ಇತ್ತೀಚೆಗೆ ಪೀಪಲ್ ಪಲ್ಸ್ ಎಂಬ ಸಂಸ್ಥೆ ಒಂದು ಸಮೀಕ್ಷೆ ಮಾಡಿತ್ತು. ರಾಜ್ಯ ಸರ್ಕಾರಕ್ಕೆ 2 ವರ್ಷ ಪೂರೈಸಿದ್ದ ಹಿನ್ನೆಲೆಯಲ್ಲಿ ನಡೆದಿದ್ದ ಸಮೀಕ್ಷೆ ಅದು. ಈಗಲೇ ಎಲೆಕ್ಷನ್ ನಡೆದರೆ ಯಾವ ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನ ಸಿಗಲಿದೆ ಎಂಬ ಸಮೀಕ್ಷೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿತ್ತು. ಕಾಂಗ್ರೆಸ್, ಈಗ ಬಿಜೆಪಿ ಇರುವ ಸ್ಥಿತಿಗಿಂತ ಸ್ವಲ್ಪ ಉತ್ತಮ ಎಂಬ ಸಾಧನೆ ಮಾಡಿತ್ತು. ಜೆಡಿಎಸ್ ಇನ್ನೂ ಇನ್ನೂ ಪಾತಾಳಕ್ಕೆ ಇಳಿದಿತ್ತು. ಇದು ಸಮೀಕ್ಷೆಯಷ್ಟೇ. ಕೇವಲ ಸಮೀಕ್ಷೆ. ಈಗ ಆ ಸಮೀಕ್ಷೆಯನ್ನೇ ಯತ್ನಾಳ್ ಲೇವಡಿ ಮಾಡಿದ್ದಾರೆ.
ಇದು ವಿಜಯೇಂದ್ರ ದುಡ್ಡು ಕೊಟ್ಟು ಮಾಡಿಸಿರುವ ಸಮೀಕ್ಷೆ. ಈಗೆನಾದ್ರೂ ಚುನಾವಣೆ ನಡೆದರೆ ಬಿಜೆಪಿ 160 ಸೀಟ್ ಗೆಲ್ಲಲಿದೆ ಎಂದು ವಿಜಯೇಂದ್ರ ಸರ್ವೇ ಮಾಡಿಸಿದ್ದಾನೆ. ಒಂದು ಕೋಟಿ ಕೊಟ್ಟರೆ, ನಾನು ಕೂಡ ಸರ್ವೇ ಮಾಡಿಸಬಹುದು. ಮಾಡಿಸುಸುತ್ತೇನೆ. ಯತ್ನಾಳ್ ಇಲ್ಲದೆ ಬಿಜೆಪಿ ಕೇವಲ 30 ಸೀಟ್ ಗೆಲ್ಲಲಿದೆ ಎಂದು ಸರ್ವೇ ಮಾಡಿಸುತ್ತೇನೆ, ದುಡ್ಡು ಕೊಟ್ಟು ಸರ್ವೆ ಮಾಡಿಸುವುದು ದೊಡ್ಡ ಕೆಲಸ ಅಲ್ಲ. ಅಧ್ಯಕ್ಷ ಗಿರಿಗಾಗಿ ಬೊಗಸ್ ಸರ್ವೆ ಮಾಡಿದ್ದಾರೆ, ವಿಜಯೇಂದ್ರ ಅವರ ಅಪ್ಪ ಇದ್ದಾಗಲೇ 104, 110 ಸೀಟ್ ಬಂದಿದ್ದವು. ಇವನನ್ನ ನೋಡಿ ರಾಜ್ಯದಲ್ಲಿ ಯಾರು ಮತ ಹಾಕುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಯಡಿಯೂರಪ್ಪ ಸಿಎಂ ಅಭ್ಯರ್ಥಿ ಎಂದು ಘೋಷಣೆಯಾಗಿದ್ದಾಗ.. ಮೊದಲ ಬಾರಿ ಸಿಎಂ ಆದಾಗ ಬಿಜೆಪಿ ಗೆದ್ದಿದ್ದು 110 ಸ್ಥಾನ. ಆಗ ಸರಳ ಬಹುಮತಕ್ಕಾಗಿ ಆಪರೇಷನ್ ಕಮಲ ನಡೆದಿತ್ತು.
2018ರಲ್ಲಿ ಬಿಜೆಪಿ ಗೆದ್ದಿದ್ದು 104 ಸ್ಥಾನ. ಆಗ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಂಡು, ಹಲವು ಶಾಸಕರು ರಾಜೀನಾಮೆ ನೀಡಿ, ಬಿಜೆಪಿ ಸೇರಿ ಗೆದ್ದು ಬಂದಿದ್ದರು. ಹೀಗಾಗಿ ಯತ್ನಾಳ್ ಈ ಮಾತು ಹೇಳಿದ್ದಾರೆ.
ಪೀಪಲ್ ಪಲ್ಸ್ ಸಮೀಕ್ಷೆಯಲ್ಲಿ ಏನಿದೆ..?
ಈಗ ಚುನಾವಣೆ ನಡೆದರೆ 136ರಿಂದ 159 ಸೀಟುಗಳು ಬಿಜೆಪಿಗೆ ಬಂದು ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಸ್ವಂತ ಬಲದ ಮೇಲೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಂತಾಗುತ್ತದೆ ಎಂದು ಸಮೀಕ್ಷೆ ತಿಳಿಸಿದೆ. ಅಂದರೆ ಯಡಿಯೂರಪ್ಪ ನಾಯಕತ್ವದಲ್ಲಿ ಮಾಡಲಾಗದ ಸಾಧನೆಯೊಂದನ್ನು, ವಿಜಯೇಂದ್ರ ನೇತೃತ್ವದಲ್ಲಿ ಮಾಡಲಿದೆ ಎಂಬುದು ಈ ಸಮೀಕ್ಷೆಯಲ್ಲಿ ಸಿಕ್ಕಿರುವ ಉತ್ತರ. ಅಧಿಕಾರದಲ್ಲಿರುವ ಕಾಂಗ್ರೆಸ್, 62ರಿಂದ 82 ಸ್ಥಾನಗಳನ್ನು ಗಳಿಸಬಹುದಷ್ಟೇ. ಅಲ್ಲದೆ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಆ ಪಕ್ಷದ ವೋಟ್ ಶೇರ್ ಶೇ. 40.3ಕ್ಕೆ ಇಳಿಯಲಿದೆ ಎಂದು ಹೇಳಲಾಗಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಶೇ. 42.33 ವೋಟ್ ಶೇರ್ ಸಿಕ್ಕಿತ್ತು. ಇಂದು ಚುನಾವಣೆ ನಡೆದರೆ ಆಡಳಿತಾರೂಢ ಕಾಂಗ್ರೆಸ್ಸಿಗೆ ಈ ಮಟ್ಟದಲ್ಲಿ ಹಿನ್ನೆಡೆಯಾಗಲು, ರಾಜ್ಯಾದ್ಯಂತ ಎದ್ದಿರುವ ಆಡಳಿತ ವಿರೋಧಿ ಅಲೆ ಕಾರಣ ಎನ್ನಲಾಗಿದೆ.
ವಿಜಯೇಂದ್ರಗಿಂತ ಯಡಿಯೂರಪ್ಪ ಜನಪ್ರಿಯ..!
ಜನಪ್ರಿಯ ಸಿಎಂ ಸಿದ್ದರಾಮಯ್ಯ ಅವರೇ ಮುಂಚೂಣಿಯಲ್ಲಿದ್ದಾರೆ. ಸಮೀಕ್ಷೆ ಪ್ರಕಾರ ಹಾಲಿ ಸಿಎಂ ಸಿದ್ದರಾಮಯ್ಯ ಈಗಲೂ ಮಾಸ್ ಲೀಡರ್. ಚುನಾವಣೆಯಾದರೆ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಯಾರನ್ನು ನೋಡಲು ಬಯಸುತ್ತೀರಿ ಎಂದು ಸಮೀಕ್ಷೆಯಲ್ಲಿ ಕೇಳಲಾಗಿರುವ ಪ್ರಶ್ನೆಗೆ, ಶೇ. 29.2ರಷ್ಟು ಜನ, ಸಿದ್ದರಾಮಯ್ಯ ಹೆಸರು ಹೇಳಿದ್ದರೆ, ಶೇ. 10.7ರಷ್ಟು ಜನ ಡಿಕೆ ಹೆಸರು ಹೇಳಿದ್ದಾರೆ. ಇನ್ನು ಬಿಜೆಪಿಯಲ್ಲಿ ಯಡಿಯೂರಪ್ಪ ಪರ ಶೇ.5.5 ರಷ್ಟು ಜನ, ವಿಜಯೇಂದ್ರ ಅವರ ಶೆ.5.2ರಷ್ಟು ಜನ ಬೆಂಬಲ ಸೂಚಿಸಿದ್ದಾರೆ. ಈ ಲೆಕ್ಕದಲ್ಲಿ ಯಡಿಯೂರಪ್ಪ, ವಿಜಯೇಂದ್ರ ಅವರಿಗೆ ಹೋಲಿಸಿದರೆ, ಹೆಚ್ಚು ಜನಪ್ರಿಯ.



