ವಿಜಯ್ ಮಲ್ಯ. ಒನ್ಸ್ ಅಪಾನ್ ಎ ಟೈಂ ಕಿಂಗ್ ಆಫ್ ಗುಡ್ ಟೈಮ್ಸ್. ದೇಶ ಬಿಟ್ಟು ಓಡಿ ಹೋಗಿರೋ ವಿಜಯ್ ಮಲ್ಯ, ಸದ್ಯಕ್ಕೆ ಲಂಡನ್ನಿನಲ್ಲಿ ಬದುಕ್ತಾ ಇರೋ ವ್ಯಕ್ತಿ. ಇತ್ತೀಚೆಗೆ ದೇಶ ಬಿಟ್ಟು ಹೋದ 9 ವರ್ಷಗಳ ನಂತರ ಯೂಟ್ಯೂಬ್ ಚಾನೆಲ್ಲೊಂದಕ್ಕೆ ಮಾತನಾಡಿರುವ ಮಲ್ಯ ʻನನ್ನನ್ನು ಕಳ್ಳ ಎನ್ನಬೇಡಿ. ನಾನು ಮೋಸವನ್ನೇ ಮಾಡಿಲ್ಲ. ಚೋರ್ ಚೋರ್ ಎಂದು ಕರೆದು ಅವಮಾನ ಮಾಡಬೇಡಿ. ನಾನು ಮಾಡಿದ್ದ ಸಾಲ 6 ಸಾವಿರ ಕೋಟಿ. ನೋಡಿ, ನಾನು 14 ಸಾವಿರ ಕೋಟಿ ಸಾಲ ತೀರಿಸಿದ್ದೇನೆ. ನಾನು ಮಾಡಿದ್ದ ಸಾಲಕ್ಕಿಂತ ಜಾಸ್ತಿ ದುಡ್ಡು ಕಿತ್ಕೊಂಡಿದ್ದಾರೆ ಮೋದಿʼ ಎಂದೆಲ್ಲ ಮಾತನಾಡಿದ್ದರು.
ವಿಜಯ್ ಮಲ್ಯ ಹೇಳಿದ್ದು ಅರ್ಧ ಸತ್ಯ.. ಅರ್ಧ ಸುಳ್ಳು :
ವಿಜಯ್ ಮಲ್ಯ ಸಾಲ ಪಡೆದಿದ್ದಾರೆ. ಆದರೆ ಇನ್ನೂ ತೀರಿಸಿಲ್ಲ. 9 ಸಾವಿರ ಕೋಟಿಗೆ 14 ಸಾವಿರ ಕೋಟಿ ಕಟ್ಟಿದ್ದಾರೆ ಎನ್ನುವುದೇನೋ ಸರಿ. ಆದರೆ ಬಡ್ಡಿ, ಚಕ್ರಬಡ್ಡಿಯನ್ನೂ ಲೆಕ್ಕ ಹಾಕ್ಬೇಕಲ್ವಾ.. ಕಿಂಗ್ ಫಿಷರ್ ಏರ್ ಲೈನ್ಸ್ 2013ರ ಜೂನ್ನಲ್ಲಿ 6,848 ಕೋಟಿ ರೂಪಾಯಿ NPA ಮಾಡ್ಕೊಂಡಿದೆ. ಈ ಹಣಕ್ಕೆ ವಿಜಯ್ ಮಲ್ಯ 2025ರ ಜೂನ್ 10ಕ್ಕೆ ಸಾಲ ಮತ್ತು ಬಡ್ಡಿ, ಚಕ್ರಬಡ್ಡಿ ಸೇರಿ ಒಟ್ಟಾರೆ ಮೊತ್ತ 17,781 ಕೋಟಿ ರೂ ಆಗಿದೆ. ಇದರಲ್ಲಿ ಬ್ಯಾಂಕ್ಗಳು 10, 815 ಕೋಟಿ ರೂಪಾಯಿ ಹಣವನ್ನು ವಿಜಯ ಮಲ್ಯರಿಂದ ವಸೂಲಿ ಮಾಡಿಕೊಂಡಿವೆ. ಇನ್ನೂ 6,997 ಕೋಟಿ ರೂಪಾಯಿ ಸಾಲದ ಹಣ ವಸೂಲಿ ಬಾಕಿ ಇದೆ. ಅಂದರೆ ಅದೂ ಮಲ್ಯ ಕಟ್ಟಿರೋ ಹಣ ಅಲ್ಲ. ಮಲ್ಯ ಅವರಿಗೆ ಸೇರಿದ್ದ ಕೆಲವು ಆಸ್ತಿಗಳನ್ನು ಜಪ್ತಿ ಮಾಡ್ಕೊಂಡು ಹರಾಜು ಹಾಕಿದ್ರಿಂದ ಬಂದಿರೋ ಹಣ. ಕೋರ್ಟ್ಗಳು ಸಾಲಕ್ಕೆ ಶೂರಿಟಿಯಾಗಿ ನೀಡಿದ್ದ ಆಸ್ತಿಗಳನ್ನು ಹರಾಜು ಹಾಕಲು ಆದೇಶ ನೀಡಿವೆ. ಹೀಗಾಗಿ ಗೋವಾದ ಕಿಂಗ್ ಫಿಷರ್ ವಿಲ್ಲಾ, ಮುಂಬೈ ಕಿಂಗ್ ಫಿಷರ್ ಹೌಸ್ ಸೇರಿದಂತೆ ಬೇರೆ ಬೇರೆ ಆಸ್ತಿಗಳನ್ನು ಹರಾಜು ಹಾಕಿ ಸಾಲದ ಹಣ ವಸೂಲಿ ಮಾಡಿಕೊಳ್ಳಲಾಗಿದೆ. ಆದರೆ ಇನ್ನೂ ಸಂಪೂರ್ಣ ಸಾಲ, ಬಡ್ಡಿ, ಚಕ್ರ ಬಡ್ಡಿ, ದಂಡ ಪಾವತಿಯಾಗಿಲ್ಲ ಎಂದು ಬ್ಯಾಂಕ್ಗಳು ಹೇಳುತ್ತಿವೆ.
ವಿಜಯ ಮಲ್ಯ ಯಾವ್ಯಾವ ಬ್ಯಾಂಕ್ಗಳಿಂದ ಸಾಲ ಪಡೆದಿದ್ದರು. ಎಷ್ಟು ಸಾಲ ಮರು ಪಾವತಿಸಿದ್ದಾರೆ. ಇನ್ನೂ ಎಷ್ಟು ಸಾಲ ಮರುಪಾವತಿ ಬಾಕಿ ಕೊಡಬೇಕಿದೆ ಅನ್ನೋ ಲೆಕ್ಕ ಇಲ್ಲಿದೆ.
SBI – 5,208 ಕೋಟಿ ರೂ – 3,174 ಕೋಟಿ ರೂ
PNB – 3,084 ಕೋಟಿ ರೂ – 1,910 ಕೋಟಿ ರೂ
IDBI – 2,390 ಕೋಟಿ ರೂ – 1,375 ಕೋಟಿ ರೂ
BIO – 1,759 ಕೋಟಿ ರೂ – 1,034 ಕೋಟಿ ರೂ
BIB – 1,580 ಕೋಟಿ ರೂ – 994 ಕೋಟಿ ರೂ
OTH – 3,760 ಕೋಟಿ ರೂ – 2,327 ಕೋಟಿ ರೂ
ಒಟ್ಟು 17,781 ಕೋಟಿ ರೂ – 10,814 ಕೋಟಿ ರೂ
ಹೀಗೆ ವಿಜಯ ಮಲ್ಯರಿಂದ ಇದುವರೆಗೂ 10 ಸಾವಿರದ 814 ಕೋಟಿ ರೂಪಾಯಿ ಸಾಲ ಮಾತ್ರ ವಸೂಲಿಯಾಗಿದೆ. ಇನ್ನೂ 6 ಸಾವಿರದ 997 ಕೋಟಿ ರೂಪಾಯಿ ಸಾಲ ವಸೂಲಿ ಬಾಕಿ ಇದೆ ಎಂದು ಬ್ಯಾಂಕ್ಗಳು ಹಾಗೂ ಕೇಂದ್ರ ಸರ್ಕಾರ ಹೇಳುತ್ತಿವೆ. ಅಂದ್ರೆ ಯಾವ ಬ್ಯಾಂಕಿಗೂ ಕೂಡಾ ಪೂರ್ತಿ ಹಣ ಮರುಪಾವತಿ ಆಗಿಯೇ ಇಲ್ಲ. ಒಬ್ಬ ಕಳ್ಳ ಉದ್ಯಮಿಯ ಮಾತೇ ಪರಮ ಸತ್ಯ ಎಂದುಕೊಳ್ಳುವವರ ಪಾಲಿಗೆ ಇದು ಅರ್ಥವಾಗಬೇಕು.