ವಿಜಯಲಕ್ಷ್ಮಿ ದರ್ಶನ್ ಕೇಸ್ ಕಾನೂನು ನೆರವು ಕೇಳಲೇ ಇಲ್ಲ ಹೀಗಂತ ಹೇಳಿರೋದು ಡಿಕೆ ಶಿವಕುಮಾರ್. ನಂಬಬಹುದಾ ಅನ್ನೋದು ಪ್ರಶ್ನೆ. ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ರೇಣುಕಾ ಸ್ವಾಮಿ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಿದ್ಧವಾಗುತ್ತಿರುವ ಹೊತ್ತಿನಲ್ಲಿಯೇ ವಿಜಯಲಕ್ಷ್ಮಿ ದರ್ಶನ್ ಅವರು ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ ಜೈಲು ಸೇರಿದ್ದು, ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ತನಿಖಾಧಿಕಾರಿಗಳು ಚಾರ್ಜ್ ಶೀಟ್ ಸಿದ್ಧಪಡಿಸುತ್ತಿದ್ದಾರೆ. ಈ ಸಮಯದಲ್ಲಿಯೇ ವಿಜಯಲಕ್ಷ್ಮಿ ದರ್ಶನ್ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ದರ್ಶನ್ ಸಹೋದರ ದಿನಕರ್ ತೂಗುದೀಪ ಹಾಗೂ ಜೋಗಿ ಪ್ರೇಮ್ ಸಹ ಡಿಕೆಶಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ವಿಚಾರವಾಗಿ ಚರ್ಚಿಸಲೆಂದೇ ವಿಜಯಲಕ್ಷ್ಮಿ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ ಎನ್ನಲಾಗಿತ್ತು. ಆದರೆ ಭೇಟಿಯ ಬಳಿಕ ಮಾತನಾಡಿರುವ ಶಿವಕುಮಾರ್ ಕೊಲೆ ಪ್ರಕರಣ ಹಾಗೂ ಕಾನೂನು ನೆರವು ಕೇಳುವ ಬಗ್ಗೆ ಮಾತೇ ಆಡಿಲ್ಲ. ಅವರು ಕೇಳಲೂ ಇಲ್ಲ ಎಂದು ಹೇಳಿದ್ದಾರೆ.
ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ರಾಮನಗರಕ್ಕೆ ಹೋಗಿದ್ದಾಗ ಅಲ್ಲಿ ಭೇಟಿ ಮಾಡಲು ಬಂದಿದ್ದರು. ಅಲ್ಲಿ ಭೇಟಿ ಮಾಡೋಕೆ ಆಗಲಿಲ್ಲ, ನಾಳೆ ಮನೆಗೇ ಬನ್ನಿ ಅಂತ ಹೇಳಿದ್ದೆ. ಹಾಗಾಗಿ ಬಂದಿದ್ದರು. ಅವರ ಮಗ ವಿನೀಷ್ ನಮ್ಮ ಶಾಲೆಯಲ್ಲಿ ಓದುತ್ತಿದ್ದ, ಆ ನಂತರ ಬೇರೆ ಶಾಲೆಗೆ ಸೇರಿಸಿದ್ದರು. ಈಗ ಮತ್ತೆ ನಮ್ಮ ಶಾಲೆಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ನಾನು ಫ್ರಿನ್ಸಿಫಲ್ ಗೆ ಹೇಳುತ್ತೇನೆ ಎಂದು ಭರವಸೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ರಾಮನಗರ ಉತ್ಸವದಲ್ಲಿ ದರ್ಶನ್ ಅಭಿಮಾನಿಗಳು ಡಿಕೆ ಶಿವಕುಮಾರ್ ಅವರಿಗೆ ಮಾತನಾಡಲೂ ಬಿಡದೆ ಡಿ ಬಾಸ್ ಡಿ ಬಾಸ್ ಎಂದು ಕೂಗಿ ಕಾಡಿದ್ದರು. ಅದನ್ನೂ ಹೇಳಿದ ಡಿಕೆ ಶಿವಕುಮಾರ್ ವೇದಿಕೆಯ ಮೇಲೆ ಹೇಳಿದ್ದ ಮಾತನ್ನೇ ಪುನರುಚ್ಚರಿಸಿದ್ದಾರೆ.
ಹೆಣ್ಣು ಮಗಳು ಏನಾದರೂ ಅನ್ಯಾಯ ಆಗಿದ್ರೆ ಅವರಿಗೆ ಸಹಾಯ ಮಾಡಿರುತ್ತಿದ್ದೆ. ಆದರೆ ಈಗ ಕಾನೂನು ಕ್ರಮ ನಡೆಯುತ್ತಿದೆ. ಇಂಥಹಾ ಸಮಯದಲ್ಲಿ ಮಧ್ಯೆ ಪ್ರವೇಶ ಮಾಡಲು ಆಗುವುದಿಲ್ಲ. ಕಾನೂನು ಚೌಕಟ್ಟು ಅಡಿ ಏನಾದರೂ ಮಾಡೋಣ ಅಂತ ನಿನ್ನೆ ಹೇಳಿದ್ದೆ, ಹುಡುಗರು ನಿನ್ನೆ ಒತ್ತಾಯ ಮಾಡಿದ್ದರು. ನಾನು ಈ ವಿಚಾರದಲ್ಲಿ ಮಧ್ಯ ಬರೋದಿಲ್ಲ. ಪೊಲೀಸ್ ತನಿಖೆಯಲ್ಲಿ ತಲೆ ತೂರಿಸುವುದಕ್ಕೆ ಆಗಲ್ಲ ಎಂದು ಹೇಳಿದ್ದೆ ಎನ್ನುವುದು ಡಿಕೆಶಿ ಮಾತು.
ವಿಜಯಲಕ್ಷ್ಮಿಯವರಾಗಲೀ, ದಿನಕರ್ ಅವರಾಗಲೀ ಮಾಧ್ಯಮಗಳ ಜೊತೆ ಮಾತನಾಡಿಲ್ಲ. ಆದರೆ, ಜೊತೆಯಲ್ಲಿದ್ದ ಪ್ರೇಮ್ ದರ್ಶನ್ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ಭೇಟಿ ಮಾಡೋಕೆ ಬಂದಿದ್ದಾರೆ. ದರ್ಶನ್ ಮಗ ವಿನೀಶ್ ಸ್ಕೂಲ್ ವಿಚಾರ ಮಾತಾಡೋಕೆ ಬಂದಿದ್ದರು. ನನ್ನ ಮಗ ಅವರ ಮಗ ಇಬ್ಬರು ಒಂದೇ ಕಡೆ ಓದುತ್ತಾ ಇದ್ದರು. ಆದರೆ ಅವರು ಬೇರೆ ಶಾಲೆಗೆ ಮಗನನ್ನು ಶಿಫ್ಟ್ ಮಾಡಿಸಿದ್ದರು. ಈಗ ಮತ್ತೆ ಶಾಲೆಗೆ ಸೇರಿಸಬೇಕಂತೆ ಅದನ್ನೇ ಕೇಳಲು ಬಂದಿದ್ದಾರೆ’ ಎಂದಿದ್ದಾರೆ.
ಆದರೆ ಶಾಲೆಗೆ ಸೇರಿಸುವ ವಿಷಯ ಮಾತನಾಡುವುದಕ್ಕೆ ಉಪಮುಖ್ಯಮಂತ್ರಿ ಮನೆಗೆ ಖುದ್ದಾಗಿ ಬರುವ ಅಗತ್ಯ ಇತ್ತಾ ಎನ್ನುವುದು ಎಲ್ಲರ ಅನುಮಾನ. ಅಲ್ಲದೆ, ಸ್ವತಃ ಡಿಕೆ ಶಿವಕುಮಾರ್ ವೇದಿಕೆಯಲ್ಲಿ ‘ಕಾನೂನು ಅಡಿಯಲ್ಲಿ ಸಹಾಯ ಮಾಡುವುದಾದರೆ ನೋಡೋಣ’ ಎಂಬ ಭರವಸೆ ಕೊಟ್ಟಿದ್ದೆ ಎಂದು ಸಹ ಹೇಳಿದ್ದ ಹಿನ್ನೆಲೆಯಲ್ಲಿ ಭೇಟಿಯ ಸುತ್ತ ಅನುಮಾನಗಳು ವ್ಯಕ್ತವಾಗಿವೆ. ಚಾರ್ಜ್ ಶೀಟ್ ತಯಾರಾಗುತ್ತಿರುವ ಹೊತ್ತಿನಲ್ಲಿ ಡಿಸಿಎಂ ಭೇಟಿ ಕುತೂಹಲ ಹುಟ್ಟಿಸಿರುವುದಂತೂ ಸತ್ಯ.
ಮೂಲಗಳ ಪ್ರಕಾರ (ಅಥವಾ ಊಹೆಗಳ ಪ್ರಕಾರ) ದರ್ಶನ್ ಅವರ ವಿರುದ್ಧ ಚಾರ್ಜ್ʻಶೀಟ್ ಫೈಲ್ ಆಗುವವರೆಗೆ ಜಾಮೀನಿಗೆ ಅರ್ಜಿ ಹಾಕಲಾಗುತ್ತಿಲ್ಲ. ಜಾಮೀನಿಗೆ ಮನವಿ ಮಾಡಿದರೂ ಪುರಸ್ಕೃತವಾಗುವುದಿಲ್ಲ. ಹೀಗಾಗಿ ಎಷ್ಟು ಬೇಗ ಚಾರ್ಜ್ʻಶೀಟ್ ಹಾಕುವುದಕ್ಕೆ ಸಾಧ್ಯವಿದೆಯೋ.. ಅಷ್ಟೂ ಬೇಗ ಹಾಕಿ ಎನ್ನುವ ಮನವಿ ವಿಜಯಲಕ್ಷ್ಮಿ ಅವರದ್ದು. ಏಕೆಂದರೆ ವಕೀಲರ ಜೊತೆ ಸಂಪರ್ಕದಲ್ಲಿರುವುದು ವಿಜಯಲಕ್ಷ್ಮಿ ಮತ್ತು ದಿನಕರ್. ಇನ್ನು ಡಿಕೆ ಶಿವಕುಮಾರ್ ಅವರ ಭೇಟಿ ವೇಳೆ ಪ್ರೇಮ್ ಬರುವುದಕ್ಕೂ ಕಾರಣ ಇದೆ.
ದರ್ಶನ್ ಅವರ ಆಪ್ತರು ಎನ್ನುವವರಲ್ಲಿ ರಾಜಕಾರಣಿಗಳಿದ್ದಾರಾದರೂ.. ಡಿಕೆ ಶಿವಕುಮಾರ್ ಜೊತೆ ʻಅವರೆಲ್ಲರʼ ಸಂಬಂಧ ಅಷ್ಟಕ್ಕಷ್ಟೆ. ಆದರೆ.. ಪ್ರೇಮ್ ಅವರಿಗೆ ಡಿಕೆ ಶಿವಕುಮಾರ್ ಜೊತೆ ಒಳ್ಳೆಯ ಸಂಪರ್ಕ ಮತ್ತು ಸಂಬಂಧ ಇದೆ. ಹೀಗಾಗಿ ಪ್ರೇಮ್ ಅವರ ಮೂಲಕ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ ವಿಜಯಲಕ್ಷ್ಮಿ ದರ್ಶನ್.



