ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಯತ್ನಾಳ್ ಅವರನ್ನೇ ಕಳೆದುಕೊಂಡ ಭಿನ್ನರ ಪಡೆ, ಈಗ ಇದ್ದಕ್ಕಿದ್ದಂತೆ ವರಸೆ ಬದಲಿಸಿದೆ. ಯತ್ನಾಳ್ ಟೀಮಿನವರ ಆಟದಲ್ಲಿ, ಹೊಸ ಬೇಡಿಕೆಯಲ್ಲಿ ಒಂದು ಅರ್ಥವಾಗದ ಬೇಡಿಕೆ ಇದೆ. ಯತ್ನಾಳ್ ಟೀಮಿನವರ ಹೊಸ ವರಸೆ ಎಂದರೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯಿಂದ ವಿಜಯೇಂದ್ರ ಬದಲಾವಣೆ ಬೇಡ, ಅವರು ಅಧಿಕಾರ ಪೂರೈಸಲಿ ಎನ್ನವುದು.
ಅರೆ.. ಹೀಗೇಕೆ ಎಂದರೆ.. ಅರ್ಥವಾಗುವ ಕಥೆಯೇ ಬೇರೆ. ಬಿಜೆಪಿ ಮೂಲಗಳ ಪ್ರಕಾರ, ಕರ್ನಾಟಕ ಬಿಜೆಪಿಯ ಚುನಾವಣಾಧಿಕಾರಿ ಶಿವರಾಜ್ ಸಿಂಗ್ ಚೌಹಾಣ್ ಏಪ್ರಿಲ್ 10ರಂದು ಬೆಂಗಳೂರಿಗೆ ಬರುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಭಿನ್ನರ ಪಡೆ ಚೌಹಾಣ್ ಅವರನ್ನು ಭೇಟಿ ಮಾಡಿ ಎರಡು ಬೇಡಿಕೆಗಳನ್ನು ಮುಂದಿಡುತ್ತಿದೆ.
ಬೇಡಿಕೆ ನಂ.1 : ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಿಸಿ
ಬೇಡಿಕೆ ನಂ. 2 : ಬದಲಾವಣೆ ಸಾಧ್ಯವಾಗದಿದ್ದರೆ ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನದಲ್ಲಿ ಮುಂದುವರೆಸಿ.
ಶತಾಯ ಗತಾಯ ವಿಜಯೇಂದ್ರ ಅಧ್ಯಕ್ಷರಾಗುವುದು ಬೇಡ, ಆ ಸ್ಥಾನದಲ್ಲಿರುವುದೇ ಬೇಡ ಎನ್ನುತ್ತಿದ್ದ ಭಿನ್ನರ ಪಡೆಯ ಈ ಬೇಡಿಕೆಯಲ್ಲಿ ಒಂದು ಸೂಕ್ಷ್ಮವಿದೆ. ಅದೆಂದರೆ ವಿಜಯೇಂದ್ರ ಪಕ್ಷದ ರಾಜ್ಯಾ ಧ್ಯಕ್ಷರಾಗಿ ಆಗಸ್ಟ್ ಅಂತ್ಯಕ್ಕೆ 2 ವರ್ಷ ಪೂರ್ಣಗೊಳ್ಳಲಿದೆ. ಹೀಗಾಗಿ ಸಹಜವಾಗಿಯೇ ಈ ಅವಧಿ ಪೂರ್ಣಗೊಳ್ಳಲು ಬಿಡಿ. ಇದಾದ ನಂತರ ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸಿ. ಆದರೆ ಈಗ ಮಾತ್ರ ಯಾವ ಕಾರಣಕ್ಕೂ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ಘೋಷಿಸಬೇಡಿ. ಅಕಸ್ಮಾತ್ ಹಾಗೇನಾದರೂ ಘೋಷಿಸಿದರೆ ವಿಜಯೇಂದ್ರ ಪುನಃ ಇನ್ನೆರಡು ವರ್ಷದ ಅವಧಿಗೆ ಅಧ್ಯಕ್ಷರಾಗುತ್ತಾರೆ. ಇದು ಸರಿಯಲ್ಲ ಎಂಬುದು ಭಿನ್ನರ ವಾದ. ಇದನ್ನೇ ಅವರು ಬೆಂಗಳೂರಿಗೆ ಬರಲಿರುವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹೇಳಲಿದ್ದಾರೆ.
ಉದ್ದೇಶ ಏನು..?
ಆಗಸ್ಟ್ ತಿಂಗಳ ನಂತರವೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರೇ ಮುಂದುವರಿದರೆ ಆಗ ಚುನಾವಣೆ ಹೊತ್ತಿಗೂ ಅವರೇ ಇರುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಆಗ ವಿಜಯೇಂದ್ರ ಅವರೇ ಸಿಎಂ ಕೂಡಾ ಆಗುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡಬಾರದು ಎನ್ನವುದು ಭಿನ್ನರ ಪಡೆಯ ಮೂಲತಂತ್ರ. ಅಂದರೆ ಯಾವುದೇ ಕಾರಣಕ್ಕೂ ಯಡಿಯೂರಪ್ಪ ಕುಟುಂಬಕ್ಕೆ ಅಧಿಕಾರ ದಕ್ಕಬಾರದು ಎಂದು ತಂತ್ರ ಹೆಣೆಯಲಾಗುತ್ತಿದೆ. ಈ ವಾರ ಕರ್ನಾಟಕಕ್ಕೆ ಬರುತ್ತಿರುವ ರಾಜ್ಯ ಬಿಜೆಪಿಯ ಚುನಾವಣಾಧಿಕಾರಿ ಶಿವರಾಜ್ ಸಿಂಗ್ ಚೌಹಾಣ್‌ರಿಗೆ ಈ ವಿಷಯವನ್ನು ನೇರವಾಗಿ ಹೇಳಲು ಭಿನ್ನರು ತೀರ್ಮಾನಿಸಿದ್ದಾರೆ. ಮೂಲಗಳ ಪ್ರಕಾರ, ಯತ್ನಾಳ್ ಉಚ್ಚಾಟನೆಯ ನಂತರ ಭಿನ್ನರ ಪಡೆ ತಬ್ಬಿಬ್ಬಾಗಿರುವುದು ನಿಜವಾದರೂ ಪರಿಸ್ಥಿತಿಯನ್ನು ಕಾದು ನೋಡಲು ಅದು ತೀರ್ಮಾನಿಸಿದೆ. ಹಾಗೆಯೇ ಯತ್ನಾಳ್ ಅವರನ್ನು ಮರಳಿ ಪಕ್ಷಕ್ಕೆ ಎಳೆ ತರುವ ಕಾರ್ಯದಿಂದ ಹಿಂದಕ್ಕೆ ಸರಿಯಲು ಯೋಚಿಸಿದೆ.
ಲಾಸ್ಟ್ ಸಿಪ್ : ಯಡಿಯೂರಪ್ಪ ದಾಖಲೆಗಳ ಪ್ರಕಾರ 4 ಬಾರಿ ಸಿಎಂ ಆದ ನಾಯಕ. ಆದರೆ ಆ 4 ಬಾರಿ ಸಿಎಂ ಆದಾಗಲೂ ಯಡಿಯೂರಪ್ಪ ಅವರಿಗೆ ವಿಲನ್ ಆಗಿ ಕಾಡಿದ್ದು ಖುದ್ದು ಬಿಜೆಪಿಯವರೇ. ಜೊತೆಯಲ್ಲಿದ್ದವರೇ. ಹಾಗೆ ಇನ್ನಿಲ್ಲದ ಕಾಟ ಕೊಟ್ಟು ಅಧಿಕಾರ ಕಸಿದುಕೊಂಡವರಿಗೆ ಅಷ್ಟೇ ತೀವ್ರವಾಗಿ ತಿರುಗೇಟು ಕೊಟ್ಟಿದ್ದು ಯಡಿಯೂರಪ್ಪ. ಅಕಸ್ಮಾತ್ ಯಡಿಯೂರಪ್ಪ ಅವರೇನಾದರೂ ದೇವರು ಕೊಟ್ಟಂತೆ ಆಗಲಿ ಎಂದು ಸುಮ್ಮನಾಗಿದ್ದರೆ ಇವತ್ತಿನ ರಾಜಕೀಯದಲ್ಲಿ ಯಡಿಯೂರಪ್ಪ ಅಸ್ಥಿತ್ವವೇ ಇರುತ್ತಿರಲಿಲ್ಲ. ವಿಜಯೇಂದ್ರ ಅವರಿಗೂ ಇದು ಗೊತ್ತು. ಹೀಗಾಗಿ ಹೋರಾಟ ಮುಗಿದಿಲ್ಲ. ನಿರಂತರವಾಗಿ ನಡೆಯುತ್ತಲೇ ಇರುತ್ತದೆ.



