ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣಗಳ ನಡುವಿನ ಡಿಶುಂ ಡಿಶುಂಗೆ ಬ್ರೇಕ್ ಬೀಳುವ ಯಾವ ಸೂಚನೆಗಳೂ ಇಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದ ಸಂಸದರ ತಂಡ, ಅಮಿತ್ ಶಾ ಅವರಿಗೆ ದೂರು ನೀಡಿದೆಯಂತೆ. ಜೋಶಿ ನೇತೃತ್ವದ ತಂಡದಲ್ಲಿ ಯಡಿಯೂರಪ್ಪನವರ ಇನ್ನೊಬ್ಬ ಪುತ್ರ, ವಿಜಯೇಂದ್ರ ಅವರ ಅಣ್ಣ ಸಂಸದ ಬಿವೈ ರಾಘವೇಂದ್ರ ಕೂಡಾ ಇದ್ದರು. ಆದರೆ ಈ ನಿಯೋಗ ದೂರು ನೀಡಿರುವುದು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಅಲ್ಲ. ಪ್ರಹ್ಲಾದ್ ಜೋತಿ ನೇತೃತ್ವದಲ್ಲಿ ಈರಣ್ಣ ಕಡಾಡಿ, ಬಿ.ವೈ.ರಾಘವೇಂದ್ರ, ಜಗದೀಶ್ ಶೆಟ್ಟರ್ ಸೇರಿ ವಿವಿಧ ಸಂಸದರು ದೆಹಲಿಯಲ್ಲಿ ಶನಿವಾರ ಅಮಿತ್ ಶಾರನ್ನು ಭೇಟಿ ಮಾಡಿ ದೂರು ಕೊಟ್ಟಿದ್ದಾರೆ. ಇನ್ನೇನು ಒಂದೆರಡು ತಿಂಗಳಲ್ಲಿ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿವೆ. ಹೀಗಾಗಿ, ಬಣ ಜಗಳ ಇತ್ಯರ್ಥ ಮಾಡುವ ಬಗ್ಗೆ ತಕ್ಷಣ ಗಮನ ಹರಿಸಿ ಎಂದು ನಿಯೋಗ ಮನವಿ ಮಾಡಿದೆ.
ಯತ್ನಾಳ್ ಉಚ್ಚಾಟನೆ ಬೇಡ : ಸಂಸದರ ಮನವಿ
ವಿಜಯೇಂದ್ರ ಮತ್ತು ಯತ್ನಾಳ್ ನಡುವೆ ಉಂಟಾಗಿರುವ ಮನಸ್ತಾಪವನ್ನು ಮಾತುಕತೆ ಮೂಲಕ ಬಗೆಹರಿಸ ಬೇಕು ಎಂದಿರುವ ನಿಯೋಗ, ಯತ್ನಾಳ್ ಅವರ ಉಚ್ಚಾಟನೆ ಬೇಡ ಎಂದು ಹೇಳಿದೆ. ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ ಮಾತ್ರಕ್ಕೆ ಅವರನ್ನು ಉಚ್ಚಾಟನೆ ಮಾಡುವುದು ಸರಿಯಲ್ಲ. ಬಿಜೆಪಿಯ ಹಿಂದೆ ಬಲವಾಗಿ ನಿಂತಿರುವುದು ಲಿಂಗಾಯತ ಸಮುದಾಯ. ಅದರಲ್ಲೂ ಪ೦ಚಮಸಾಲಿಗಳು ಬಲವಾಗಿ ನಿಂತಿದ್ದಾರೆ. ಹೀಗಾಗಿ ಉಚ್ಚಾಟನಾ ಕ್ರಮ ಮತ್ತೊಂದು ಹಂತಕ್ಕೆ ಹೋಗಬಹುದು. ಸಮುದಾಯಕ್ಕೆ ಕೆಟ್ಟ ಸಂದೇಶ ರವಾನೆ ಆಗಬಹುದು. ಹೀಗಾಗಿ, ಇಬ್ಬರನ್ನೂ ಒಂದು ವೇದಿಕೆಗೆ ಕರೆತನ್ನಿ, ಅಸಮಾಧಾನಗಳನ್ನು ಪರಿಹರಿಸಿ ಎಂದು ಸಂಸದರು ಮನವಿ ಮಾಡಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.
ನನ್ನನ್ನು ಬದಲಾವಣೆ ಮಾಡುವುದು ಒಂದು ಭ್ರಮೆ : ವಿಜಯೇಂದ್ರ
ವಿಜಯೇಂದ್ರನನ್ನು ಬದಲಾವಣೆ ಮಾಡಬಹುದು ಎಂಬ ಭ್ರಮೆಯಲ್ಲಿ ಇರುವವರಿಗೆ ಒಳ್ಳೆಯ ಸುದ್ದಿ ಬರಲು ಸಾಧ್ಯವಿಲ್ಲ. ನಾನು ಮಾಡುತ್ತಿರುವ ಪ್ರಯತ್ನದ ಬಗ್ಗೆ ಪಕ್ಷದ ವರಿಷ್ಠರಿಗೆ ಸಮಾಧಾನ ಇದೆ. ಎಲ್ಲರನ್ನೂ ಸರಿದೂಗಿಸಿ ಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಗನಾಗಿರುವುದೇ ಅಪರಾಧ ಎಂಬ ರೀತಿಯಲ್ಲಿ ಕೆಲವರು ಮಾತನಾಡುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತೇವೆ ಎಂದಿದ್ದಾರೆ ವಿಜಯೇಂದ್ರ.
ದೆಹಲಿಗೆ ತೆರಳಿ ದೂರು ಕೊಡುತ್ತಿಲ್ಲ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ದಿನನಿತ್ಯ ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದು, ಮಾಧ್ಯಮಗಳಲ್ಲಿ ಬರುತ್ತಿದೆ. ಅವರದೇ ಆದ ರೀತಿಯಲ್ಲಿ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೆಲವರ ನಡವಳಿಕೆಯಿಂದ ಅವರು ಎತ್ತರಕ್ಕೆ ಬೆಳೆಯುವ ಭ್ರಮೆ ಯಲ್ಲಿದ್ದರೆ, ಖಂಡಿತ ಅದು ಸಾಧ್ಯವಿಲ್ಲ. ಕಾರ್ಯಕರ್ತರು ಕೂಡ ಹಿಡಿಶಾಪ ಹಾಕುತ್ತಿದ್ದಾರೆ. ಹಾಕುತ್ತಿದ್ದಾರೆ. ಇದೆಲ್ಲಕ್ಕೂ ಇದೆಲ್ಲಕ್ಕೂ ಇತಿಶ್ರೀ ಹಾಡ ಬೇಕೆಂಬ ಅಪೇಕ್ಷೆ ಕಾರ್ಯಕರ್ತರಲ್ಲೂ ಇದೆ. ಯಾರ ಗಮ ನಕ್ಕೆ ತರಬೇಕೋ ಅದನ್ನು ತಂದಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಹೋರಿ, ಯಾವುದಕ್ಕೂ ಹೆದರಲ್ಲ : ಯತ್ನಾಳ್
ನಾನು ನಡೆಸುತ್ತಿರುವ ಹೋರಾಟ ಪಕ್ಷದ ವಿರುದ್ದವಲ್ಲ. ಹೋರಾಟದ ವಿಷಯದಲ್ಲಿ ಬಿಜೆಪಿಯಲ್ಲಿ ಬಣಗಳಿಲ್ಲ. ಕೆಲವರು ಸ್ವಪ್ರತಿಷ್ಠೆಗಾಗಿ ನಮ್ಮ ಹೋರಾಟವನ್ನು ಭಿನ್ನವಾಗಿ ನೋಡುವುದು ತರವಲ್ಲ ಎಂದಿರುವ ಬಸನಗೌಡ ಪಾಟೀಲ ಯತ್ನಾಳ್ ನಾನು ಪ್ರಧಾನಿಯ ಇಚ್ಛೆಯಂತೆ ಕಾರ್ಯ ಮಾಡುತ್ತಿರುವೆ. ನಮ್ಮಲ್ಲಿ ಯಾವುದೇ ಬಣಗಳಿಲ್ಲ ಎಂದಿದ್ದಾರೆ.
ರೈತರ, ಮಠ-ಮಾನ್ಯಗಳ ಆಸ್ತಿ ವಕ್ಫ್ ಪಾಲಾಗುವುದನ್ನು ತಡೆಯಲು ನಾನು ಹೋರಾಟ ಮಾಡುತ್ತಿದ್ದೇನೆ. ಈ ಹೋರಾಟ ಯಾರ ವಿರುದ್ದವೂ ಅಲ್ಲ. ನನ್ನ ವಿರುದ್ಧ ಹಲವೆಡೆ ಪ್ರಕರಣಗಳು ದಾಖಲಾಗಿವೆ. ಆದರೆ, ನಾನು ಹೆದರುವುದಿಲ್ಲ. ನಾನು ಹೋರಿ ಇದ್ದಂತೆ. ಏನೇ ಬಂದರೂ ಗೂಳಿಯಂತೆ ಅದನ್ನು ಎದುರಿಸುವೆ. ಅಗತ್ಯ ಬಿದ್ದರೆ ಪ್ರಾಣ ತ್ಯಾಗಕ್ಕೂ ಸಿದ್ದ ಎಂದಿದ್ದಾರೆ.



