಿಜಯೇಂದ್ರ ಅವರನ್ನು ಪಕ್ಷದ ಪ್ರಮುಖ ಹುದ್ದೆಯಿಂದ ಆಚೆಗಿಟ್ಟು ಬಿಟ್ಟರೆ ಮೊದಲ ಯುದ್ಧ ಗೆದ್ದಂತೆ ಎನ್ನುವುದು ಯತ್ನಾಳ್, ಜಾರಕಿಹೊಳಿ ಟೀಮಿನ ಪ್ಲಾನ್.
ಬೈ ಎಲೆಕ್ಷನ್ ಲೆಕ್ಕಾಚಾರ :
ಅವರ ಪ್ರಕಾರ ಈಗ ನಡೆಯುತ್ತಿರುವ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ ಶಿಗ್ಗಾಂವಿ ಗೆಲ್ಲಬಹುದು. ಏಕೆಂದರೆ ಮುಸ್ಲಿಮರ ವೋಟುಗಳು ಖಾದ್ರಿಯವರಿಂದಾಗಿ ಸಂಪೂರ್ಣ ಕಾಂಗ್ರೆಸ್ಸಿಗೆ ಹೋಗಲ್ಲ. ಇನ್ನು ಬೊಮ್ಮಾಯಿ ಪುತ್ರನಿಗೆ ಟಿಕೆಟ್ ಕೊಟ್ಟಿರೋದ್ರಿಂದ ಅವರು ಗೆಲ್ಲಬಹುದು. ಆದರೆ ಗೆದ್ದರೂ, ಅದರ ಕ್ರೆಡಿಟ್ಟು ವಿಜಯೇಂದ್ರ ಅವರದ್ದಲ್ಲ.
ಇನ್ನು ಸಂಡೂರು ಕ್ಷೇತ್ರದಲ್ಲಿ ರೆಡ್ಡಿ ಬಣದ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾರೆ. ಇದು ಶ್ರೀರಾಮುಲು ಅವರಿಗೆ ಬೇಸರ ತರಿಸಿದೆ. ಅಲ್ಲದೆ ಕಣದಲ್ಲಿರೋದು ತುಕಾರಾಂ ಅವರ ಕುಟುಂಬ. ಹೀಗಾಗಿ ಬಿಜೆಪಿ ಗೆಲ್ಲೋಕೆ ಸಾಧ್ಯವೇ ಇಲ್ಲ.
ಮೂರನೆಯದ್ದು ಚನ್ನಪಟ್ಟಣ. ಜೆಡಿಎಸ್ ಗೆದ್ದರೆ ಕುಮಾರಸ್ವಾಮಿಗೆ ಕ್ರೆಡಿಟ್ಟು. ಸೋತರೆ ಹೇಗಿದ್ದರೂ ವಿಜಯೇಂದ್ರ ಹೊಣೆ ಹೊರಬೇಕಾಗುತ್ತದೆ ಎನ್ನುವುದು ಯತ್ನಾಳ್ ಮತ್ತು ಜಾರಕಿಹೊಳಿ ಟೀಮಿನ ಲೆಕ್ಕಾಚಾರ.
ಈ ಎಲ್ಲ ಲೆಕ್ಕಾಚಾರವನ್ನೂ ಬುಡಮೇಲು ಮಾಡುವಂತೆ ಮಾಡುವ ಶಕ್ತಿ ಇರುವುದು ವಕ್ಫ್ ಗಲಾಟೆಗೆ ಮಾತ್ರ ಎನ್ನುವುದು ಕೂಡಾ ಆತಂಕಕ್ಕೆ ಕಾರಣ. ಏಕೆಂದರೆ ವಕ್ಫ್ ಹೋರಾಟ, ಈಗ ಕೇವಲ ವಿಜಯಪುರಕ್ಕೆ ಸೀಮಿತವಾಗಿಲ್ಲ.



