ರಾಜ್ಯ ರಾಜಕೀಯದಲ್ಲಿ ಕೆಲವು ಅಪರೂಪದ ವ್ಯಕ್ತಿಗಳಿರುತ್ತಾರೆ. ಅಂತಹವರಲ್ಲಿ ಒಬ್ಬರು ಯಡಿಯೂರಪ್ಪ. ಯಡಿಯೂರಪ್ಪ ವಿರೋಧಿಗಳು ಬೇರಾವುದೇ ವಿಷಯಕ್ಕೆ ಟೀಕೆ ಮಾಡಬಹುದು, ಆದರೆ ಮಾತಿನ ವಿಷಯಕ್ಕೆ ಬಂದರೆ ಯಡಿಯೂರಪ್ಪ ಅಳೆದೂತೂಗಿ ಮಾತನಾಡುತ್ತಾರೆ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗೀತು ಎಂಬಷ್ಟು ಖ್ಯಾತಿ ಗಳಿಸಿದ್ದರೂ, ಮಾತು ಸಂಯಮದ ಎಲ್ಲೆ ಮೀರಿಲ್ಲ. ದೇವೇಗೌಡರಾದರೂ ಒಮ್ಮೊಮ್ಮೆ ಮಿತಿ ಮೀರಿದ್ದಾರೆ. ಸಿದ್ದರಾಮಯ್ಯ ಕೂಡಾ ಮರ್ಯಾದೆಯ ಗಡಿ ದಾಟಿದ್ದಾ ರೆ. ಆದರೆ ಅವರ ಸಮಕಾಲೀನ ರಾಜಕೀಯ ಪಟುವೇ ಆಗಿರುವ ಯಡಿಯೂರಪ್ಪ ಹಾಗಲ್ಲ. ಇದೆಲ್ಲವನ್ನೂ ನೆನಪಿಸಿಕೊಳ್ಳೋ ಹಾಗೆ ಮಾಡಿರುವುದು ವಿಜಯೇಂದ್ರ ಯಡಿಯೂರಪ್ಪ.
ಇತ್ತೀಚೆಗೆ ಅನಂತ್ ಕುಮಾರ್ ಹೆಗಡೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಾ ಹಿಂದೂ ಸಮಾಜವನ್ನು ಜಾತಿ, ಭಾಷೆ, ಪ್ರಾದೇಶಿಕತೆ ಆಧಾರದಲ್ಲಿ ಒಡೆಯುತ್ತಾ ಬರಲಾಗಿದೆ. ಮೂರ್ಖರಾಮಯ್ಯನಂಥವರು ಈಗಲೂ ಸಮಾಜವನ್ನು ಒಡೆಯುತ್ತಲೇ ಇದ್ದಾರೆ. ಈ ಬಾರಿ ಅವರಿಗೆ ಯಾವ ರೀತಿಯ ಹೊಡೆತ ನೀಡಬೇಕೆಂದರೆ ಪುನರ್‌ಜನ್ಮವೂ ಸಿಗಬಾರದು ಎಂದು ಹೇಳಿ ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ಧ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗೆ ಮಾತನಾಡುವಾಗ ಸಿದ್ದರಾಮಯ್ಯ ಅವರಿಗೆ ಮಗನೇ ಎಂಬ ಶಬ್ಧವನ್ನು ಬಳಸಿದ್ದರು. ಅಷ್ಟೇ ಅಲ್ಲ, ಅವನು ಇವನು ಎಂಬ ಏಕವಚನದಲ್ಲೇ ಮಾತನಾಡಿದ್ದರು.
ಇದಕ್ಕೆ ಪ್ರತಿಕ್ರಿಯೆಯಾಗಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್, ಪ್ರದೀಪ್ ಈಶ್ವರ್, ಶಿವರಾಜ್ ತಂಗಡಗಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ (ಮಾಜಿ ಬಿಜೆಪಿ ಮುಖಂಡ) ಮೊದಲಾದವರು ಕೆರಳಿ ಕೆಂಡವಾಗಿದ್ದರು. ರಾಜ್ಯಾದ್ಯಂತ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದ್ದು, ಹಲವು ಕಡೆ ಕೇಸು ದಾಖಲಾಗಿದೆ.
ಇದಕ್ಕೆ ಪ್ರತಿಯಾಗಿ ಬಿಜೆಪಿಯ ನಾಯಕರೆಲ್ಲ ಅನಂತ್ ಕುಮಾರ್ ಹೆಗಡೆ ಬೆಂಬಲಕ್ಕೆ ನಿಂತಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ವಿಜಯೇಂದ್ರ ಮಾತ್ರ ಹೆಗಡೆಯವರ ಮಾತು ವೈಯಕ್ತಿಕ. ಅದು ಪಕ್ಷದ ಹೇಳಿಕೆ ಅಲ್ಲ ಎಂದಿದ್ದಾರೆ. ಕೆ.ಎಸ್.ಈಶ್ವರಪ್ಪ, ಸಿಟಿ ರವಿ, ಪ್ರತಾಪ್ ಸಿಂಹ, ಕೋಟಾ ಶ್ರೀನಿವಾಸ್ ಪೂಜಾರಿ, ಶೋಭಾ ಕರಂದ್ಲಾಜೆ, ಆರ್.ಅಶೋಕ್.. ಮತ್ತಿತರ ನಾಯಕರೆಲ್ಲ ಅನಂತ್ ಹೆಗಡೆ ಅವರ ಸಮರ್ಥನೆಗಿಳಿದಿರುವಾಗ ವಿಜಯೇಂದ್ರ ಮಾತ್ರ ತಂದೆಯ ಹಾದಿಯನ್ನೇ ತುಳಿದಿದ್ಧಾರೆ.
ಮೊದಲೇ ರಾಜಕಾರಣಿಗಳು ಅಂದ್ರೆ ಜನ ನಂಬಲ್ಲ, ಅಂಥ ಪರಿಸ್ಥಿತಿ ಇದೆ. ಯಾರೇ ಇದ್ರೂ ನಮ್ಮ ಹೇಳಿಕೆ ಗಂಭೀರವಾಗಿರಬೇಕು. ಸಮಾಜ ಒಪ್ಪುವಂತೆ ಮಾತು ಇರಬೇಕು. ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗಳನ್ನು ನಾನೂ ಗಮನಿಸಿದ್ದೇನೆ. ನಾನು ಅವರ ಜತೆಗೂ ಇದರ ಬಗ್ಗೆ ಮಾತಾಡ್ತೇನೆ. ಅನಂತ ಕುಮಾರ್ ಹೆಗಡೆ ಜೊತೆ ವೈಯಕ್ತಿಕವಾಗಿ ಮಾತನಾಡುತ್ತೇನೆ. ಅದು ಅದು ಅವರ ವೈಯಕ್ತಿಕ ನಿಲುವು, ಅದು ಪಕ್ಷದ ನಿಲುವು ಅಲ್ಲ. ಈ ವಿಷಯದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸುತ್ತೇನೆ. ಯಾರೇ ಇರಲಿ, ಮಾತನಾಡೋದನ್ನ ಜನ ಗ್ರಹಿಸ್ತಾರೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಪರೋಕ್ಷವಾಗಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಮೋದಿ, ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ನಾಯಕರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಟೀಕಿಸುತ್ತಾರೆ. ಆದರೂ ವಿಜಯೇಂದ್ರ ತಾಳ್ಮೆಯಿಂದ ಮಾತನಾಡಿರುವುದು ಮಗ ಕೂಡಾ ಅಪ್ಪನ ದಾರಿಯಲ್ಲಿಯೇ ಸಾಗುತ್ತಿದ್ದಾರೆಯೇ ಎಂಬ ಭರವಸೆ ಹುಟ್ಟಿಸಿದೆ. ಏಕೆಂದರೆ.. ಎಲ್ಲೆ ಮೀರಿ ಮಾತನಾಡುವುದೇ ನಾಯಕತ್ವದ ಲಕ್ಷಣ ಎಂಬಂತೆ ಬದಲಾಗುತ್ತಿರುವ ಈ ಸಮಯದಲ್ಲಿ ವಿಜಯೇಂದ್ರ ಭರವಸೆ ಹುಟ್ಟಿಸುತ್ತಿದ್ಧಾರೆ.



