ಬಸನಗೌಡ ಪಾಟೀಲ ಯತ್ನಾಳ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಡುವಿನ ಸಮರ ವರ್ಷಗಳಿಂದಲೂ ನಡೆಯುತ್ತಲೇ ಇದೆ. ಪರಿಹಾರ ನೀಡಬೇಕಿದ್ದ ಹೈಕಮಾಂಡ್ ನಾಯಕರೆಲ್ಲ ಸುಮ್ಮನೆ ಕುಳಿತಿದ್ದಾರೆ. ಹೀಗಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಹೊಸ ವರ್ಷದ ಶುಭಾಶಯ ತಿಳಿಸಿ 20 ನಿಮಿಷ ಮೀಟಿಂಗ್ ಮಾಡಿದ್ದಾರೆ. 20 ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ವಿಜಯೇಂದ್ರ ಅವರು ರಾಜ್ಯದ ಪ್ರಸಕ್ತ ಬೆಳವಣಿಗೆಗಳನ್ನು ಸವಿಸ್ತಾರವಾಗಿ ಮುಂದಿಟ್ಟಿದ್ದಾರೆ.
ವಿಜಯೇಂದ್ರ ಅವರು ಈ ಮಾತುಕತೆ ವೇಳೆ ಯತ್ನಾಳ ಬಣದ ಈ ಚಟುವಟಿಕೆಗಳಿಂದ ಪಕ್ಷದ ಕಾರ್ಯಕರ್ತರಲ್ಲೂ ಗೊಂದಲ ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ, ಬಿಬಿಎಂಪಿ ಚುನಾವಣೆ ಎದುರಾಗುವುದರಿಂದ ಪಕ್ಷ ಸಂಘಟನೆ ಬಲಪಡಿಸಬೇಕಾಗಿದೆ. ಎಲ್ಲ ನಾಯಕರೂ ಪಕ್ಷದ ಶಿಸ್ತಿಗೆ ಒಳಪಟ್ಟು ಕೆಲಸ ಮಾಡುವಂತಾಗಬೇಕು. ಪಕ್ಷದ ನಾಯಕತ್ವವನ್ನು ಮೀರಿ ತಮ್ಮದೇ ಹಾದಿ ತುಳಿದರೆ ಅದು ದೊಡ್ಡ ಹೊಡೆತ ನೀಡಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ ಇದರ ಬಗ್ಗೆ ಎಲ್ಲವನ್ನೂ ಕೇಳಿಸಿಕೊಂಡಿರುವ ಅಮಿತ್ ಶಾ ಪರಿಶೀಲಿಸೋಣ ಎಂದಿದ್ದಾರಂತೆ. ದೆಹಲಿ ನಾಯಕರು ಬೆಂಗಳೂರಿಗೆ ಬಂದು ಹೋಗಿ, ವರದಿ ನೀಡಿದ ನಂತರ, ಯತ್ನಾಳ್ ಅವರನ್ನು ದೆಹಲಿಗೆ ಕರೆಸಿಕೊಂಡ ನಂತರವೂ ʻಪರಿಶೀಲನೆ ಮಾಡೋಣʼ ಅಂದರೆ ಅದರ ಅರ್ಥ ಅಮಿತ್ ಶಾ ಕೂಡಾ ಯತ್ನಾಳ್-ವಿಜಯೇಂದ್ರ ಸಮರದ ಬಗ್ಗೆ ಸೀರಿಯಸ್ ಆಗಿಲ್ಲ ಎಂದೇ ಆಗುತ್ತದೆ. ಇದು ವಿಜಯೇಂದ್ರ ಅವರನ್ನು ನಿರಾಸೆಗೆ ದೂಡಿದೆಯಾದರೂ ಹೊರಗೆ ಹೇಳಿಕೊಳ್ಳುವಂತಿಲ್ಲ.
ಮಾತುಕತೆ ನಂತರ ವಿಜಯೇಂದ್ರ ‘ದಿಟ್ಟ ಗೃಹ ಸಚಿವ ಅಮಿತ್ ಶಾ ಅವರನ್ನು ನೂತನ ಕ್ಯಾಲೆಂಡರ್‌ಹೊಸ ವರ್ಷದ ದಿನವಾದ ಬುಧವಾರ ಭೇಟಿಯಾಗಿ ಶುಭಾಶಯ ಕೋರಿ ಆಶೀರ್ವಾದ ಪಡೆಯಲಾಯಿತು’ ಎಂದು ತಿಳಿಸಿದ್ದಾರೆ. ‘ಕರ್ನಾಟಕದಲ್ಲಿ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದೀಚೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಕಾಂಗ್ರೆಸ್ ಆಡಳಿತದ ಪರಿಣಾಮವಾಗಿ ಪ್ರಸ್ತುತ ರಾಜ್ಯದಲ್ಲಿ ಉದ್ಭವಿಸಿರುವ ಅನೇಕ ಸಮಸ್ಯೆಗಳು, ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧದ ಆರೋಪಗಳ ಕುರಿತು ಹಾಗೂ ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಬಲವೃದ್ಧಿಗೊಳಿಸಲು ಯೋಜಿಸಿರುವ ಕಾರ್ಯಕ್ರಮಗಳ ಕುರಿತು ವಿವರಿಸಿ ಸೂಕ್ತ ಮಾರ್ಗದರ್ಶನ ಕೋರಲಾಯಿತು’ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ.
ಅಮಿತ್ ಶಾ – ವಿಜಯೇಂದ್ರ ಮೀಟಿಂಗ್ ವೇಳೆ ರೆಬೆಲ್ ಟೀಮ್ ನ ಎರಡನೇ ಹಂತದ ಪ್ರತ್ಯೇಕ ಹೋರಾಟ, ಜನವರಿ 4 ರಿಂದ ಬಳ್ಳಾರಿಯಿಂದ ಪ್ರತ್ಯೇಕ ವಕ್ಪ್ ಹೋರಾಟಕ್ಕೆ ಕಾರ್ಯತಂತ್ರ ರೂಪಿಸಿರುವ ಯತ್ನಾಳ್ ಟೀಮ್ ಬಗ್ಗೆ ದೂರು ನೀಡಿದ್ದಾರೆ. ಆದರೆ ಅದಕ್ಕೆ ಬ್ರೇಕ್ ಹಾಕುವ ಅಥವಾ ಎಚ್ಚರಿಕೆ ನೀಡುವ ಯಾವ ಭರವಸೆಯೂ ಅಮಿತ್ ಶಾ ಅವರಿಂದ ಸಿಕ್ಕಿಲ್ಲ. ಅಮಿತ್ ಶಾ ಅವರು, ಅಂತಿಮವಾಗಿ ನೀವು ನಿಮ್ಮ ಕೆಲಸ ಮಾಡಿ ಎಂದು ಅಮಿತ್ ಶಾ ಅವರು ಸಲಹೆ ನೀಡಿದ್ದಾರೆ. ಇನ್ನೂ ಜನವರಿ ಅಂತ್ಯದ ವೇಳೆಗೆ ರಾಜ್ಯಾಧ್ಯಕ್ಷರ ಬದಲಾವಣೆಯಾಗಲಿದೆ ಎಂಬ ಚರ್ಚೆ ನಡೆಯುತ್ತಿದ್ದ ನಡುವೆ ಅಮಿತ್ ಶಾ ಹಾಗೂ ವಿಜಯೇಂದ್ರ ಭೇಟಿ ಮಹತ್ವ ಎನಿಸಿಕೊಂಡಿದೆ.



