ರಾಜ್ಯ ಬಿಜೆಪಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣ ತಿಕ್ಕಾಟ ತೀವ್ರಗೊಂಡಿದೆ. ರಾಜ್ಯಾಧ್ಯಕ್ಷರ ವಿರುದ್ಧವೇ ಯತ್ನಾಳ್ ಬಣದ ನಾಯಕರು ಪ್ರತಿದಿನ ವಾಗ್ದಾಳಿ ನಡೆಸುತ್ತಿದ್ದರೂ, ಅತ್ತ ವಿಜಯೇಂದ್ರ ಕ್ರಮ ಕೈಗೊಳ್ಳೋಕೆ ಹೈಕಮಾಂಡ್ ಬಿಡುತ್ತಿಲ್ಲ. ಅತ್ತ ತಾನೂ ಕ್ರಮ ಕೈಗೊಳ್ಳುತ್ತಿಲ್ಲ. ಏಕೆ ಎಂದು ನೋಡಿದರೆ ಬಿ ಎಲ್ ಸಂತೋಷ್ ಹೆಸರು ಚರ್ಚೆಗೆ ಬರುತ್ತಿದೆ. ಪ್ರಹ್ಲಾಲ್ ಜೋಷಿಯವರ ಹೆಸರೂ ಇದೆ. ಆದರೆ ಪಕ್ಷದ ನಾಯಕರು, ಕಾರ್ಯಕರ್ತರು ಒಂದಕ್ಷರ ಹೊರಗೆ ಬಿಡುವುದಿಲ್ಲ.
ವಕ್ಫ್ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿಯೇ 3 ತಂಡಗಳು ಹೋರಾಟ ಪ್ರವಾಸ ಹೊರಟಿವೆ. ಯತ್ನಾಳ್ ಬಣದ ಸದಸ್ಯರಿಗೂ ಸ್ಥಾನ ಕೊಡಲಾಗಿದೆ. ಆದರೆ ಇದರಲ್ಲಿ ಯತ್ನಾಳ್ ತಂಡ ಭಾಗಿಯಾಗುತ್ತಿಲ್ಲ. ಪ್ರತ್ಯೇಕವಾಗಿ ಹೋರಾಟ ಹಮ್ಮಿಕೊಂಡಿರುವ ಯತ್ನಾಳ್ ಗುಂಪು, ಬಗ್ಗೋದೇ ಇಲ್ಲ.. ತಗ್ಗೋದು ಇಲ್ಲ ಎಂಬ ಸಂದೇಶ ಕೊಟ್ಟಿದೆ. ರಾಜ್ಯ ಬಿಜೆಪಿಗೆ ಶಕ್ತಿ ತುಂಬಬೇಕಿದ್ದ ವಕ್ಫ್ ಹೋರಾಟ ಬಿಜೆಪಿಯನ್ನು ಕುಗ್ಗಿಸುತ್ತಿರುವುದು ಮಾತ್ರ ವಿಪರ್ಯಾಸ.
ವಿಜಯೇಂದ್ರ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ ಯತ್ನಾಳ್ ತಂಡದ ವಿರುದ್ಧ ದೂರು ಕೊಡುವ ಸಾಧ್ಯತೆ ಇದೆ. ಬಂಡಾಯಗಾರರ ತಂಡ ನೀಡುತ್ತಿರುವ ಹೇಳಿಕೆಗಳು ಹಾಗೂ ನಡೆಗಳಿಂದ ಯಾವ ರೀತಿಯಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂಬ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು ವರಿಷ್ಠರ ಗಮನಕ್ಕೆ ತರುವ ಸಾಧ್ಯತೆ ಇದೆ.
ಆದರೆ ಇದರ ಪರಿಣಾಮ ಏನಾಗಲಿದೆ ಎಂಬುದು ಮಾತ್ರ ಗೊತ್ತಿಲ್ಲ. ಏಕೆಂದರೆ ಹೈಕಮಾಂಡ್ ನಾಯಕರಿಗೆ ಇದಾವುದೂ ಗೊತ್ತಿಲ್ಲದೇ ಇರುವ ವಿಚಾರ ಅಲ್ಲ. ಆದರೆ ಗೊತ್ತಿದ್ದೂ ಗೊತ್ತಿಲ್ಲದಂತೆ ಇರುವುದೇಕೆ ಎಂಬುದು ವಿಜಯೇಂದ್ರ ಅವರಿಗೆ ಗೊತ್ತಿದ್ದಂತೆ ಇದೆ. ಆದರೆ ಅವರು ಹೇಳುತ್ತಿಲ್ಲ. ವಿಜಯೇಂದ್ರ ಅಧ್ಯಕ್ಷರಾಗುವುದು ಬಿಜೆಪಿ ಹೈಕಮಾಂಡಿಗೆ ಇಷ್ಟ ಇಲ್ಲವಾ.. ಎನ್ನುವುದು ಸದ್ಯಕ್ಕೆ ಉದ್ಭವವಾಗಿರುವ ಪ್ರಶ್ನೆ.
ಅಲ್ಲದೆ ಇನ್ನೊಂದು ದೂರಗಾಮಿ ಆಲೋಚನೆಯೂ ಇದ್ದಂತಿದೆ. ಸದ್ಯಕ್ಕೆ ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ. ಹೀಗಿರುವಾಗ ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಆ ಹೊತ್ತಿಗೆ ವಿಜಯೇಂದ್ರ ಅವರನ್ನು ಸೈಡಿಗೆ ಹಾಕಿದರೆ ಸಿಎಂ ಆಗಬಹುದು ಎಂಬ ದೂರಗಾಮಿ ಆಲೋಚನೆಯೂ ಇದ್ದಂತೆ ಇದೆ.
ಇತ್ತ ಬೆಂಗಳೂರಿನಲ್ಲಿ ವಿಜಯೇಂದ್ರ ಅವರನ್ನು ಬೆಂಬಲಿಸಿ ಸಭೆ ನಡೆದಿದ್ದು, ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ನೇತೃತ್ವದ ಸಭೆಯಲ್ಲಿ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಅಲ್ಲದೆ, ವಕ್ಫ್ ವಿರುದ್ಧದ ಹೋರಾಟ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲೇ ನಡೆಯಬೇಕು ಎಂದು ಒತ್ತಾಯಿಸಲಾಗಿದೆ.
ಯತ್ನಾಳ್ ವಿರುದ್ಧದ ದೂರುಗಳನ್ನು ಈಗಾಗಲೇ ವಿಜಯೇಂದ್ರ ವರಿಷ್ಠರ ಗಮನಕ್ಕೆ ತಂದಿದ್ದರು. ಹಾಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಇದು ರಾಜ್ಯಾಧ್ಯಕ್ಷರ ಬಣದ ಅಸಮಾಧಾನಕ್ಕೂ ಕಾರಣವಾಗಿದೆ. ಬಂಡಾಯಗಾರರ ತಂಡ ನೀಡುತ್ತಿರುವ ಹೇಳಿಕೆಗಳು ಪಕ್ಷದ ಸಂಘಟನೆಯ ಮೇಲೂ ಪರಿಣಾಮ ಬೀರುತ್ತಿದೆ ಎಂಬುವುದು ವಿಜಯೇಂದ್ರ ಬಣದ ಆರೋಪವಾಗಿದೆ.
ಆದರೆ ಹೈಕಮಾಂಡಿಗೆ ರಾಜ್ಯ ಬಿಜೆಪಿ ಗೊಂದಲದಲ್ಲಿದ್ದಷ್ಟೂ ದಿನ ತಾವು ಪ್ರಬಲರಾಗಿರಬಹುದು ಎಂಬ ಲೆಕ್ಕಾಚಾರ. ಈ ಹಿಂದೆ ಯಡಿಯೂರಪ್ಪ ವಿಷಯದಲ್ಲಿ ನಡೆದುಕೊಂಡಿದ್ದ ರೀತಿಯಲ್ಲೆ ಬಿಜೆಪಿ ಹೈಕಮಾಂಡ್ ವರ್ತಿಸುತ್ತಿದೆ ಎಂಬುದು ವಿಜಯೇಂದ್ರ ಜೊತೆಯಲ್ಲಿ ನಿಂತಿರುವ ನಾಯಕರ ಆರೋಪ. ಆದರೆ ಸದ್ಯದ ಮಟ್ಟಿಗೆ ಯತ್ನಾಳ್ ಬಣ ಮೇಲುಗೈ ಸಾಧಿಸಿದೆ ಎನ್ನುವುದು ಮಾತ್ರ ಸತ್ಯ.



