ಬಿಜೆಪಿಯಲ್ಲಿ ಜಗಳ ಮುಗಿದಿಲ್ಲ. ಸದ್ಯಕ್ಕಲ್ಲ.. ಅದು ಮುಗಿಯುವಂತೆ ಕಾಣಿಸುತ್ತಲೇ ಇಲ್ಲ. ವಿಜಯೇಂದ್ರ ಪುನರ್ ಆಯ್ಕೆಯ ಕುರಿತಂತೆ ಚರ್ಚೆಗಳಿನ್ನೂ ಚಾಲ್ತಿಯಲ್ಲಿವೆ. ರೆಬಲ್ಸ್ ಟೀಂ ಸರ್ಕಸ್ ಕೂಡಾ ನಡೆಯುತ್ತಲೇ ಇದೆ. ಯತ್ನಾಳ್, ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಉಚ್ಚಾಟನೆ ನೋಡಿದರೆ.. ಸದ್ಯದ ಮಟ್ಟಿಗೆ ಎಲ್ಲವೂ ವಿಜಯೇಂದ್ರ ಪರವಾಗಿಯೇ ಇದೆ. ಆದರೆ ಕ್ಲೈಮಾಕ್ಸ್ ಟಚ್ ಸಿಕ್ಕಿಲ್ಲ. ಹೀಗಿರುವಾಗಲೇ ಈ ಮಧ್ಯೆ ಒಮ್ಮೆ ಅಮಿತ್ ಶಾ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಆ ವೇಳೆ ಅಮಿತ್ ಶಾ ಮತ್ತು ವಿಜಯೇಂದ್ರ ಮಧ್ಯೆ ಏನಾಯ್ತು.. ಇದು ಯತ್ನಾಳ್ ಅವರು ಹೇಳಿರುವ ಕಥೆ.
ಯತ್ನಾಳ್ ಪ್ರಕಾರ ಅಮಿತ್ ಶಾ ವಿಜಯೇಂದ್ರ ಅವರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಯತ್ನಾಳ್‌ನನ್ನು ಪಕ್ಷದಿಂದ ಹೊರಹಾಕಿದ ನಂತರ ಪಕ್ಷ ಸಂಘಟನೆಯಾಗಿದೆ ಎಂದು ವಿಜಯೇಂದ್ರ ಅಮಿತ್ ಶಾ ಬಳಿ ಹೇಳಿದ್ದಾರೆ. ಅದಕ್ಕೆ ಕೆರಳಿದ ಅಮಿತ್ ಶಾ, ನೀನು ಮತ್ತು ನಿಮ್ಮಪ್ಪ ಹೇಳಿದ್ದಕ್ಕೆ ಯತ್ನಾಳ್‌ನನ್ನು ಹೊರಹಾಕಿದೆವು. ಈಗ ನಿನ್ನ ಜೊತೆ ಯಾರೂ ಇಲ್ಲ, ಎಲ್ಲರೂ ವಿರೋಧ ಮಾಡುತ್ತಿದ್ದಾರಲ್ಲ ಎಂದು ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ‘ಯತ್ನಾಳ್‌ನನ್ನು ಹೊರಹಾಕಿದರೆ 224 ಕ್ಷೇತ್ರಗಳಲ್ಲಿ 300 ಸ್ಥಾನ, 28 ಲೋಕಸಭಾ ಸ್ಥಾನಗಳಲ್ಲಿ 50 ಸ್ಥಾನ ಗೆಲ್ಲಿಸುತ್ತೇನೆ ಎಂದಿದ್ದೆಯಲ್ಲ, ಏನಾಯಿತು?’ ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ. ಇದೆಲ್ಲ ಯತ್ನಾಳ್ ಹೇಳಿದ ಸ್ಟೋರಿ ಮಾತ್ರ.
ಯತ್ನಾಳ್ ಪ್ರಕಾರ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಪಡೆಯುವುದಕ್ಕಾಗಿ ಯಡಿಯೂರಪ್ಪ ಕಣ್ಣೀರು ಹಾಕಿದ್ದರಂತೆ. ತಮ್ಮನ್ನು ಪಕ್ಷದಿಂದ ಹೊರಹಾಕಿದ ಹಿಂದಿನ ರಾಜಕೀಯದ ಕಥೆ ಹೇಳಿದ ಯತ್ನಾಳ್ಎಲ್ಲಿ ಯತ್ನಾಳ್ ರಾಜ್ಯಾಧ್ಯಕ್ಷನಾಗಿ ಬಿಡುತ್ತಾನೋ ಎಂಬ ಭಯದಿಂದ ಯಡಿಯೂರಪ್ಪ ಹಾಗೂ ವಿಜಯೇಂದ್ರ ದೆಹಲಿಗೆ ಹೋಗಿ ಹಠ ಹಿಡಿದರು. ವಿಜಯೇಂದ್ರನನ್ನ ಅಧ್ಯಕ್ಷ ಮಾಡದಿದ್ದರೆ ರಾಜ್ಯದಲ್ಲಿ ತಿರುಗಾಡಲು ಆಗಲ್ಲ ಎಂದು ಯಡಿಯೂರಪ್ಪ ಕಣ್ಣೀರು ಹಾಕಿ ಪಟ್ಟು ಹಿಡಿದು, ನನ್ನನ್ನು ಪಕ್ಷದಿಂದ ಹೊರಹಾಕಿಸಿದರು ಎಂದು ಹೇಳಿಕೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಪದಚ್ಯುತಗೊಳಿಸಬೇಕೆಂಬ ಕೂಗು ಪಕ್ಷದಲ್ಲಿ ತೀವ್ರಗೊಳ್ಳುತ್ತಿರುವಾಗಲೇ , ಉಚ್ಚಾಟಿತ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಆಕ್ಟಿವ್ ಆಗಿದ್ದು, ದಿನಕ್ಕೊಂದು ಹೇಳಿಕೆ ಕೊಡ್ತಿದ್ದಾರೆ. ವಿಜಯೇಂದ್ರ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿರುವ ಯತ್ನಾಳ್ ʻʻವಿಜಯೇಂದ್ರನಿಗೆ ದುರಹಂಕಾರ, ಹಿರಿಯರಿಗೆ ಗೌರವವಿಲ್ಲದ ನಡವಳಿಕೆ. ಅಧ್ಯಕ್ಷನಾದ ನಂತರ ಸರ್ಕಾರದ ವಿರುದ್ಧ ಹೋರಾಟ ರೂಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯಬೇಕೆಂಬುದೇ ಎಲ್ಲರ ಗುರಿ. ಒಂದೇ ಗುರಿ. ಅವರ ಕುರಿತು ಚರ್ಚೆ ಹೆಚ್ಚಾಗುತ್ತಿದೆ ಎಂದರೆ ಅವರ ಮೇಲಿನ ವಿರೋಧ ಹೆಚ್ಚಾಗಿದೆ ಎಂದರ್ಥ. ವಿಜಯೇಂದ್ರ ಅವರಲ್ಲಿ ದುರಹಂಕಾರ ತುಂಬಿದೆ, ಹಿರಿಯರ ಬಗ್ಗೆ ಗೌರವವಿಲ್ಲ. ಎಲ್ಲವೂ ನನ್ನ ತಂದೆಯವರೇ ಮಾಡಿದ್ದಾರೆ ಎನ್ನುತ್ತಾರೆ. ಪೂಜ್ಯ ತಂದೆಯವರದ್ದು ಮುಗಿದಿದೆ, ನಿನ್ನ ಸಾಧನೆ ಏನು ಎಂದು ಹೇಳುʼʼ ಎಂದಿದ್ದಾರೆ.
ಈ ಮಧ್ಯೆ ಈಶ್ವರಪ್ಪ ಮತ್ತು ವಿಜಯೇಂದ್ರ ಬಗ್ಗೆ ಮಾತನಾಡಿರುವ ಯತ್ನಾಳ್ ನನಗೆ ಎಲ್ಲರ ನೆಲೆ ಗೊತ್ತು. ಆದರೆ ಈ ಈಶ್ವರಪ್ಪನ ನೆಲೆ ಮಾತ್ರ ಅರ್ಥ ಆಗಿಲ್ಲ ಎಂದು ಹೇಳಿದ್ದಾರೆ.



