ರೇಣುಕಾ ಸ್ವಾಮಿ ಮರ್ಡರ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಹಾಗೂ ತನ್ನಿಡೀ ಗ್ಯಾಂಗ್ ಜೊತೆ ಜೈಲಲ್ಲಿದ್ದಾರೆ. ಚಿತ್ರರಂಗದಲ್ಲಿ ರಚಿತಾ ರಾಮ್, ಭಾವನಾ ರಾಮಣ್ಣ, ವಿನೋದ್ ಪ್ರಭಾಕರ್ ಅವರಂತಹ ಕೆಲವೇ ಕೆಲವರನ್ನು ಹೊರತುಪಡಿಸಿದರೆ, ದರ್ಶನ್ʻಗೂ ನ್ಯಾಯ ಸಿಗಲಿ ಎಂದವರ ಸಂಖ್ಯೆ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದೇ ಹೇಳಬೇಕು. ದರ್ಶನ್ ಅವರನ್ನು ಅಮ್ಮ ಮೀನಾ ಅವರಾಗಲೀ, ತಮ್ಮ ದಿನಕರ್ ಆಗಲೀ ಕೂಡಾ ಭೇಟಿ ಮಾಡಿಲ್ಲ. ಜೊತೆಯಲ್ಲಿರುವುದು ಪತ್ನಿ ವಿಜಯಲಕ್ಷ್ಮಿ ಅವರು ಮಾತ್ರ. ಸೆಂಟ್ರಲ್ ಜೈಲಿನಲ್ಲಿರುವ ಪತಿ ದರ್ಶನ್‌ರನ್ನು ಭೇಟಿಯಾಗಿ, ಮಾತನಾಡಿಸಿಕೊಂಡು ಬಂದಿರುವ ವಿಜಯಲಕ್ಷ್ಮಿ ಅವರು, ಅಭಿಮಾನಿಗಳಿಗೆ ಮೆಸೇಜ್ ಕೊಟ್ಟಿದ್ದಾರೆ.
“ದರ್ಶನ್ ಅವರಿಗೆ ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ ಸೆಲೆಬ್ರಿಟಿಗಳನ್ನು ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ. ಇದೊಂದು ಪರೀಕ್ಷೆಯ ಸಮಯ. ನನಗೆ, ನಿಮಗೆ, ನಮ್ಮೆಲ್ಲರಿಗೆ.. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದ ಇರೋಣ..”
ಇದು ವಿಜಯಲಕ್ಷ್ಮಿ ಅವರು ಇನ್ಸ್‌ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್. “ನಿಮ್ಮ ಆತಂಕವನ್ನು ದರ್ಶನ್ ಅವರಿಗೆ ನಾನು ತಲುಪಿಸಿದ್ದೇನೆ. ನಾನು ಹೊರಗಿನ ಪರಿಸ್ಥಿತಿಯ ಬಗ್ಗೆ ವಿವರವಾಗಿ ಮಾತನಾಡಿದ್ದೇನೆ. ಅವರೂ ನಿಮ್ಮ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಎಲ್ಲಾ ಸೆಲೆಬ್ರಿಟಿಗಳಿಗೆ ಶಾಂತವಾಗಿರಲು ಮತ್ತು ಒಳ್ಳೆಯ ಕಾರ್ಯಗಳನ್ನು ಮಾಡುವತ್ತ ಗಮನಹರಿಸಲು ಹೇಳಿದ್ದಾರೆ” ಎಂದು ವಿಜಯಲಕ್ಷ್ಮಿ ದರ್ಶನ್ʻರ ಸೆಲಬ್ರಿಟಿಗಳಿಗೆ ಮನವಿ ಮಾಡಿದ್ದಾರೆ.
“ನಮ್ಮ ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ಅಪಾರ ನಂಬಿಕೆ ಇದೆ. ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನ್ ಅವರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ.. ಸತ್ಯಮೇವ ಜಯತೆ..” ಎನ್ನುವ ಮೂಲಕ ಪೋಸ್ಟ್ ಕಂಪ್ಲೀಟ್ ಮಾಡಿದ್ದಾರೆ ವಿಜಯಲಕ್ಷ್ಮಿ.
ಅಂದಹಾಗೆ ಈ ಘಟನೆ ನಡೆದಿದ್ದು ವಿಜಯಲಕ್ಷ್ಮಿ ಅವರಿಗಾಗಿ ಅಲ್ಲ, ಗೆಳತಿ ಪವಿತ್ರಾ ಗೌಡ ಅವರಿಗಾಗಿ.ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮತ್ತು ಫೋಟೋಗಳನ್ನು ಕಳುಹಿಸಿದ ಆರೋಪದಲ್ಲಿ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡು, ಈತನ ಮೇಲೆ ಪಟ್ಟಣಗೆರೆ ಶೆಡ್‌ನಲ್ಲಿ ಹಲ್ಲೆ ಮಾಡಲಾಗಿತ್ತು. ನಂತರ ಆತ ಮೃತಪಟ್ಟಿದ್ದ. ಈ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ 1ನೇ ಆರೋಪಿಯಾದರೆ, ನಟ ದರ್ಶನ್ ಎರಡನೇ ಆರೋಪಿ.
ಇಷ್ಟೆಲ್ಲ ಹೇಳಿದ ವಿಜಯಲಕ್ಷ್ಮಿ ಅವರಿಗೆ ದರ್ಶನ್ ಅಭಿಮಾನಿಗಳೇ ಧೈರ್ಯ ತುಂಬಿದ್ದಾರೆ. ದರ್ಶನ್ ಮಾಡಿದ್ದಾರೆ ಎನ್ನಲಾದ ಕೊಲೆಯನ್ನೂ ಸಮರ್ಥನೆ ಮಾಡಿಕೊಳ್ಳುವವರೂ ಇದ್ದಾರೆ. ಅಂತಹ ಅತಿರೇಕಕ್ಕೆ ಹೋಗದೆ, ದರ್ಶನ್ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ ಫ್ಯಾನ್ಸ್. ದರ್ಶನ್ ಅವರಿಗೆ ಶಿಕ್ಷೆಯಾಗಲಿ, ಆದರೆ, ಬೇಗ ಶಿಕ್ಷೆ ಮುಗಿಸಿ ಹೊರಬರಲಿ. ದರ್ಶನ್ ಅವರ ಲೈಫ್ ಸ್ಟೈಲ್ ಬದಲಾಗಲಿ. ದರ್ಶನ್ ಅವರಿಗೆ ಶಾಂತ ಮನೋಭಾವ ಬರಲಿ ಎಂದು ಕೂಡಾ ಕೆಲವರು ಹಾರೈಸಿದ್ದಾರೆ. ಇದೇ ವೇಳೆ ತಿಕ್ಕಲು ತಿಕ್ಕಲಾಗಿ ಆಡುತ್ತಿರುವ ಹುಚ್ಚು ಅಭಿಮಾನಿಗಳಿಗೂ ಬಾಯ್ ಮುಚ್ಚಿಕೊಂಡಿರಿ ಎಂದು ಹೇಳಿದ ಅಭಿಮಾನಿಗಳೂ ಇದ್ದಾರೆ.



